ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಕೋಮು ಗಲಭೆ ಸೃಷ್ಟಿಸುವ ಬಿಜೆಪಿಯ ಸಂಚು ಪೊಲೀಸರಿಂದ ಬಹಿರಂಗ: ಎಂ.ಲಕ್ಷ್ಮಣ್ ಆರೋಪ

Update: 2022-07-26 08:44 GMT

ಮೈಸೂರು: 'ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಹಿಂದೂ ಮುಸ್ಲಿಮ್ ಗಲಭೆ ಸೃಷ್ಟಿಸಲು ಬಿಜೆಪಿ ಸಂಚು ರೂಪಿಸಿದ್ದು, ಬಿಜೆಪಿ ಕಾರ್ಯಕರ್ತನೊಬ್ಬ ಮುಸ್ಲಿಮ್ ಯುವಕನೊಬ್ಬನ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಕೊಡಗಿನ ಮಹಿಳೆಯರ ಮೈಸೂರು- ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಹಿಂದೂ ಮುಸ್ಲಿಮ್ ಗಲಭೆ ಸೃಷ್ಟಿಸಲು ಬಿಜೆಪಿ ಸಂಚು ರೂಪಿಸಿದ್ದ, ಇದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್  ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೊನ್ನಪ್ಪ ಅವರ ಮಗ  ವಿರಾಜಪೇಟೆ ತಾಲೂಕು ಕೆರೆ ಮಳ್ಳುರ ಗ್ರಾಮದ ದಿವಿನ್ ದೇವಯ್ಯ ಎಂಬಾತನೆ ಆರೋಪಿಯಾಗಿದ್ದು, ಈತ ಮುಹಮ್ಮದ್ ಅಶ್ಫಾಕ್ ಎಂಬ ಯುವಕನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಕೊಡಗಿನ ಹೆಣ್ಣು ಮಕ್ಕಳ ಬಗ್ಗೆ ಅಸಹ್ಯಕರ ಮೆಸೇಜ್ ಗಳನ್ನು  ಪೋಸ್ಟ್ ಮಾಡಿ ಹಿಂದೂ ಮುಸ್ಲಿಮ್ ಗಲಭೆ ಸೃಷ್ಟಿಸಲು ಹುನ್ನಾರ ಮಾಡಿದ್ದಾನೆ. ತಕ್ಷಣ ಜಾಗೃತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘಟನೆಯ ವಿಚಾರವನ್ನು ಪರಿಶೀಲಿಸಿ ಇದನ್ನು ಮುಸ್ಲಿಮ್ ಯುವಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ದಿವಿನ್ ದೇವಯ್ಯ ಎಂಬಾತನ ಮೇಲೆ ಪ್ರಕರಣ ದಾಖಲಿಸಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಕೂಡಲೇ ಆತನ ಮೇಲೆ ಸ್ವಯಂ ದೂರು ದಾಖಲಿಸಿ  ಗೂಂಡಾ ಕಾಯ್ದೆಯಡಿ ಬಂಧಿಸಬೇಕು' ಎಂದು ಒತ್ತಾಯಿಸಿದರು.

'ಈ ಘಟನೆಯ ಪ್ರಮುಖ ಆರೋಪಿ ದಿವಿನ್ ದೇವಯ್ಯ ಅವರ ತಂದೆ ಪೊನ್ನಪ್ಪ ಕೊಡಗು ಜಿಲ್ಲೆಯ ಬಿಜೆಪಿ ಶಾಸಕರುಗಳಾದ  ಕೆ.ಜಿ.ಭೋಪಯ್ಯ, ವಿಧಾನ ಪರಿಷತ್ ಸದಸ್ಯ ರವಿ ಕುಶಾಲಪ್ಪ ಮತ್ತು ಸಂಸದ ಪ್ರತಾಪ್ ಸಿಂಹ ಆವರ ಆಪ್ತನಾಗಿದ್ದು, ಇವರುಗಳ ಕುಮ್ಮಕ್ಕಿನಿಂದ ಈತನ ಮಗ  ಅವಹೇಳನಾಕಾರಿ ಪೋಸ್ಟ್ ಮಾಡಿದ್ದಾನೆ. ಹಾಗಾಗಿ ದಿವಿನ್ ದೇವಯ್ಯ ಅವರನ್ನು ಮೊದಲನೇ ಆರೋಪಿ ಮಾಡಿ ಇನ್ನುಳಿದವರನ್ನು ಎರಡನೇ ಆರೋಪಿಗಳನ್ನಾಗಿ ಮಾಡಬೇಕಿದೆ' ಎಂದು ಆಗ್ರಹಿಸಿದರು.

ಇಡೀ ದೇಶದಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿರಿಸಿ ಗಲಭೆ ಸೃಷ್ಟಿಸಿ ರಕ್ತದ ಕೋಡಿ ಹರಿಸಿ ಬಿಜೆಪಿ ಅಧಿಕಾರ ಹಿಡಿಯಲು ಮುಂದಾಗುತ್ತಿರುವುದು ನಾಚಿಕೆಗೇಡಿನ ಸಂಘತಿ  ಎಂದು ಕಿಡಿಕಾರಿದರು.

'ಗೋ ಹತ್ಯೆ ನಿಷೇಧದ  ವಿರುದ್ಧ ದೇಶಾದ್ಯಂತ ಅಭಿಯಾನ ನಡೆಸುತ್ತಿರುವ ಬಿಜೆಪಿ ಸರ್ಕಾರ ಒಂದು ಕಡೆ ಗೋ ಹತ್ಯೆ ನೆಪ ಒಡ್ಡಿ ಅಮಾಯಕ ಮುಸ್ಲಿಮ್ ಜನಾಂಗವನ್ನು ಜೈಲಿಗಟ್ಟುತ್ತಾ ಮತ್ತೊಂದು ಕಡೆ ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಕೇಂದ್ರ ಸಚಿವೆಯಾಗಿರುವ ಸ್ಮೃತಿ ಇರಾನಿ ಮಗಳು, ಜೋಯ್ಸ್ ಇರಾನಿ ಗೋವಾದಲ್ಲಿ ಅಕ್ರಮವಾಗಿ ತೆರದಿರುವ ಸಿಲ್ಲಿ ಸೋಲ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಗೋವುಗಳನ್ನು ಹತ್ಯೆ ಮಾಡಿ ಅದತ ಮಾಂಸಗಳನ್ನು ಮಾರಾಟ ಮಾಡುತ್ತಿರುವುದು ಬಿಜೆಪಿ ಅವರ ಕಣ್ಣಿಗೆ ಕಾಣುವುದಿಲ್ಲವೆ? ' ಎಂದು ಪ್ರಶ್ನಿನಿಸಿದರು.

'ಒಂದು ಕಡೆ ಗೋ ಹತ್ಯೆ ನಿಷೇಧ ಮಾಡುತ್ತೇವೆ ಎಂದು ಹೇಳುತ್ತಾರೆ.‌ಮತ್ತೊಂದೆಡೆ ಬಿಜೆಪಿ ನಾಯಕರುಗಳ ಮಕ್ಕಳೇ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ. ಇದೊಂದು ರೀತಿ ಧ್ವಂಧ್ವ ನೀತಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಸಂಸದ ಪ್ರತಾಪ್ ಸಿಂಹ ನಾನು ಮುಖ್ಯಮಂತ್ರಿಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ಒತ್ತಾಯ ಮಾಡಿದ್ದೆ ಎಂಬ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಆದರೆ  ವಾಸ್ತವದಲ್ಲಿ  2015 ರ ನವೆಂಬರ್ 17 ರಂದೆ ಅಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆದು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕು' ಎಂದು ಒತ್ತಾಯ ಮಾಡಿದ್ದರು ಎಂಬುದರ ಪತ್ರವನ್ನು ಪ್ರದರ್ಶಿಸಿದರು.

'ಬರೀ ಸುಳ್ಳುಗಳನ್ನೇ ಹೇಳಿಕೊಂಡು ತಿರುಗುತ್ತಿರುವ ಸಂಸದ ಪ್ರತಾಪ್ ಸಿಂಹ ನನನ್ನು ನಾಲ್ಕು ಬಾರಿ ಬಹಿರಂಗ ಚರ್ಚೆಗೆ ಕರೆದರೂ ಬರದೆ ತಪ್ಪಿಸಿಕೊಂಡರು. ಆದರೆ ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ನನಗೆ ಅವಮಾನವಾಗಿದೆ. ನನ್ನ ಮಾನಹಾನಿಯಾಗಿದೆ ಎಂದು ನನ್ನ ವಿರುದ್ಧ ದೂರು ನೀಡಿರುವುದು ಹಾಸ್ಯಾಸ್ಪದ' ಎಂದು ಲೇವಡಿ ಮಾಡಿದರು.

ಕತ್ತೆ, ಹಂದಿಯನ್ನು ಕರೆದುಕೊಂಡು ಸಂಸದರ ಕಚೇರಿಗೆ ತೆರಳುವ ವೇಳೆ ಪೊಲೀಸರು ಕಾಂಗ್ರೆಸ್ ಕಚೇರಿ ಮುಂಭಾಗವೇ ನನ್ನನ್ನು ತಡೆದು ವಶಕ್ಕೆ ಪಡೆದರು. ಸಂಸದರ ಕಚೇರಿ ಬಳಿಗೆ ಬಿಡಲಿಲ್ಲ, ಅಂತಹದರಲ್ಲಿ ಯಾವ ಮಾನ ಹಾನಿಯಾಗಿದೆ? ಇವರಿಗೆ ಮಾನವೇ ಇಲ್ಲ,  ಇವರ ಮಾನ ಕೇವಲ ಒಂದು ರೂ. ಮಾತ್ರ ಎಂದು ವ್ಯಂಗ್ಯವಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News