ಬಿಳಿಜೋಳ ಕಣಜದಲ್ಲಿಯೇ ಬಿಳಿಜೋಳ ವಿರಳ!

Update: 2022-07-27 05:45 GMT

ವಿಜಯಪುರ, ಜು.26: ಗಟ್ಟಿ ರೊಟ್ಟಿಯ ಬಿಳಿಜೋಳಕ್ಕೆ ಹೆಸರಾದ ವಿಜಯಪುರ ಜಿಲ್ಲೆಯಲ್ಲಿಯೇ ಬಿಳಿಜೋಳ ಕೊರತೆ ಉಂಟಾಗಿದೆ. ಒಂದು ರೀತಿ ಬಿಳಿಜೋಳ ಕಣಜದಲ್ಲಿಯೇ ಬಿಳಿಜೋಳ ವಿರಳವಾಗುತ್ತ ಸಾಗಿದೆ. ಖಡಕ್ ರೊಟ್ಟಿಗೆ ಉತ್ತರ ಕರ್ನಾಟಕದ ಬಿಳಿಜೋಳ ಸುಪ್ರಸಿದ್ಧ. ಆದರೆ ಪಡಿತರ ವ್ಯವಸ್ಥೆಯಲ್ಲಿ ವಿತರಣೆಗೆ ಬಿಳಿಜೋಳವೇ ಸಿಗುತ್ತಿಲ್ಲ. ಇದರಿಂದ ಬೇರೆ ಜಿಲ್ಲೆಗಳ ಮೇಲೆ ಅವಲಂಬನೆಯಾಗಬೇಕಾಗಿದೆ.

ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ರಾಗಿ, ಉ-ಕ ಭಾಗದಲ್ಲಿ ಆಹಾರ ಧಾನ್ಯವಾಗಿ ಬಿಳಿಜೋಳ ವಿತರಣೆಗೆ ರಾಜ್ಯ ಸರಕಾರ ಆದೇಶಿಸಿದೆ. ಅದರಂತೆ ಅಂತ್ಯೋದಯ ಕಾರ್ಡ್ ಒಂದಕ್ಕೆ 20 ಕೆಜಿ ಹಾಗೂ ಬಿಪಿಎಲ್ ಕಾರ್ಡ್‌ಗೆ ಪ್ರತಿ ಸದಸ್ಯರಿಗೆ 2 ಕೆಜಿಯಂತೆ ಜೋಳ ವಿತರಣೆ ಮಾಡಲಾಗುತ್ತಿದೆ. ಆದರೆ ಪಡಿತರ ವ್ಯವಸ್ಥೆಯಲ್ಲಿ ಬಿಳಿಜೋಳ ಸಿಗದೆ ಗ್ರಾಮೀಣ ಭಾಗದ ಮಹಿಳೆಯರು ರೊಟ್ಟಿ ತಟ್ಟುವ ಸದ್ದು ಅಷ್ಟಾಗಿ ಕೇಳಿ ಬರುತ್ತಿಲ್ಲ. ಬಿಳಿಜೋಳ ಬೆಳೆಯುವ ಪ್ರದೇಶಗಳ ಪೈಕಿ ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬಿಳಿಜೋಳ ಬೆಳೆಯಲಾಗುತ್ತಿತ್ತು. ಇಂದಿನ ದುಬಾರಿ ದಿನಗಳಲ್ಲಿ ಹೆಚ್ಚಿನ ಆದಾಯ ತರುವ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಸಹಜವಾಗಿಯೇ ರೈತರು ತೊಗರಿ, ಸೂರ್ಯಕಾಂತಿ, ಈರುಳ್ಳಿ, ದ್ರಾಕ್ಷಿ, ದಾಳಿಂಬೆ, ನಿಂಬೆ, ಕಬ್ಬು, ಹತ್ತಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೋಳಕ್ಕೆ ಹೋಲಿಸಿದರೆ ಇತರ ಬೆಳೆಗಳಿಗೆ ಬೇಕಾಗುವ ಕಾರ್ಮಿಕರಿಗಿಂತ ಹೆಚ್ಚಿಗೆ ಬೇಕು. ಜೋಳದ ಕೆಲಸಕ್ಕೆ ಕಾರ್ಮಿಕರ ಕೊರತೆ ಕಾಡುತ್ತಿದೆ.

ಈ ಸಮಸ್ಯೆಗಳಿಂದ ಬಹುತೇಕ ರೈತರು ಜೋಳ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ದನಕರುಗಳು ಇರುವ ರೈತರು ಅನಿವಾರ್ಯವಾಗಿ ಅಲ್ಪಸ್ವಲ್ಪ ಬಿಳಿಜೋಳ ಬೆಳೆಯುತ್ತಾರೆ. ಇನ್ನೂ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್‌ಗೆ 2,787 ರೂ. ಯಂತೆ ಸರಕಾರದ ಆದೇಶದನ್ವಯ ಖರೀದಿಸಬೇಕಾಗುತ್ತದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 4ರಿಂದ 5 ಸಾವಿರ ರೂ. ದರ ಇದೆ. ಇದರಿಂದ ರೈತರು ಖರೀದಿಸುವುದು ಕಷ್ಟ ಎಂಬ ಮಾತು ರೈತವಲಯದಿಂದ ಕೇಳಿಬರುತ್ತಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಳಿಜೋಳ ಬೆಳೆಯುತ್ತಾರೆ. ಅದರಲ್ಲಿ ವಿಜಯಪುರ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ಧಾರವಾಡ ಭಾಗದಲ್ಲಿಯೂ ಬಿಳಿಜೋಳ ಬೆಳೆಯುತ್ತಾರೆ. 2020-21ರಲ್ಲಿ ರಾಜ್ಯದಲ್ಲಿ ಒಟ್ಟು 9.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 6.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ವಿಜಯಪುರ ಜಿಲ್ಲೆಯೊಂದರಲ್ಲಿಯೇ 1.28 ಲಕ್ಷ ಹೆಕ್ಟೇರ್‌ನಲ್ಲಿ ಬಿಳಿಜೋಳ ಬಿತ್ತನೆ ಮಾಡಲಾಗಿತ್ತು. ಕಳೆದ 2021-22ರ ಹಿಂಗಾರಿನಲ್ಲಿ 44,076 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಬಿಳಿಜೋಳ ಬಿತ್ತನೆ ಕ್ಷೇತ್ರ ಪ್ರತಿವರ್ಷವೂ ಇಳಿಮುಖವಾಗುತ್ತಿದ್ದು, ಇದರಿಂದಾಗಿ ಜೋಳದ ದರ ಇದೀಗ ಗಗನಕ್ಕೇರಿದೆ. ಜನ ಸಾಮಾನ್ಯರು ಬಿಳಿಜೋಳ ಖರೀದಿಸಲು ಕಿಸೆ ನೋಡಿಕೊಳ್ಳುವಂತಾಗಿದೆ.

 ಬಿಳಿಜೋಳ ‘ಮಾಲ್ದಂಡಿ’ ಸಿಗದ ಹಿನ್ನೆಲೆಯಲ್ಲಿ ಹೈಬ್ರಿಡ್ ಬಿಳಿಜೋಳ ಖರೀದಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮುಂದಾಗಿದೆ. ರಾಜ್ಯದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಪ್ರತಿ ತಿಂಗಳು 3.29 ಲಕ್ಷ ಕ್ವಿಂಟಾಲ್ ಜೋಳ ಪಡಿತರದಲ್ಲಿ ವಿತರಣೆ ಮಾಡಲಾಗುತ್ತದೆ. ಅದರಲ್ಲಿ ಬಾಗಲಕೋಟೆ 33,031.22 ಕ್ವಿಂಟಾಲ್, ಬಳ್ಳಾರಿ 28,980.04, ವಿಜಯಪುರ 37,207.12, ಧಾರವಾಡ 28,826.68, ಗದಗ 19,421.50, ಕಲಬುರಗಿ 41,447.34, ಹಾವೇರಿ 31,907.62, ಬೀದರ್ 27,165.48, ಕೊಪ್ಪಳ 26,125.64, ರಾಯಚೂರು 35,125.40, ಯಾದಗಿರಿ 20,466.58 ಕ್ವಿಂಟಾಲ್ ಸೇರಿದಂತೆ ರಾಜ್ಯದಲ್ಲಿ ಒಟ್ಟು 3,29,704.62 ಕ್ವಿಂಟಾಲ್ ಜೂನ್ ತಿಂಗಳ ಪಡಿತರದಲ್ಲಿ ವಿತರಿಸಲಾಗಿದೆ. ಆದರೆ ಜೋಳ ಬೆಳೆಯುವ ಜಿಲ್ಲೆಗಳಲ್ಲಿಯೇ ಜೋಳದ ಕೊರತೆಯಾಗಿರುವುದರಿಂದ ಅನ್ಯ ಜಿಲ್ಲೆಗಳಾದ ಬಳ್ಳಾರಿ, ರಾಯಚೂರಿನಿಂದ ಹೈಬ್ರಿಡ್ ಜೋಳ ಖರೀದಿ ಮಾಡಿ ವಿತರಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿ ಒದಗಿಸಿದೆ.

ಮುಕ್ತ ಮಾರುಕಟ್ಟೆಯಲ್ಲಿ ಬಿಳಿಜೋಳದ ದರ ಹೆಚ್ಚಿ ರುವುದರಿಂದ ರೈತರು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಹಿಂದೇಟು ಹಾಕಿದ ಹಿನ್ನೆಲೆ ಬಿಳಿಜೋಳದ ಕೊರತೆಯಾಗಿದೆ. ಜೂನ್-ಜುಲೈ ಎರಡು ತಿಂಗಳು ಪಡಿತರದಲ್ಲಿ ಜೋಳ ವಿತರಣೆಗೆ ಬಳ್ಳಾರಿ ಹಾಗೂ ರಾಯಚೂರಿನಿಂದ ಖರೀದಿಸಲಾಗಿದೆ. ಸದ್ಯಕ್ಕೆ ಬಿಳಿಜೋಳ ಸಿಗದಿರುವುದರಿಂದ ಹೈಬ್ರಿಡ್ ಜೋಳ ಖರೀದಿಸಿ ವಿತರಣೆ ಮಾಡಲಾಗುತ್ತಿದೆ.

Writer - - ಆಸಿಫ್ ಬಾಗವಾನ (ವಿಜಯಪುರ)

contributor

Editor - - ಆಸಿಫ್ ಬಾಗವಾನ (ವಿಜಯಪುರ)

contributor

Similar News