ದೊಡ್ಡ ಮೊತ್ತದ ನಗದು ಹೊಂದಿದ್ದ ಆರೋಪ; ಜಾರ್ಖಂಡ್‍ನ ಮೂವರು ಶಾಸಕರ ಬಂಧನ

Update: 2022-07-31 02:41 GMT

ಕೊಲ್ಕತ್ತಾ: ಜಾರ್ಖಂಡ್‍ನ ಮೂವರು ಕಾಂಗ್ರೆಸ್ ಶಾಸಕರು ಪ್ರಯಾಣಿಸುತ್ತಿದ್ದ ಕಾರನ್ನು ಪಶ್ಚಿಮ ಬಂಗಾಳದ ಹೌರಾದಲ್ಲಿ ವಶಪಡಿಸಿಕೊಂಡ ಪೊಲೀಸರು ದೊಡ್ಡ ಮೊತ್ತದ ನಗದು ವಶಪಡಿಸಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಇದು ರಾಜಕೀಯ "ಕುದುರೆ ವ್ಯಾಪಾರ"ಕ್ಕೆ ಬಳಸಲು ಉದ್ದೇಶಿಸಿದ್ದ ನಗದು ಎಂಬ ಆರೋಪಗಳು ಹೇಳಿ ಬಂದಿವೆ. ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ನಗದು ಪ್ರಮಾಣ ಎಷ್ಟು ಎನ್ನುವುದು ಇನ್ನೂ ದೃಢಪಟ್ಟಿಲ್ಲ. ನೋಟು ಎಣಿಕೆ ಯಂತ್ರಗಳನ್ನು ಬಳಸಿ ಎಣಿಕೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಜಮ್ತಾರಾ ಶಾಸಕ ಎಂಬ ಫಲಕ ಹೊಂದಿದ್ದ ಟೊಯೋಟಾ ಫಾರ್ಚೂನರ್ ಎಸ್‍ಯುವಿಯಲ್ಲಿ ಖಿರ್ಜಿ ಶಾಸಕ ಕಚ್ಚಪ್ ಮತ್ತು ಕೊಲೆಬಿರಾ ಶಾಸಕ ಕೊಂಗಾರಿ ಕೂಡಾ ಇದ್ದರು. ಜಾರ್ಖಂಡ್ ಮುಕ್ತಿಮೋರ್ಚಾ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ನೀಡಿದ್ದ ಹಣ ಇದು ಎಂದು ಕಾಂಗ್ರೆಸ್ ಆಪಾದಿಸಿದೆ.

"ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವುದು ಬಿಜೆಪಿಯ ಸ್ವಭಾವ. ಆ ಹಣ ಈ ಶಾಸಕರಿಗೆ ಸೇರಿದ್ದಲ್ಲ" ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಂಧು ಟಿರ್ಕೆ ಸುದ್ದಿಸಂಸ್ಥೆಯ ಜತೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಹಣ ಜೆಎಂಎಂ-ಕಾಂಗ್ರೆಸ್ ಮೈತ್ರಿ ಸರ್ಕಾರದ ಭ್ರಷ್ಟಾಚಾರಕ್ಕೆ ಪುರಾವೆ ಎಂದು ಜಾರ್ಖಂಡ್ ಬಿಜೆಪಿ ನಾಯಕ ಆದಿತ್ಯ ಸಾಹು ಪ್ರತಿಕ್ರಿಯಿಸಿದ್ದಾರೆ. ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ ಹೆಚ್ಚುತ್ತಿದೆ. ಸಾರ್ವಜನಿಕ ಹಣವನ್ನು ಇತರ ಉದ್ದೇಶಗಳಿಗೆ ಬಳಸುತ್ತಾರೆ ಎಂದು ದೂರಿದ್ದಾರೆ.

ಮಹಾರಾಷ್ಟ್ರ ಸರ್ಕಾರವನ್ನು ಯಶಸ್ವಿಯಾಗಿ ಪತನಗೊಳಿಸಿದ ಬಳಿಕ ಬಿಜೆಪಿ ಜಾರ್ಖಂಡ್ ಸರ್ಕಾರ ಪತನಕ್ಕೆ ಪ್ರಯತ್ನಿಸುತ್ತಿದೆ ಎಂದು ಕಳೆದ ವಾರ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಪಾದಿಸಿದ್ದರು. ಇದನ್ನು ಉಲ್ಲೇಖಿಸಿ ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಜಾರ್ಖಂಡ್ ಸರ್ಕಾರ ಉರುಳಿಸುವ ಸಾಧ್ಯತೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News