×
Ad

ಕನ್ನಡಿ ಕೈ ಬರಹದಲ್ಲಿ ಇಂಡಿಯಾ ಬುಕ್‌ನಲ್ಲಿ ದಾಖಲೆ ಬರೆದ ಅಕ್ಷಿತಾ ಹೆಗ್ಡೆ

Update: 2022-08-06 17:54 IST

ಉಡುಪಿ, ಆ.6: ಮಂಗಳೂರು ವಿ.ವಿ.ಯ ಬಂಗಾರದ ಸಾಧಕಿ ಶಿರ್ವದ ಅಕ್ಷಿತಾ ಹೆಗ್ಡೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಕನ್ನಡಿ ಕೈ ಬರಹದ ಮೂಲಕ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಮಂಕುತಮ್ಮನ ಕಗ್ಗದಲ್ಲಿ ೯೦೦ಕ್ಕೂ ಅಧಿಕ ಪದ್ಯಗಳಿದ್ದು, ಅದರಲ್ಲಿ ೧೩ ಆಯ್ಕೆಮಾಡಿಕೊಂಡಿರುವ ಅಕ್ಷಿತಾ ಹೆಗ್ಡೆ, ೫೨ ಲೈನ್‌ಗಳನ್ನು ೪೫.೧೧ನಿಮಿಷದಲ್ಲಿ ಬರೆದು ಈ ಸಾಧನೆ ಮಾಡಿದ್ದಾರೆ. ಅಕ್ಷಿತಾ ಹೆಗ್ಡೆ ೧-೧೦ ನೇ ತರಗತಿಯನ್ನು ಕಲ್ಯದ ಸರಕಾರಿ ಪ್ರೌಢಶಾಲೆ, ಪಿಯುಸಿಯನ್ನು ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು, ಪದವಿ ಶಿಕ್ಷಣವನ್ನು ಶಿರ್ವ ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜು, ಎಂಬಿಎ ಶಿಕ್ಷಣವನ್ನು ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಕಾಲೇಜಿನಲ್ಲಿ ಮಾಡಿದ್ದರು.

ಅಕ್ಷಿತಾ ಹೆಗ್ಡೆ ತನ್ನ ಉತ್ತಮ ಕನ್ನಡ ಕೈ ಬರಹವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಮಾರ್ಚ್‌ನಲ್ಲಿ ಕಳುಹಿಸಿದ್ದು, ಕನ್ನಡಿ ಬರಹವನ್ನು ಕಳುಹಿಸುವಂತೆ ಸಲಹೆ ಬಂದಿತ್ತು. ಹೀಗಾಗಿ ಇದನ್ನು ಸವಾಲಾಗಿ ಸ್ವೀಕರಿಸಿದ ಇವರು ೩-೪ ದಿನಗಳಲ್ಲೇ ಕನ್ನಡಿ ಬರಹವನ್ನು ಕಲಿತು ಅದರ ವೀಡಿಯೋ ತುಣುಕುವನ್ನು ಏಪ್ರಿಲ್ ಮೊದಲ ವಾರದಲ್ಲಿ  ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳುಹಿಸಿದ್ದರು. ಸದ್ಯ ಈ ಬರಹ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಎ.10ರಂದು ವೀಡಿಯೋ ದಾಖಲಿಸಿ ಅಕ್ಷಿತಾ ಹೆಗ್ಡೆ ಅವರ ಕನ್ನಡಿ ಬರಹವನ್ನು ಪುಸ್ತಕಕ್ಕೆ ಸೇರ್ಪಡೆಗೊಳಿ ಸಿದೆ. ಇವರು ಕುಕ್ಕೆಹಳ್ಳಿ ದೊಡ್ಡಬೀಡು ದಿ.ಸುಭಾಸ್‌ಚಂದ್ರ ಹೆಗ್ಡೆ, ಶಿರ್ವದ ಜಯಲಕ್ಷ್ಮೀ ದಂಪತಿ ಪುತ್ರಿ. ಸದ್ಯ ಇವರು ನಿಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಇಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ರಿಸರ್ಚ್ ವಿಭಾಗದಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News