ಡಿ.21: ಮರಾಠಿ ಸಮುದಾಯದಿಂದ ರಾಜೇಂದ್ರ ಪ್ರಸಾದ್‌ಗೆ ಅಭಿನಂದನೆ
ಉಡುಪಿ, ಡಿ.19: ಉಡುಪಿ ಜಿಲ್ಲಾ ಮರಾಠಿ ಸೇವಾ ಸಂಘ, ಜಿಲ್ಲಾ ಮರಾಠಿ ಮಹಿಳಾ ವೇದಿಕೆ, ಜಿಲ್ಲಾ ಮರಾಠಿ ಯುವ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭವನ್ನು ಇದೇ ಡಿ.21ರ ರವಿವಾರ ಬೆಳಿಗ್ಗೆ 10ಗಂಟೆಗೆ ಉಡುಪಿ ಕುಂಜಿಬೆಟ್ಟುವಿನ ಶ್ರೀ ತುಳಜಾ ಭವಾನಿ ಮರಾಠಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಮರಾಟಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ ತಿಳಿಸಿದ್ದಾರೆ.
ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿನಂದನಾ ಸಮಾರಂಭಕ್ಕೂ ಮೊದಲು ಅಂದು ಬೆಳಗ್ಗೆ 8:30ಕ್ಕೆ ರಾಜೇಶ್ ಪ್ರಸಾದ್ ಅವರನ್ನು ಪರ್ಕಳದ ಅವರ ಸ್ವಗೃಹದಿಂದ ವಾಹನ ಜಾಥಾದ ಮೂಲಕ ಕುಂಜಿಬೆಟ್ಟಿನ ಎಂ.ಜಿ.ಎಂ. ಮೈದಾನಕ್ಕೆ ಕರೆದುಕೊಂಡು ಬರಲಾಗುವುದು. ಅಲ್ಲಿಂದ ತೆರದ ವಾಹನದಲ್ಲಿ ಚೆಂಡೆ, ಕೊಂಬು ಹಾಗೂ ಪೂರ್ಣಕುಂಭ ಮೇಳದೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಸಮುದಾಯ ಭವನಕ್ಕೆ ಕರೆತರಲಾಗುವುದು ಎಂದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟು ಗ್ರಾಮದಲ್ಲಿ ಜನಿಸಿ ಪದವಿವರೆಗಿನ ಶಿಕ್ಷಣವನ್ನು ಉಡುಪಿಯಲ್ಲಿ ಮಾಡಿರುವ ರಾಜೇಂದ್ರ ಪ್ರಸಾದ್, ಮರಾಟಿ ಸಮುದಾಯದಲ್ಲಿ ಐಎಎಸ್ ತೇರ್ಗಡೆಗೊಂಡ ಮೊದಲಿಗರಾಗಿದ್ದು, ಇದೀಗ ಅತ್ಯುನ್ನತ ಹುದ್ದೆಗೆ ಏರಿರುವುದು ಸಮುದಾಯಕ್ಕೊಂದು ಸ್ಪೂರ್ತಿಯಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮರಾಠಿ ಸಮಾಜದ ಮುಖಂಡರಾದ ಉಮೇಶ್ ನಾಯ್ಕ್ ಚೇರ್ಕಾಡಿ, ಭುಜಂಗ ನಾಯ್ಕ್ ಮಣಿಪಾಲ, ವಿಜಯೇಂದ್ರ ನಾಯ್ಕ್ ಉಪಸ್ಥಿತರಿದ್ದರು.