×
Ad

ಉಡುಪಿ ಜಿಲ್ಲೆಯ 1069 ಶಾಲೆಗಳಲ್ಲಿ 893 ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

Update: 2025-12-20 19:31 IST

ಉಡುಪಿ, ಡಿ.20: ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ (ಕೋಟ್ಪಾ)ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಪ್ರತೀ ಶಾಲಾ- ಕಾಲೇಜುಗಳನ್ನು ಭೇಟಿ ಮಾಡಿ, ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯ ಮಾನದಂಡಗಳಿಗೆ ಬದ್ದವಾಗಿರುವ ಕುರಿತು ವರದಿ ನೀಡಿದ್ದು, ಅದರಂತೆ ಜಿಲ್ಲೆಯ ಶಿಕ್ಷಣ ಇಲಾಖೆ ವ್ಯಾಪ್ತಿಯ 1069 ಶಾಲೆಗಳಲ್ಲಿ 893 ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಎಂದು ದೃಢೀಕರಿಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಯಲ್ಲಿ ಕೋಟ್ಪಾ-2003 ಕಾಯ್ದೆ ಕುರಿತ ತೃತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತ್ತಿದ್ದರು. ಜಿಲ್ಲೆಯಲ್ಲಿ ಉಳಿದಿರುವ ಶೈಕ್ಷಣಿಕೆ ಸಂಸ್ಥೆಗಳು ಶೀಘ್ರವಾಗಿ ಈ ದೃಢೀಕರಣವನ್ನು ಪಡೆದುಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ (ಕೋಟ್ಪಾ)ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ತಂಬಾಕು ನಿಯಂತ್ರಣ ತನಿಖಾ ದಳವು ಅನಿರೀಕ್ಷಿತ ದಾಳಿ ನಡೆಸಿ, ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಪಡೆಯದೇ ಇರುವ ಅಂಗಡಿ- ಮುಂಗಟ್ಟುಗಳ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲು ಸೂಕ್ತ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಶೈಕ್ಷಣಿಕ ಸಂಸ್ಥೆಗಳ 100ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದೆ. ಈ ನಿಯಮ ಮೀರಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ, ಮುಂಗಟ್ಟುಗಳ ಪರವಾನಿಗೆ ರದ್ದುಪಡಿಸಲು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದ ಅವರು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲಾ ಅಂಗಡಿಗಳು ವಾಣಿಜ್ಯ ಉದ್ದಿಮೆ ಪರವಾನಿಗೆಯ ಜೊತೆಗೆ ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದರು.

ಜಿಲ್ಲೆಯಲ್ಲಿ 2025ರ ಎಪ್ರಿಲ್ ತಿಂಗಳಿನಿಂದ ಈವರೆಗೆ 44ಕ್ಕೂ ಹೆಚ್ಚು ಧಿಡೀರ್ ದಾಳಿಗಳನ್ನು ನಡೆಸಿ, ಸೆಕ್ಷನ್ 4, ಸೆಕ್ಷನ್ 6(ಎ) ಹಾಗೂ 6(ಬಿ) ಅಡಿಯಲ್ಲಿ ಒಟ್ಟು 578ಕ್ಕೂ ಹೆಚ್ಚು ಪ್ರಕರಣವನ್ನು ದಾಖಲಿಸಿಕೊಂಡು 98,550ರೂ ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣ ದಲ್ಲೂ ಸಹ ಕೋಟ್ಪಾ ಕಾಯಿದೆಯನ್ನು ಉಲ್ಲಂಘಿಸಿದ 110 ಪ್ರಕರಣಗಳಿಂದ 12,450ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆ ಎಲ್ಲಾ ಕಡೆ ಕೋಟ್ಪಾ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದವರು ಹೇಳಿದರು.

ಜಿಲ್ಲೆಯಲ್ಲಿ ಕೆಲವು ಗ್ರಾಪಂಗಳ ಕೆಲ ಗ್ರಾಮಗಳನ್ನು ಈಗಾಗಲೇ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಉಳಿದ ಗ್ರಾಮಗಳು ಸಹ ತಂಬಾಕು ಮುಕ್ತ ಗ್ರಾಮಗಳೆನಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳು, ಗ್ರಾಪಂ ಜನಪ್ರತಿನಿಧಿ ಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಹಕರಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ ಮಾತನಾಡಿ, ತಂಬಾಕು ಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಬೀದಿನಾಟಕ ಸೇರಿದಂತೆ ವಿವಿಧ ಚಟುವಟಿಕೆ ಗಳನ್ನು ಹಮ್ಮಿಕೊಂಡು ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ಯುವಜನತೆ ತಂಬಾಕು ಸೇವನೆಯ ವ್ಯಸನಕ್ಕೆ ತುತ್ತಾಗುವುದನ್ನು ತಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮರಾವ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News