×
Ad

ಪದವಿ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳ ವಿರುದ್ಧ ಪ್ರತಿಭಟನೆ

Update: 2022-08-06 17:56 IST

ಕುಂದಾಪುರ, ಆ.6: ಪದವಿ ಪರೀಕ್ಷಾ ಫಲಿತಾಂಶ, ಅಂಕಪಟ್ಟಿ ಹಾಗೂ ಮೌಲ್ಯ ಮಾಪನ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗುತ್ತಿರುವ ಸಮಸ್ಯೆಗಳನ್ನು ವಿರೋಧಿಸಿ ಎಬಿವಿಪಿ ನೇತೃದಲ್ಲಿ ವಿದ್ಯಾರ್ಥಿಗಳು ಶನಿವಾರ ಕುಂದಾಪುರದಲ್ಲಿ ಪ್ರತಿಭಟನೆ ನಡೆಸಿದರು.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ತರಗತಿಗಳಿಗೆ ನಡೆದ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪರೀಕ್ಷೆಯ ಅಂಕಪಟ್ಟಿಗಳು ಪರೀಕ್ಷಾ ಫಲಿತಾಂಶ ದೊರಕಿ ತಿಂಗಳುಗಳಾದರೂ ವಿದ್ಯಾರ್ಥಿಗಳ ಕೈಸೇರಿಲ್ಲ. ಜತೆಗೆ ಕೆಲವು ವಿಭಾಗಗಳ ಫಲಿತಾಂಶಗಳೂ ಪ್ರಕಟವಾಗಿಲ್ಲ. ಇದರಿಂದ ಪ್ರತಿಷ್ಠಿತ ಕಂಪೆನಿಗಳಿಗೆ ಕ್ಯಾಂಪಸ್‌ನಿಂದ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಮುಖ ದಾಖಲೆಯಾಗಿ ಅಂಕಪಟ್ಟಿ ಸಲ್ಲಿಸಲಾಗುತ್ತಿಲ್ಲ. ಅವರನ್ನು ಉದ್ಯೋಗ ದಿಂದ ಕೈ ಬಿಡಲಾಗುತ್ತಿದ್ದು, ಈಗಾಗಲೇ ಹಲವು ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪದವಿ ತರಗತಿಗಳ ತೃತೀಯ ಹಾಗೂ ಪಂಚಮ ಸೆಮಿಸ್ಟರ್ ಫಲಿತಾಂಶ ಗಳಲ್ಲೂ ಹಲವು ದೋಷಗಳಿದ್ದು ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಗೊಂದಲ ಉಂಟಾಗಿದೆ. ಇನ್ನು ಪ್ರಥಮ ಸೆಮಿಸ್ಟರ್ ಪರೀಕ್ಷೆ ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಡೆದಿದಿದ್ದು ಇದರ ಮೌಲ್ಯಮಾಪನ ಕೂಡಾ ಆಮೆಗತಿಯಲ್ಲಿ ಸಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಆದಷ್ಟು ಶೀಘ್ರ ವಿಶ್ವವಿದ್ಯಾನಿಲಯದಿಂದ ಈ ಬಗ್ಗೆ ಸ್ಪಷ್ಟಿಕರಣ ಹಾಗೂ ವಿದ್ಯಾರ್ಥಿಗಳಿಗೆ ಆಗಸ್ಟ್ 11ರ ಒಳಗಾಗಿ ನ್ಯಾಯ ಒದಗಿಸದೇ ಇದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಲಾಗು ವುದು ಎಬಿವಿಪಿ ಕುಂದಾಪುರ ತಾಲೂಕು ಸಂಚಾಲಕ್ ಜಯಸೂರ್ಯ ಶೆಟ್ಟಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಕುಂದಾಪುರದ ಉಪವಿಭಾಗಾಧಿಕಾರಿ ಕೆ.ರಾಜು ಅವರ ಮೂಲಕ ಮನವಿ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಭಂಡಾರ್‌ ಕಾರ್ಸ್‌ ಕಾಲೇಜಿನ ವಿದ್ಯಾರ್ಥಿಗಳಾದ ವೀಕ್ಷಿತ್, ವಿಘ್ನೇಶ್, ಬಸ್ರೂರು ಶಾರದಾ ಕಾಲೇಜಿನ ವೈಭವಿ, ರಂಜಿತ್, ರಾಹುಲ್, ಎಸ್‌ಎಂಎಸ್ ಕಾಲೇಜಿನ ನಿಶನ್, ಬಿ.ಬಿ.ಹೆಗ್ಡೆ ಕಾಲೇಜಿನ ದರ್ಶನ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News