‘ಸರ್ವರಿಗೂ ನ್ಯಾಯ’ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯ: ಶಾಂತವೀರ ಶಿವಪ್ಪ

Update: 2022-08-06 14:40 GMT

ಉಡುಪಿ, ಆ.6: ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವುದು ಮತ್ತು ಆರ್ಥಿಕ ಅಥವಾ ಇನ್ನಿತರ ಕಾರಣದಿಂದ ಯಾವುದೇ ನಾಗರಿಕರಿಗೆ ನ್ಯಾಯವನ್ನು ಪಡೆಯುವ ಅವಕಾಶಗಳನ್ನು ನಿರಾಕರಿಸದಂತೆ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಸರ್ವರಿಗೂ ನ್ಯಾಯ ಎಂಬುದು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯವಾಗಿದೆ ಎಂದು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಶಾಂತವೀರ ಶಿವಪ್ಪ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ಇವರ ಸಹಯೋಗದಲ್ಲಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಪ್ಯಾರಾ ಲೀಗಲ್ ಸ್ವಯಂ ಸೇವಕರಿಗಾಗಿ ಆಯೋಜಿಸಿದ್ದ ಒಂದು ದಿನದ ಇಂಡಕ್ಷನ್ ಮತ್ತು ಒರಿಯೆಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಕೀಲ ವೃತ್ತಿ ಎಂಬುದು ಉದಾತ್ತ ವೃತ್ತಿಯಾಗಿದ್ದು, ಕಾನೂನು ವಿದ್ಯಾರ್ಥಿ ಗಳಿಗೆ ಕಾನೂನು ಪದವಿಯ ನಂತರ ವಕೀಲ ವೃತ್ತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳುವ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುವ ಅವಕಾಶವಿದೆ ಎಂದರು.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿ ಪ್ಯಾರಾ ಲೀಗಲ್ ಸ್ವಯಂ ಸೇವಕರು ಸಾಮಾನ್ಯ ಜನರಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕ ಉಚ್ಛ ನ್ಯಾಯಲಯದ ಹಿರಿಯ ನ್ಯಾಯವಾದಿ ಗಳಾದ ಎಸ್. ರವೀಂದ್ರನಾಥ್ ಕಾಮತ್ ಮಾತನಾಡಿ, ವಕೀಲರು ನ್ಯಾಯದಾನ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು ನ್ಯಾಯಾಲಯಕ್ಕೆ ಹಾಗೂ ತನ್ನ ಕಕ್ಷಿದಾರರ ಕುರಿತಾಗಿ ಕರ್ತವ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ವರ್ಷಿತ ಆಚಾರ್ಯ ಪ್ರಾರ್ಥಿಸಿದರೆ, ವಿಥಿಕ ಶೆಟ್ಟಿ ಸ್ವಾಗತಿಸಿದರು. ಅವಿನಾಶ್, ಅಭಿನಯ, ಸಂಭ್ರಮ್ ಅತಿಥಿಗಳನ್ನು ಪರಿಚಯಿಸಿದರು. ಅಭಯ್ ವಂದಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿಯ ಸಂಯೋಜಕ ರಘುನಾಥ್ ಕೆ.ಎಸ್ ಮತ್ತು ಕಾರ್ಯಕ್ರಮದ ಸಂಯೋಜಕ ಡಾ.ಶ್ರೀನಿವಾಸ್ ಪ್ರಸಾದ್ ಆರ್. ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News