ಕಾಫಿನಾಡಿನಲ್ಲಿ ಮುಂದುವರಿದ ಭಾರೀ ಮಳೆ: ಕಳಸ-ಮಂಗಳೂರು ರಸ್ತೆ ಸಂಪರ್ಕ ಕಡಿತ

Update: 2022-08-08 14:17 GMT
(ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ)

ಚಿಕ್ಕಮಗಳೂರು, ಆ.8: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೋಮವಾರ ಮಳೆಯ ಆರ್ಭಟ ಮತ್ತಷ್ಟು ಬಿರುಸುಗೊಂಡಿದ್ದು, ಭಾರೀ ಮಳೆಯಿಂದಾಗಿ ಭದ್ರಾ, ಹೇಮಾವತಿ, ತುಂಗಾ ನದಿಗಳೂ ಸೇರಿದಂತೆ ಮಲೆನಾಡಿನಾದ್ಯಂತ ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿವೆ. ಭದ್ರಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವ ಪರಿಣಾಮ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಕಳಸ ತಾಲೂಕು ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿರುವ ಸೇತುವೆ ಭದ್ರಾ ನದಿಯ ನೆರೆ ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಕಳಸ, ಕುದುರೆಮುಖ ಮಾರ್ಗವಾಗಿ ಮಂಗಳೂರು ಸಂಪರ್ಕಿಸುವ ರಸ್ತೆ ಸಂಪರ್ಕವೂ ಕಡಿತಗೊಂಡಿದೆ.

ಕಾಫಿನಾಡಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ. ರವಿವಾರ ರಾತ್ರಿ ಹಾಗೂ ಸೋಮವಾರ ಕಳಸ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭದ್ರಾ ಇಲ್ಲಿ ಹರಿಯುವ ಭದ್ರಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಕಳಸ ಸಮೀಪದ ನೆಲ್ಲಿಬೀಡು ಗ್ರಾಮದಲ್ಲಿ ಸೇತುವೆಯೊಂದು ಮುಳುಗಡೆಯಾಗಿದೆ. ಕಳಸ, ಕುದುರೆಮುಖ, ಮಂಗಳೂರು ಸಂಚಾರದ ಹೆದ್ದಾರಿಯಲ್ಲಿ ಸಂಪರ್ಕ ಕಡಿತಗೊಂಡಿದೆ. ಸೋಮವಾರ ಬೆಳಗ್ಗೆ ಈ ಸಂಪರ್ಕ ಸೇತುವೆ ಕಡಿತಗೊಂಡ ಪರಿಣಾಮ ಕುದುರೆಮುಖ, ನೆಲ್ಲಿಬೀಡು ಗ್ರಾಮದಿಂದ ಸಂಸೆ ಗ್ರಾಮ, ಕಳಸ ಪಟ್ಟಣಕ್ಕೆ ಆಗಮಿಸಬೇಕಿದ್ದ ಶಾಲಾ ಕಾಲೇಜು ಮಕ್ಕಳು ಹಾಗೂ ಪ್ರಯಾಣಿಕರು ಸಂಪರ್ಕ ಸಾಧ್ಯವಾಗದೇ ಪರದಾಡಿದರು.

ಕಳಸ, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭದ್ರಾನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಭದ್ರಾ ನದಿಯ ನೀರಿನಲ್ಲಿ ಮುಳುಗಿದೆ. ಪರಿಣಾಮ ಕಳಸ-ಹೊರನಾಡು ಸಂಪರ್ಕವೂ ಕಡಿತಗೊಂಡಿದೆ. ಈ ಬಾರಿಯ ಮಳೆಗಾಲದಲ್ಲಿ ಹೆಬ್ಬಾಳೆ ಸೇತುವೆ ಮೂರು ಬಾರಿ ಮುಳುಗಡೆಯಾಗಿದ್ದು, ಸೋಮವಾರ ಅಪಾಯವನ್ನು ಲೆಕ್ಕಿಸದೇ ಮುಳುಗಿರುವ ಸೇತುವೆ ಮೇಲೆ ಕೆಎಸ್ಸಾರ್ಟಿಸಿ ಬಸ್ಸೊಂದು ಸಂಚರಿಸಿದ್ದು, ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಭಾಗದಲ್ಲೂ ಮಳೆ ಅಬ್ಬರಿಸುತ್ತಿದ್ದು, ತುಂಗಾನದಿಯಲ್ಲಿನ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಿದೆ. ನಿರಂತರ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಅಲ್ಲಲ್ಲಿ ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಹಲವು ಮನೆಗಳಿಗೆ ಹಾನಿಯಾಗಿದ್ದು, ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಸೋಮವಾರ ಮಳೆಯ ಪ್ರಮಾಣ ಹೆಚ್ಚಾಗಿದ್ದು, ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಭಾರೀ ಮಳೆ ಇದ್ದರೂ ಶಾಲೆಗಳಿಗೆ ರಜೆ ನೀಡದ ಪರಿಣಾಮ ಶಾಲಾ ಮಕ್ಕಳು ಸುರಿಯುವ ಭಾರೀ ಮಳೆಯಲ್ಲೇ ಶಾಲೆಗಳತ್ತ ಹೋಗುತ್ತಿದ್ದ ದೃಶ್ಯ ಕಂಡು ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು. ಕೊಟ್ಟಿಗೆಹಾರ, ಚಾರ್ಮಾಡಿ, ಬಾಳೂರು, ಬಣಕಲ್ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಭಾರೀ ಮಳೆ, ಗಾಳಿಗೆ ಅಲ್ಲಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ

ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲೂ ನಿರಂತರ ಮಳೆಯಾಗುತ್ತಿದೆ. ಈ ಭಾಗದಲ್ಲಿ ಬೆಳೆದಿರುವ ತರಕಾರಿ ಬೆಳೆಗಳು ನಾಶವಾಗುವ ಆತಂಕ ಎದುರಾಗಿದೆ. ಸೋಮವಾರ ಸಂಜೆ ವೇಳೆಗೆ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, ಮೋಡ ಕವಿದ ವಾತವರಣ ಮತ್ತು ಶೀತ ಹವಮಾನ ಮುಂದೂವರೆದಿದೆ. ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಸಾಧಾರಣ ಮಳೆಯಾಗಿದ್ದು, ಮಧ್ಯಾಹ್ನದ ಹೊತ್ತಿನಲ್ಲಿ ಸುಮಾರು 2 ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. 

ಜಿಲ್ಲೆಯಲ್ಲಿ ಜೂನ್‍ನಿಂದ ಆಗಸ್ಟ್ ವರೆಗೆ ಭಾರೀ ಮಳೆಯಿಂದಾಗಿ ಒಟ್ಟು 168.87 ಕೋಟಿ ರೂ. ನಷ್ಟ ಉಂಟಾಗಿದೆ. ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ 18 ವರ್ಷದ ಪ್ರಿಯಾಂಕಾ ಜಮೀನಿನಲ್ಲಿ ಕೆಲಸ ಮಾಡುವಾಗ ಮರಬಿದ್ದು ಸಾವನ್ನಪ್ಪಿದ್ದರೆ, ಹೊಸಪೇಟೆಯ 5 ವರ್ಷದ ಸುಪ್ರಿತಾ ಶಾಲೆಯಿಂದ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಮಳೆಯಿಂದ ಇಬ್ಬರು ಸಾವನ್ನಪ್ಪಿದಂತಾಗಿದೆ. ಇಬ್ಬರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 2 ಜಾನುವಾರುಗಳು ಅಸುನೀಗಿದ್ದು, 1.80 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಜಿಲ್ಲಾದ್ಯಂತ ಒಟ್ಟು 536 ಮನೆಗಳಿಗೆ ಹಾನಿಯಾಗಿದ್ದು, 12.48 ಕೋಟಿ ರೂ. ನಷ್ಟ ಸಂಭವಿಸಿದೆ. ತೋಟಗಾರಿಕೆ ಮತ್ತು ಕೃಷಿ ಜಮೀನು ಸೇರಿದಂತೆ 3219.2 ಹೆಕ್ಟೇರ್‍ನಲ್ಲಿ ಬೆಳೆಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಒಟ್ಟು 1615 ಕಿ.ಮೀ. ರಸ್ತೆಗೆ  ಹಾನಿಯಾಗಿ 129.24 ಕೋಟಿ ರೂ. ನಷ್ಟ ಸಂಭವಿಸಿದೆ. ಮೆಸ್ಕಾಂ ಇಲಾಖೆಯ 1494 ವಿದ್ಯುತ್ ಕಂಬಗಳು ಧರೆಗುರುಳಿದ್ದು, 30 ಕಿ.ಮೀ.ವಿದ್ಯುತ್ ಲೈನಿಗೆ ಧಕ್ಕೆಯಾಗಿ 1.38 ಲಕ್ಷ ನಷ್ಟವಾಗಿದೆ. ಶಿಕ್ಷಣ ಇಲಾಖೆಯ 595 ಶಾಲಾಕಟ್ಟಡಗಳಿಗೆ ಹಾನಿಯಾಗುವ ಮೂಐಲಕ 21.85 ಕೋಟಿ ರೂ. ನಷ್ಟ ಉಂಟಾಗಿದ್ದರೆ, 195 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿ 3.80 ಕೋ. ರೂ. ನಷ್ಟ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News