ಕಾಂಗ್ರೆಸ್ ಮಹಿಳಾ ವಿರೋಧಿ: ಬಿಜೆಪಿ ಆರೋಪ

Update: 2022-08-08 14:23 GMT

ಬೆಂಗಳೂರು, ಆ.8: ಒಂದು ಕಡೆ ಕಾಂಗ್ರೆಸ್ ಪಕ್ಷ ‘ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ’ ಎಂದು ಹೂಂಕರಿಸುತ್ತಾರೆ. ಆದರೆ, ಬಿಬಿಎಂಪಿ ಚುನಾವಣೆಯಲ್ಲಿ ಸಂವಿಧಾನಿಕವಾಗಿ, ಕಾನೂನುಬದ್ಧವಾಗಿ ಮಹಿಳೆಯರಿಗೆ ಮೀಸಲಾತಿ ಒದಗಿಸಿದರೆ ಉರಿದು ಬೀಳುತ್ತಾರೆ. ಕಾಂಗ್ರೆಸ್ ಪಕ್ಷ ಹೀಗೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಯಾವ ಸ್ಥಾನಮಾನ ನೀಡಲಾಗಿದೆ ಎನ್ನುವುದು ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಆತ್ಮಚರಿತೆಯಲ್ಲಿ ಸ್ಪಷ್ಟವಾಗುತ್ತದೆ. ವಿಧಾನಸಭೆ ಸ್ಪೀಕರ್ ಹಾಗೂ ಸಚಿವೆಯಾಗುವ ಅವಕಾಶಕ್ಕೆ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಣ್ಣೀರೆರಚಿದ್ದನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕರೆಂದರೆ ನಕಲಿ ಗಾಂಧಿ ಕುಟುಂಬದ ಸದಸ್ಯರು ಮಾತ್ರ. ಅದೇ ಕುಟುಂಬದ ಮಹಿಳೆಯರು ಪ್ರಧಾನಿಯಾಗಬೇಕು, ಪಕ್ಷದ ಅಧ್ಯಕ್ಷರಾಗಬೇಕು ಹಾಗೂ ಇನ್ನಿತರ ಉನ್ನತ ಹುದ್ದೆ ಹೊಂದಿರಬೇಕು. ಇದನ್ನು ಮಹಿಳಾ ಸಬಲೀಕರಣ ಎನ್ನುವುದಿಲ್ಲ, ಇದನ್ನು ನಕಲಿ ಗಾಂಧಿ ಕುಟುಂಬದ ಸಬಲೀಕರಣ ಎನ್ನುತ್ತಾರೆ ಅಷ್ಟೇ ಎಂದು ಬಿಜೆಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News