ಸದ್ದು, ಗದ್ದಲವಿಲ್ಲದೆ, ಉಳ್ಳವರಿಗೆ ಶೇ.10ರಷ್ಟು ಮೀಸಲಾತಿ ಹೇಗೆ ಬಂತು: ಸಿದ್ದರಾಮಯ್ಯ ಪ್ರಶ್ನೆ

Update: 2022-08-08 16:44 GMT

ಬೆಂಗಳೂರು, ಆ.8: ಯಾವುದೇ ಹೋರಾಟ, ಸದ್ದು, ಗದ್ದಲ ಇಲ್ಲದೆ, ಉಳ್ಳವರಿಗೆ ಶೇಕಡಾ 10 ರಷ್ಟು ಮೀಸಲಾತಿ ಜಾರಿ ಹೇಗೆ ಬಂತು. ಇದನ್ನು ಸುಪ್ರೀಂಕೋರ್ಟ್ ಏಕೆ ಪ್ರಶ್ನಿಸಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಏರ್ಪಡಿಸಿದ್ದ ಹಾವನೂರು ಆಯೋಗದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಮೇಲ್ವರ್ಗಕ್ಕೆ ಸುಲಭವಾಗಿ ಶೇ.10ರಷ್ಟು ಮೀಸಲಾತಿಯನ್ನು ಘೋಷಣೆ ಮಾಡಿದೆ. ಆದರೆ, ಈ ವರ್ಗ ಎಂದೂ ಹೋರಾಟ ಮಾಡಲಿಲ್ಲ. ಎಲ್ಲಿಯೂ ಸದ್ದು, ಗದ್ದಲವೇ ಇರಲಿಲ್ಲ. ಹೀಗೆ, ಇದ್ದರೂ, ಅವರಿಗೆ ನೇರವಾಗಿ ಮೀಸಲಾತಿ ಹೇಗೆ ಬಂತು. ಮೀಸಲಾತಿ ಹೆಚ್ಚಾಗಬಾರದು ಎಂದು ನುಡಿಯುವ ಸುಪ್ರೀಂಕೋರ್ಟ್ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ನುಡಿದರು.

ಎಲ್ಲ ವಲಯಗಳಲ್ಲೂ ಮೀಸಲಾತಿ ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಇಂತಹ ಒಳ ಸಂಚಿನ ವಿರುದ್ಧ ನಾವು ಧ್ವನಿಗೂಡಿಸದೆ ಮೌನವಾಗಿದ್ದರೆ, ಮೀಸಲಾತಿಯೇ ಮಾಯವಾಗಲಿದೆ ಎಂದ ಅವರು, ನಮ್ಮವರೇ ನಮಗೆ ಬಲಿಷ್ಠ ಪ್ರಧಾನಿ ಬೇಕೆಂದು ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದರು. ಆದರೆ, ಅವರು ಎಲ್ಲ ವಲಯಗಳನ್ನು ಖಾಸಗೀಕರಣ ಮಾಡುತ್ತಿದ್ದು, ಇದರಿಂದ ಮೀಸಲಾತಿ ಕಳೆದುಕೊಳ್ಳಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ನ್ಯಾಯಾಂಗ, ಲೋಕಸಭೆ, ರಾಜ್ಯಸಭೆಯಲ್ಲೂ ಮೀಸಲಾತಿ ಜಾರಿಯಾಗಬೇಕು. ಆಗ ಮಾತ್ರ ಸಮಾನತೆ, ಆರ್ಥಿಕ ಪ್ರಗತಿ ಕಾರಣು ಸಾಧ್ಯ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಹೋರಾಟಗಳನ್ನು ರೂಪಿಸಬೇಕಾಗಿದ್ದು, ಇದಕ್ಕೆ ಹಾವನೂರು ಆಯೋಗದ ಸುವರ್ಣ ಮಹೋತ್ಸವ ವೇದಿಕೆ ಆಗಬೇಕೆಂದು ನುಡಿದರು.

ಸಮೀಕ್ಷೆ ನಡೆಸದ ಗಿರಾಕಿ: ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ನಿಖರವಾದ ಅಂಕಿಅಂಶಗಳ ಸಮೇತ ಪರಿಶೀಲನೆ ನಡೆಸಿ ರಾಜಕೀಯ ಮೀಸಲಾತಿ ನಿಗದಿಪಡಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ನೇಮಕ ಮಾಡಲಾಗಿತ್ತು. ಆದರೆ, ಈ ಗಿರಾಕಿ ಸಮೀಕ್ಷೆಯೇ ನಡೆಸಿಲ್ಲ, ಆದರೂ, ವರದಿ ಸಲ್ಲಿಕೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮೀಸಲಾತಿ ಭಿಕ್ಷೆ ಅಲ್ಲ. ಅದು ಸಾಂವಿಧಾನಿಕ ಹಕ್ಕು. ನ್ಯಾಯಾಲಯದ ಅಸ್ಪಷ್ಟ ತೀರ್ಪುಗಳಿಂದ ಶೋಷಿತ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ ಅವರು, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಬೇಕಿದೆ.

ಬರೀ ಬಾಯಿಮಾತಿನ ಸಮಾನತೆ ಪ್ರತಿಪಾದನೆಯಿಂದ ಬದಲಾವಣೆ ಅಸಾಧ್ಯ. ಸ್ವಾತಂತ್ರ್ಯ ಲಭಿಸಿ, 75 ವರ್ಷವಾದರೂ ಶೋಷಿತರ ಬದುಕಿನಲ್ಲಿ ಬದಲಾವಣೆಯ ಬೆಳಕು ಕಂಡಿಲ್ಲ. ಎಸ್ಟಿ, ಎಸ್ಸಿ ಸಮುದಾಯಕ್ಕೆ ಸಂವಿಧಾನಬದ್ಧ ಮೀಸಲಾತಿ ಇತ್ತು. ಆದರೆ, ಹಿಂದುಳಿದ ವರ್ಗಕ್ಕೆ 1990ರ ವೇಳೆಗೆ ಶೇ.27ರಷ್ಟು ಮೀಸಲಾತಿ ಲಭಿಸಿತ್ತು. ಅದನ್ನೂ ನಾಶಪಡಿಸುವ ಹುನ್ನಾರ ನಡೆಯುತ್ತಿದೆ ಎಂದರು.

ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಮಾಜಿ ರಾಜ್ಯಪಾಲ ನ್ಯಾ.ರಾಮಾಜೋಯಿಸ್ ಸುಪ್ರೀಂಕೋರ್ಟಿನಲ್ಲಿ ಮೀಸಲಾತಿ ಬೇಡವೆಂದು ಅರ್ಜಿ ಹಾಕಿದ್ದರು. ಅದೃಷ್ಟವಶಾತ್ ರಾಮಾಜೋಯಿಸ್ ಅರ್ಜಿ ಕೋರ್ಟಿನಲ್ಲಿ ತಿರಸ್ಕøತವಾಯಿತು. ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ತುಂಬಾ ಅನ್ಯಾಯವಾಗತ್ತಿತ್ತು. ಬಿಜೆಪಿಯವರಿಗೆ ಹಿಂದುಳಿದ ವರ್ಗಗಳ ಹೆಸರು ಹೇಳುವ ನೈತಿಕತೆ ಇಲ್ಲ. ಹಿಂದುಳಿದ ವರ್ಗಗಳು ಬಿಜೆಪಿ ಕಡೆಗೆ ತಲೆ ಹಾಕಿಯೂ ಮಲಗಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು.

ತಮಿಳುನಾಡಿನ ದ್ರಾವಿಡ ಕಳಗಂ ಅಧ್ಯಕ್ಷ ಡಾ.ಕೆ.ವೀರಮಣಿ ಮಾತನಾಡಿ, ಹಾವನೂರರ ಬಗ್ಗೆ ತಾವು ಅಪಾರ ಅಭಿಮಾನ ಹೊಂದಿದ್ದೇನೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರರು ನೀಡಿದ ವರದಿಯ ಫಲಶ್ರುತಿಯೇ ಅಹಿಂದ ವರ್ಗದ ಚಿಂತನೆಗೆ ಮೂಲ ಕಾರಣವಾಗಿದ್ದು, ಆ ವರ್ಗವನ್ನು ಪ್ರತಿನಿಧಿಸುವ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಲು ಪೂರಕವಾಗಿದೆ. ಹಾವನೂರು ವರದಿಯಿಂದಾಗಿ ಶೋಷಿತ ವರ್ಗದ ಜನರು ವಿದ್ಯಾಕ್ಷೇತ್ರ, ಸರಕಾರಿ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸ್ಥಾನಮಾನ ಗಳಿಸಲು ಸಾಧ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ರವಿವರ್ಮಕುಮಾರ್ ಮಾತನಾಡಿ, ಇಂದಿಗೂ ಹಿಂದುಳಿದ ವರ್ಗದ ಜನರಲ್ಲಿ ಹಾವನೂರು ಅವರು ಅಜರಾಮರವಾಗಿದ್ದಾರೆ. 1972ರಲ್ಲಿ ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರ ನೇತತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿದರು. ಅದರಂತೆ ಆಯೋಗದ ಜವಾಬ್ದಾರಿ ವಹಿಸಿಕೊಂಡ ಹಾವನೂರು ಅವರು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಎಲ್ಲ ಸಂಗತಿಗಳನ್ನು ವೆಜ್ಞಾನಿಕವಾಗಿ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ, ದಕ್ಷಿಣ ಆಫ್ರಿಕಾದವರು ಸಂವಿಧಾನವನ್ನು ಬರೆಯುವಾಗ ಎಲ್.ಜಿ.ಹಾವನೂರು ಅವರನ್ನು ಕರೆಸಿಕೊಂಡಿದ್ದರು ಎನ್ನುವುದು ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಆರ್.ವೆಂಕಟರಾಮಯ್ಯ, ವಕೀಲ ಜಿ.ಡಿ.ಗೋಪಾಲ್, ಸಿ.ಎಲ್.ರವಿಕುಮಾರ್ ಸೇರಿದಂತೆ ಪ್ರಮುಖರಿದ್ದರು.

''ಪ್ರಜಾಪ್ರಭುತ್ವ ಉಳಿಸುವಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು ''

ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ವನಿ ಇದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಹೋರಾಟದಲ್ಲಿ ಅವರು ಸದಾ ಮುಂದೆ ಇರುತ್ತಾರೆ. ಇಂತಹ ಹೋರಾಟಗಾರರಿಂದ ದೇಶ ಉಳಿದಿದೆ.

-ಡಾ.ಕೆ.ವೀರಮಣಿ, ಅಧ್ಯಕ್ಷ, ತಮಿಳುನಾಡಿನ ದ್ರಾವಿಡ ಕಳಗಂ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News