ಖಾದಿ ರಾಷ್ಟ್ರಧ್ವಜವನ್ನು ಏಕೆ ತೆಗೆದು ಹಾಕಿದಿರಿ: ಪ್ರಧಾನಿ ಮೋದಿಗೆ ರಂಗಕರ್ಮಿ ಪ್ರಸನ್ನರಿಂದ ಪ್ರಶ್ನೆ

Update: 2022-08-08 16:57 GMT

ಮೈಸೂರು,ಆ.8: ಭಾತರದ ರಾಷ್ಟ್ರ ಧ್ವಜ ಖಾದಿ ಬಟ್ಟೆಯಿಂದ ಹಾರಿಸುವುದನ್ನು ತೆಗೆದು ಹಾಕಿರುವುದನ್ನು ಖಂಡಿಸಿ ದೇಶಾದ್ಯಂತ ಧ್ವಜ   ಸತ್ಯಾಗ್ರಾಹ ನಡೆಸುತ್ತಿರುವ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ಹತ್ತು ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರ ಕೊಡುವಂತೆ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಧ್ವಜ ಸತ್ಯಾಗ್ರಹ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾದಿ ದೇಶದ ಸಂಸ್ಕೃತಿ ಯ ಸಂಕೇತ ಅಂತಹ  ಸಂಸ್ಕೃತಿಯನ್ನೇ ಹಾಳುಮಾಡಿ ಚೀನಾದಿಂದ ಆಮದು ಮಾಡಿಕೊಂಡ ರಾಷ್ಟ್ರಧ್ವಜ ಮತ್ತು ಯಾರೋ ಒಬ್ಬ ಉದ್ಯಮಿ  ಪಾಲಿಸ್ಟರ್ ನಿಂದ ಮಾಡಿದ ಧ್ವಜವನ್ನು ಹಾರಿಸುವುದು ಅತ್ಯಂತ ಖಂಡೀಯ ಹಾಗೂ ರಾಷ್ಟ್ರಕ್ಕೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾದಿ ಧ್ವಜದಿಂದ ತಯಾರಿಸಲಾದ ರಾಷ್ಟ್ರ ಧ್ವಜವನ್ನು ಹಾರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ, ದಕ್ಷಿಣ ಭಾರತದಿಂದ ಆರಂಭವಾದ ಈ ಧ್ವಜ ಸತ್ಯಾಗ್ರಹ ದೇಶಾದ್ಯಂತ ನಡೆಯಲಿದೆ. ಈ ಮೂಲಕ ಪ್ರಧಾನಿಗಳಿಗೆ ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಎಂದು ತಿಳಿಸಿದರು.

►ಮಾನ್ಯ ಪ್ರಧಾಮ ಮಂತ್ರಿ ನರೇಂದ್ರ ಮೋದಿ ಅವರೆ ರಾಷ್ಟ್ರಧ್ವಜದಿಂದ ಖಾದಿಯನ್ನೇಕೆ ಕಿತ್ತು ಹಾಕಿದಿರಿ?

►ಸರಕಾರಿ ಕಛೇರಿಗಳ ಮೂಲಕ, ಬ್ಯಾಂಕು, ಮುನಿಸಿಪಾಲಿಟಿ ಅಥವಾ ಇತರೆ ಸ್ವಾಯತ್ತ ಸಂಸ್ಥೆಗಳ ಮೂಲಕ, ವಿದೇಶಿವಸ್ತ್ರ ಹಾಗೂ ಸಿಂಥೆಟಿಕ್ ವಸ್ತ್ರದಿಂದ ತಯಾರಾದ ಧ್ವಜಗಳನ್ನೇಕೆ ಬಲವಂತದಿಂದ ಮಾರಾಟ ಮಾಡಿಸುತ್ತಿದ್ದೀರಿ? ಅವು ಅಲ್ಲಲ್ಲಿ ಹರಿದಿದೆ, ಹಾಳಾಗಿವೆ, ಅಳತೆ ತಪ್ಪಿವೆ, ಆಕಾರ ತಪ್ಪಿವೆ, ಅಶೋಕಚಕ್ರವು ಎತ್ತೆತ್ತಲೋ ಹೊರಳಿದೆ, ಚಕ್ರದ ಕೀಲುಗಳ ಸಂಖ್ಯೆ ಏರುಪೇರಾಗಿವೆ ಎಂಬ ಸಂಗತಿಯು ತಮ್ಮ ಗಮನಕ್ಕೆ ಬಂದಿಲ್ಲವೆ?

► ಇಂತಹ ಬಾವುಟಗಳ ಭ್ರಷ್ಟ ಉತ್ಪಾದಕರನ್ನು ಶಿಕ್ಷಿಸುವ ಬದಲು ಭ್ರಷ್ಟಗೊಂಡ ಬಾವುಟಗಳನ್ನೇ ಅಧಿಕೃತವಾಗಿ ಮಾರಾಟ ಮಾಡುವುದು ಭ್ರಷ್ಟಾಚಾರವಲ್ಲವೆ?

► ನಮ್ಮ ಧ್ವಜ ಅಹಿಂಸೆಯ ದ್ಯೋತಕವಾದದ್ದು. ಶಾಂತಿಪ್ರಿಯ ಅಶೋಕನ ಲಾಂಛನ ಹಾಗೂ ಅಹಿಂಸಾತ್ಮಕ ಖಾದಿಬಟ್ಟೆಗಳು ಅದರಲ್ಲಿ ಅಂತರ್ಗತವಾಗಿವೆ. ಹೀಗಿರುವಾಗ, ಸ್ವಾತಂತ್ರ್ಯದ ಅಮೃತಮಹೋತ್ಸವದ ಬಾವುಟ ಕಾರ್ಯಕ್ರಮವನ್ನು ಯುದ್ಧಭೂಮಿಯೊಂದರಿಂದ ಉದ್ಘಾಟಿಸಿ, ಭಾರತವು ಹಿಂಸಾವಾದಿ ದೇಶವೆಂಬ ಸಂಕೇತವನ್ನೇಕೆ ಜಗತ್ತಿಗೆ ಸಾರುತ್ತಿದ್ದೀರಿ?

► ಸಿಂಥೆಟಿಕ್ ಬಾವುಟಗಳ ಉತ್ಪಾದನೆ, ಆಯತ, ವಿತರಣೆಗೆಂದು ತಮ್ಮ ಸರಕಾರವು ಎಷ್ಟು ಪ್ರಮಾಣದ ತೆರಿಗೆ ಹಣವನ್ನು ಖರ್ಚು ಮಾಡಿದೆ?

► ಇತ್ತ ಖಾದಿ ಹಾಗೂ ಗ್ರಾಮೋದ್ಯೋಗದ ಉದ್ಪಾದನೆ, ಆಯಾತ, ವಿತರಣೆಯನ್ನೇ ಹೆಚ್ಚುಕಡಿಮೆ ಸ್ಥಗಿತಗೊಳಿಸಿರುವ ತಮ್ಮ ಸರಕಾರವು ಇದೇ ಹಣವನ್ನು ಗ್ರಾಮೋದ್ಯೋಗದ ಪುನಶ್ಚೇತನಕ್ಕಾಗಿ ಖರ್ಚು ಮಾಡಬಹುದಿತ್ತಲ್ಲವೇ? ಬಡವರ ಪರವಾದ ಕಾರ್ಯಕ್ರಮವಲ್ಲವೇ ಸ್ವದೇಶಿ?

► ಭಾರತದ ರಾಷ್ಟ್ರಧ್ವಜವು ಚೀನಾದಿಂದ ನಿರ್ಮಾಣಗೊಂಡು ಅಧಿಕೃತವಾಗಿ ಮಾರಾಟಗೊಳ್ಳುತ್ತಿದೆ ಎಂಬ ಸುದ್ದಿ ನಿಜವೇ?

► ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಅಗತ್ಯವಿಲ್ಲ. ಮಳೆಯಿರಲಿ, ಬಿಸಿಲಿರಲಿ, ಹಗಲಿರಲಿ, ರಾತ್ರಿಯಿರಲಿ, ಧ್ವಜವು ಹರಿದಿರಲಿ, ಮಲಿನವಾಗಿರಲಿ, ಕಂಬಕ್ಕೆ ಜೋತು ಬಿದ್ದಿರಬೇಕು ಎಂದು ಧ್ವಜನಿಯಮವನ್ನು ತಾವು ತಿದ್ದಿರುವುದು ಸರಿಯೇ? 

► ಹರ್-ಘರ್-ತಿರಂಗ ಎಂಬುದು, ವಿದೇಶಿಯರೇ ದೇಶಬಿಟ್ಟು ತೊಲಗಿ ಎಂಬ ಸ್ವದೇಶಿ ಚಳುವಳಿಯ ಕೂಗಾಗಿತ್ತು. ಪವಿತ್ರ ಆರ್ಥಿಕಥೆ ಹಾಗೂ ಸ್ವದೇಶಿ ಉತ್ದಾದನೆಗಳನ್ನು ಕಡೆಗಣಿಸಿರುವ ತಮ್ಮ ಸರಕಾರವು ಹರ್-ಘರ್-ತಿರಂಗ ಎಂದು ಕೂಗುವುದು ವಿಪರ್ಯಾಸವಲ್ಲವೆ?

► ಸರಕಾರದ ಅಧೀನದಲ್ಲಿರುವ ಖಾದಿ ಸಂಸ್ಥೆಯು ಶುದ್ಧ ಖಾದಿಬಾವುಟವನ್ನು ಸಾಮಾನ್ಯರ ಕೈಗೆಟುಕದಂತಹ, ಅತಿ ದುಬಾರಿಬೆಲೆಗೆ ಮಾರುತ್ತಿರುವುದು ಸರಿಯೆ? ಕಲೆ ಹಾಗೂ ಸಾಹಿತ್ಯಗಳಿಗೆ ಸಂಬಂಧಿಸಿದ ಅಕಾಡೆಮಿಗಳು ಸರಕಾರದ ಕಾರ್ಯಕ್ರಮವನ್ನು ಬೆಂಬಲಿಸುವಂತೆ ಸಾಹಿತಿ ಕಲಾವಿದರುಗಳ ಮೇಲೆ ಬಲವಂತ ಹೇರುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ? ಎಂದು ಕೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಧ್ವಜ ಸತ್ಯಾಗ್ರಹ ಸಮಿತಿ ಸಂಚಾಲಕ ಕಾಳಚನ್ನೇಗೌಡ, ಏಕಪರಿಷತ್ ಸಮಿತಿಯ ಪಿ.ವಿ.ರಾಜಗೋಪಾಲ್, ಜಿಲ್.ಕೆ.ಹ್ಯಾರಿಸ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೇ, ರಾಷ್ಟ್ರೀಯ ಸಮಿತಿ ಅಧ್ಯಕ್ಷ ರಾಜಗೋಪಾಲ್ ಉಪಸ್ಥಿತರಿದ್ದರು.



ಖಾದಿ ಧ್ವಜದ ಮೂಲಕ ಗ್ರಾಮೋದ್ಯೋಗವನ್ನು ನಂಬಿಕೊಂಡಿದ್ದವರ ಬದುಕನ್ನು ಈ ಸರ್ಕಾರ ಹಾಳು ಮಾಡಿದೆ. ಒಂದು ಖಾದಿ ಧ್ವಜ ತಯಾರಿಕೆಯಿಂದ ಹತ್ತು ಮಂದಿಗೆ ಉದ್ಯೋಗ ದೊರೆಯುತ್ತಿತ್ತು. ಆದರೆ ಪಾಲಿಸ್ಟರ್, ಸಿಂಥೆಟಿಕ್ ಧ್ವಜ ತಯಾರು ಮಾಡುವ ಮೂಲಕ ಒ್ಬ ಉದ್ಯಮಿಗೆ ಲಾಭ ಮಾಡಲಾಗುತ್ತಿದೆ.

- ಪ್ರಸನ್ನ ಹೆಗ್ಗೋಡು, ಹಿರಿಯ ರಂಗಕರ್ಮಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News