ನಾಡದೋಣಿಗಳು ಹಾನಿಗೊಂಡ ಶೀರೂರು ಕಳಿಹಿತ್ಲುಗೆ ಸಚಿವ ಎಸ್ ಅಂಗಾರ ಭೇಟಿ

Update: 2022-08-10 14:00 GMT

ಶಿರೂರು, ಆ.10: ಕಳೆದ ಆ.2ರಂದು ರಾತ್ರಿ ಹಠಾತ್ ಸುರಿದ ಭಾರೀ ಮಳೆಯಿಂದ 40ಕ್ಕೂ ಅಧಿಕ ನಾಡದೋಣಿಗಳು ಹಾನಿಗೊಂಡು ಕೋಟ್ಯಾಂತರ ರೂ.ನಷ್ಟ ಸಂಭವಿಸಿದ ಶಿರೂರು ಕೆಳಪೇಟೆ ಕಳಿಹಿತ್ಲು ಪ್ರದೇಶಕ್ಕೆ ರಾಜ್ಯ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಇಂದು ಭೇಟಿ ನೀಡಿದರು.

ಮೀನುಗಾರಿಕೆ ನಿಷೇಧವಿರುವ ಮಳೆಗಾಲದಲ್ಲಿ ದಡಸೇರಿದ್ದ ಈ ಯಾಂತ್ರೀಕೃತ ನಾಡದೋಣಿಗಳಲ್ಲಿದ್ದ ಎಲ್ಲಾ ಮೀನುಗಾರಿಕಾ ಉಪಕರಣಗಳೊಂದಿಗೆ ಬಲೆಯೂ ಸೇರಿ ಎಲ್ಲವೂ ಹಾನಿಗೊಂಡು ಸಮುದ್ರ ಪಾಲಾಗಿರುವುದನ್ನು ಸಚಿವರು ವೀಕ್ಷಿಸಿದರು.

ಹಾನಿಗೊಂಡ ದೋಣಿಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಂಗಾರ, ಹಠಾತ್ತನೆ ಸುರಿದ ಭಾರೀ ಮಳೆಯಿಂದ ಶಿರೂರು ಆಸುಪಾಸಿನ 48ಕ್ಕೂ ಅಧಿಕ ನಾಡದೋಣಿಗಳು, ಅದರಲ್ಲಿದ್ದ ವಿವಿಧ ಮೀನುಗಾರಿಕಾ ಉಪಕರಣ, ಇಂಜಿನ್ ಹಾಗೂ ಬಲೆಗಳೊಂದಿಗೆ ಹಾನಿಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿ ಗಳಿಂದ ಸಮಗ್ರ ವರದಿ ತರಿಸಿ ಪರಿಶೀಲಿಸಿದ್ದೇನೆ ಎಂದರು.

ಪ್ರಾಕೃತಿಕ ವಿಕೋಪ ನಿಧಿ ಅಡಿಯಲ್ಲಿ ಇಂಥ ಭಾರೀ ಪ್ರಮಾಣದ ಹಾನಿಗೆ  ಹೆಚ್ಚಿನ ಅನುದಾನ ನೀಡಲು ಸಾಧ್ಯವಿಲ್ಲದಿರುವುದರಿಂದ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಇಲಾಖೆ ವತಿಯಿಂದ ಮೀನುಗಾರರಿಗೆ ಸೂಕ್ತ ನೆರವು ನೀಡಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ಎಲ್ಲವನ್ನೂ ಕಳೆದುಕೊಂಡಿರುವ ೪೦ಕ್ಕೂ ಅಧಿಕ ನಾಡದೋಣಿಗಳ ಮೀನುಗಾರರಿಗೆ ಸದ್ಯಕ್ಕೆ ತುರ್ತು ಪರಿಹಾರ ನೀಡುವ ಬಗ್ಗೆ ಪ್ರಶ್ನಿಸಿದಾಗ, ಮುಂದಿನ ಆ.೧೨ರಂದು ಸಚಿವ ಸಂಪುಟದ ಸಭೆ ನಡೆಯಲಿದೆ. ಅಲ್ಲಿ ಈ ಬಗ್ಗೆ  ಸಮಗ್ರವಾಗಿ ಚರ್ಚಿಸಿ ಮೀನುಗಾರರಿಗೆ ಆಗಿರುವ ಹಾನಿಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗರಿಷ್ಠ ಪರಿಹಾರ ನೀಡುವ ಬಗ್ಗೆ ಪ್ರಯತ್ನಿಸುವುದಾಗಿ ಸಚಿವರು ತಿಳಿಸಿದರು.

ಈ ಭಾಗದ ಮೀನುಗಾರರ ಹಲವು ಸಮಸ್ಯೆಗಳ ಕುರಿತಂತೆ ತಮಗೆ ಅರಿವಿದೆ. ಅದರ  ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು. ಇತ್ತೀಚೆಗೆ ಹೊಸದಿಲ್ಲಿಗೆ ತೆರಳಿ ಕೇಂದ್ರ ಮೀನುಗಾರಿಕಾ ಸಚಿವರೊಂದಿಗೆ ಮಾತನಾಡಿ ಬೇಡಿಕೆಗಳ ಮನವಿಯೊಂದನ್ನು ನೀಡಿದ್ದೇನೆ. ಅವುಗಳಲ್ಲಿ ಈಗಾಗಲೇ ೮-೯ ಬೇಡಿಕೆಗಳಿಗೆ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದರು.

ಮೀನುಗಾರರ ಸೀಮೆಎಣ್ಣೆ ಸಮಸ್ಯೆ, ಕೊಡೇರಿ ಬಂದರಿನ ಕಾಮಗಾರಿಯ ಪ್ರಗತಿ, ಬಂದರಿನ ಹೂಳೆತ್ತುವ ಕಾಮಗಾರಿ, ಜೆಟ್ಟಿನ ನಿರ್ಮಾಣದ ಬಗ್ಗೆಯೂ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಈ ಸಂಬಂಧದ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಉಡುಪಿ ಜಿಪಂ ಸಿಇಓ ಪ್ರಸನ್ನ ಎಚ್., ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕಿ ಸುಮಲತಾ, ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ, ಉಪತಹಶೀಲ್ದಾರ್ ಬೀಮಪ್ಪ ಬಿಲ್ಲಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ,ವಿವಿಧ ಇಲಾಖಾ ಅಧಿಕಾರಿಗಳು, ಬಿಜೆಪಿಯ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News