ಎಂಟನೇ ಬಾರಿಗೆ ಬಿಹಾರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್

Update: 2022-08-10 15:34 GMT

ಪಾಟ್ನಾ,ಆ.10: ಮಂಗಳವಾರ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡ ಬಳಿಕ ಬಿಹಾರದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ನಿತೀಶ ಕುಮಾರ ಬುಧವಾರ ರಾಜ್ಯದ ಮುಖ್ಯಮಂತ್ರಿಯಾಗಿ ಎಂಟನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ತನ್ಮೂಲಕ ಹೊಸ ಮೈತ್ರಿಕೂಟದೊಂದಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಪ್ರಮಾಣ ವಚನ ಸ್ವೀಕಾರದ ಬಳಿಕ ಮುಂದಿನ ಲೋಕಸಭಾ ಚುನಾವಣೆಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಟ್ಟುಕೊಂಡು,‌ ಅವರು 2014ರಲ್ಲಿ ಗೆದ್ದಿದ್ದರು,2024ರಲ್ಲಿ ಗೆಲ್ಲುವರೇ ಎಂದು ಸವಾಲೊಡ್ಡಿದರು.

ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳ ಏಕತೆಗಾಗಿ ಶ್ರಮಿಸುವುದಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಹೇಳಿದರು. ನೀವು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಲು ಬಯಸಿದ್ದೀರಾ ಎಂಬ ಪ್ರಶ್ನೆಗೆ ಅವರು,ತಾನು ಯಾವುದಕ್ಕೂ ಸ್ಪರ್ಧಿಯಲ್ಲ. 2014ರಲ್ಲಿ ಬಂದಿದ್ದ ವ್ಯಕ್ತಿ 2024ರಲ್ಲಿ ಗೆಲ್ಲುವರೇ ಎನ್ನುವುದು ಕೇಳಬೇಕಾದ ಪ್ರಶ್ನೆಯಾಗಿದೆ ಎಂದು ಉತ್ತರಿಸಿದರು. ಲೋಕಸಭಾ ಚುನಾವಣೆಗಳ ಒಂದು ವರ್ಷದ ಬಳಿಕ,ಅಂದರೆ 2025ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

2024ರಲ್ಲಿ ನಿತೀಶ ಇನ್ನೂ ಅಧಿಕಾರದಲ್ಲಿರುವ ಸಾಧ್ಯತೆಯಿದೆ. ಇದರರ್ಥ ಕಾಂಗ್ರೆಸ್ ದುರ್ಬಲಗೊಂಡಿರುವಾಗ ಮತ್ತು ಪ್ರತಿಪಕ್ಷಗಳು ಒಗ್ಗಟ್ಟಾಗುವುದರಿಂದ ಇನ್ನೂ ಬಹಳ ದೂರವಿರುವುದರಿಂದ ಪ್ರಧಾನಿ ಹುದ್ದೆಗೆ ಸವಾಲುದಾರರು ಯಾರು ಎಂಬ ಊಹಾಪೋಹಗಳು ಶೀಘ್ರವೇ ಅಂತ್ಯಗೊಳ್ಳುವ ಸಾಧ್ಯತೆಯಿಲ್ಲ. ಪ್ರಸ್ತುತ ನಿತೀಶ ಕುಮಾರ ಅವರು ಭಾರತದ ಅತ್ಯಂತ ಅನುಭವಿ ಮುಖ್ಯಮಂತ್ರಿ ಎಂದು ಬಿಹಾರದ ನೂತನ ಉಪಮುಖ್ಯಮಂತ್ರಿ,ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ನಾಯಕನ ಪಾತ್ರವನ್ನು ನಿರ್ವಹಿಸದಿದ್ದರೆ ನಿತೀಶ್ ಕುಮಾರ್ ಪ್ರಧಾನಿ ಹುದ್ದೆಗೆ ಪ್ರತಿಪಕ್ಷ ಅಭ್ಯರ್ಥಿಯಾಗಬಹುದು ಎಂಬ ಸಿದ್ಧಾಂತವನ್ನು ವಿಶ್ಲೇಷಕರು ವರ್ಷಗಳಿಂದಲೂ ಮಂಡಿಸಿದ್ದಾರೆ. ಆದರೆ ನಿತೀಶ್ ಆಗಾಗ್ಗೆ ಬಿಜೆಪಿಯೊಂದಿಗಿನ ಮತ್ತು ಬಿಜೆಪಿ ವಿರುದ್ಧದ ಮೈತ್ರಿಕೂಟಗಳ ನಡುವೆ ಜಿಗಿಯುತ್ತಿರುವುದರಿಂದ ಈ ಸಿದ್ಧಾಂತವು ಬಲವನ್ನು ಕಳೆದುಕೊಂಡಿದೆ.

ಮಂಗಳವಾರದವರೆಗೂ ನಿತೀಶ್ 2019ರಲ್ಲಿ ಚುನಾವಣೆಯನ್ನು ಗೆದ್ದಿದ್ದ ಜೆಡಿಯು-ಬಿಜೆಪಿ ಮೈತ್ರಿಕೂಟದ ಮುಖ್ಯಮಂತ್ರಿಯಾಗಿದ್ದರು. ಈಗ ಅವರು ಹಳೆಯ ಸ್ನೇಹಿತ ಲಾಲು ಯಾದವರ ಆರ್ಜೆಡಿಯನ್ನು ಪುನಃ ಅಪ್ಪಿಕೊಂಡಿದ್ದಾರೆ ಮತ್ತು ಯಾದವ ಪುತ್ರ ತೇಜಸ್ವಿ ಹೊಸ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗುವ ಮೂಲಕ 2015ರ ಮಹಾಘಟಬಂಧನ್ ಪುನರಾವರ್ತನೆಯಾಗಿದೆ. ‌ಮಹಾ ಘಟಬಂಧನ್ನ ಪಾಲುದಾರರಲ್ಲಿ ಕಾಂಗ್ರೆಸ್ ಒಂದಾಗಿದೆ.

ಜೆಡಿಯು-ಆರ್ಜೆಡಿ-ಕಾಂಗ್ರೆಸ್ ನಡುವಿನ ಮೊದಲ ಘಟಬಂಧನ್ 2015ರಲ್ಲಿ ಅಧಿಕಾರವನ್ನು ಗೆದ್ದುಕೊಂಡಿತ್ತು. ನಿತೀಶ ಬಿಜೆಪಿ ಜೊತೆಗಿನ ತನ್ನ ಎರಡು ದಶಕಗಳ ಸಂಬಂಧವನ್ನು ಕಡಿದುಕೊಂಡ ಬಳಿಕ ಮಹಾ ಘಟಬಂಧನ್ನ ಮೊದಲ ಆವೃತ್ತಿ ರೂಪುಗೊಂಡಿತ್ತು. ಎರಡು ವರ್ಷಗಳ ಬಳಿಕ ಮಹಾಘಟಬಂಧನ್ನಿಂದ ಹೊರಬಂದಿದ್ದ ನಿತೀಶ ಪ್ರಧಾನಿ ಮೋದಿಯವರ ಪಕ್ಷದೊಂದಿಗೆ ಕೈಜೋಡಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಳಿಕ 2020ರಲ್ಲಿ ಜೆಡಿಯು ಮತ್ತು ಬಿಜೆಪಿ ಒಂದಾಗಿ ಚುನಾವಣೆಯನ್ನು ಎದುರಿಸಿದ್ದವು. ಎರಡು ವರ್ಷಗಳ ಬಳಿಕ ಈಗ ನಿತೀಶ ಮತ್ತೆ ಮಗ್ಗಲು ಬದಲಿಸಿದ್ದಾರೆ.

2020ರಲ್ಲಿ ಬಿಜೆಪಿಯ ಮೈತ್ರಿಯೊಂದಿಗೆ ಚುನಾವಣೆಯನ್ನು ಗೆದ್ದ ಬಳಿಕ ಮುಖ್ಯಮಂತ್ರಿಯಾಗಲು ತಾನು ಬಯಸಿರಲಿಲ್ಲ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದ ನಿತೀಶ,‘ಜೆಡಿಯುದಲ್ಲಿನ ಜನರು ಯಾವ ಮಟ್ಟಕ್ಕೆ ಇಳಿಸಲ್ಪಟ್ಟಿದ್ದಾರೆ ಎನ್ನುವುದನ್ನು ಅವರನ್ನೇ ಕೇಳಿ. ನಾನು ಮುಖ್ಯಮಂತ್ರಿಯಾಗಲು ಬಯಸಿರಲಿಲ್ಲ,ಆದರೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಅದರ ನಂತರ ಏನಾಯಿತು ಎನ್ನುವುದನ್ನು ನೀವು ನೋಡಿದ್ದೀರಿ. ಕಳೆದ ಎರಡು ತಿಂಗಳುಗಳಿಂದ ನಾನು ನಿಮ್ಮಿಂದಿಗೆ ಮಾತನ್ನೂ ಆಡಿರಲಿಲ್ಲ ’ ಎಂದರು.

2015ರ ಚುನಾವಣಾ ಫಲಿತಾಂಶವನ್ನು ಮತ್ತು ಆ ಬಳಿಕ ಜೆಡಿಯು ಗಳಿಕೆ ಕ್ಷೀಣಗೊಂಡಿದ್ದನ್ನು ನೆನಪಿಸಿಕೊಂಡ ನಿತೀಶ್,2015ರಲ್ಲಿ ಎಷ್ಟು ಸ್ಥಾನಗಳನ್ನು ನಾವು ಗೆದ್ದಿದ್ದೆವು? ಬಳಿಕ ನಾವು ಮತ್ತೆ ಅದೇ ಜನರೊಂದಿಗೆ (ಬಿಜೆಪಿ) ಚುನಾವಣೆಗೆ ಹೋಗಿದ್ದೆವು ಮತ್ತು ನಾವು ಯಾವ ಮಟ್ಟಕ್ಕೆ ಕುಸಿದಿದ್ದೇವೆ ನೋಡಿ. ಜೆಡಿಯುದಲ್ಲಿದ್ದವರು ಮಾತ್ರವಲ್ಲ,ತೇಜಸ್ವಿ ಯಾದವ ಕೂಡ ಬಿಜೆಪಿ ಪ್ರಾದೇಶಿಕ ಪಕ್ಷಗಳ ಕಥೆ ಮುಗಿಸಲು ಬಯಸಿದೆ ಎಂದು ಹೇಳಿದ್ದರು ಎಂದು ತಿಳಿಸಿದರು.

2015ರಲ್ಲಿ ಮಹಾ ಘಟಬಂಧನ ಗೆದ್ದಿದ್ದ 170 ಸ್ಥಾನಗಳಲ್ಲಿ 71 ಸ್ಥಾನಗಳು ಜೆಡಿಯುಗೆ ದಕ್ಕಿದ್ದವು ಮತ್ತು 80 ಸ್ಥಾನಗಳನ್ನು ಗೆದ್ದಿದ್ದ ಆರ್ಜೆಡಿ ಏಕೈಕ ದೊಡ್ಡ ಪಕ್ಷವಾಗಿತ್ತು. ಆದರೆ ಒಪ್ಪಂದದ ನಾಯಕನಾಗಿ ನಿತೀಶ ಕುಮಾರ ಮುಖ್ಯಮಂತ್ರಿಯಾಗಿದ್ದರು.

ಪ್ರಸ್ತುತ ಜೆಡಿಯು 45 ಶಾಸಕರನ್ನು ಹೊಂದಿದೆ. ಬಿಜೆಪಿ 77 ಶಾಸಕರನ್ನು ಹೊಂದಿದೆ. ಆದಾಗ್ಯೂ ಬಿಜೆಪಿ ನಿತೀಶರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು ಮತ್ತು ಆ ಪಕ್ಷದ ಇಬ್ಬರು ಉಪಮುಖ್ಯಮಂತ್ರಿಗಳಾಗಿದ್ದರು. ಈಗ ಮೈತ್ರಿ ಬದಲಾವಣೆ ಏಕೆ? ಮಹಾರಾಷ್ಟ್ರದಲ್ಲಿಯ ಇತ್ತೀಚಿನ ಬಂಡಾಯ ನಿತೀಶ ಮತ್ತು ಅವರ ಪಕ್ಷದಲ್ಲಿ ಆತಂಕ ಸೃಷ್ಟಿಸಿತ್ತೆನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿಭಜಿತ ಬಣವು ಅಧಿಕಾರಕ್ಕೇರಲು ಬಿಜೆಪಿ ಬೆಂಬಲ ನೀಡಿತ್ತು.

ಇನ್ನೊಂದು ತಿರುವಿನ ಬಳಿಕ ತನ್ನ ಭವಿಷ್ಯ ಕುರಿತಂತೆ ನಿತೀಶ್,‘ನಾನು ಉಳಿಯುತ್ತೇನೋ ಇಲ್ಲವೋ...ಅದನ್ನು ಜನರೇ ಹೇಳಲಿ ಬಿಡಿ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News