ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರ ಗಡಿಪಾರು: ಸಚಿವ ಆರಗ ಜ್ಞಾನೇಂದ್ರ

Update: 2022-08-10 12:26 GMT

ಬೆಂಗಳೂರು, ಆ. 10: ‘ವೀಸಾ' ಅವಧಿ ಮುಗಿದಿದ್ದರೂ ಅಕ್ರಮವಾಗಿ ದೇಶದಲ್ಲಿಯೇ ನೆಲೆಸುತ್ತಿರುವ ವಿದೇಶಿಯರು, ಅಪರಾಧ ಮತ್ತು ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಅಪಾಯವಿದೆ. ಹೀಗಾಗಿ, ಅವರನ್ನು ಗಡಿಪಾರು ಮಾಡಲು ಕ್ರಮ ವಹಿಸಬೇಕು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ‘ಅಕ್ರಮ ವಿದೇಶಿ ವಲಸಿಗರನ್ನು ಹಿಡಿದಿಡುವ ‘ದಿಗ್ಬಂಧನ ಕೇಂದ್ರ'ದ ಸಾಮಥ್ರ್ಯವನ್ನು ಹೆಚ್ಚಿಸುವ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆಯ ಬಳಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ತಾತ್ಕಾಲಿಕ ವಸತಿ ಕಲ್ಪಿಸುವ ‘ದಿಗ್ಬಂಧನ ಕೇಂದ್ರ’ವನ್ನು ವಿಸ್ತರಿಸಿ ಸಾಮಥ್ರ್ಯ ಹೆಚ್ಚಿಸಬೇಕು' ಎಂದು ಸೂಚಿಸಿದರು.

ಸಭೆಯಲಿ ಭಾಗವಹಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ‘ರಾಜ್ಯದಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿ ನಾಗರಿಕರೂ ಸೇರಿದಂತೆ ಇತರ ದೇಶಗಳ ವಲಸಿಗರನ್ನು, ಕಾನೂನಿನಂತೆ ಬಂಧಿಸಿ, ಯಾವುದೇ ಕಾರಾಗೃಹಗಳಲ್ಲಿಡದೆ, ಅವರಿಗೆಂದು ಇರುವ ದಿಗ್ಬಂಧನ ಕೇಂದ್ರದಲ್ಲಿ ವಸತಿ ಕಲ್ಪಿಸಬೇಕಿದೆ. ಆದರೆ, ಬೆಂಗಳೂರು ಹೊರ ವಲಯದ ನೆಲಮಂಗಲದಲ್ಲಿ ಮಾತ್ರ ದಿಗ್ಬಂಧನ ಕೇಂದ್ರ ಕಾರ್ಯಾಚರಿಸುತ್ತಿದ್ದು, ಅಲ್ಲಿ ಸ್ಥಳಾವಕಾಶ ಕೊರತೆ ಇದೆ’ ಎಂದು ಸಭೆಯ ಗಮನಕ್ಕೆ ತಂದರು.

ಬಳಿಕ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಪ್ರಸ್ತುತ ದಿಗ್ಬಂಧನ ಕೇಂದ್ರದ ಸಾಮರ್ಥ್ಯ ವಿಸ್ತರಣೆಗೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಒದಗಿಸಬೇಕು. ಅನುದಾನ ಬಿಡುಗಡೆ ವಿಳಂಬ ಆಗದಂತೆ ಕ್ರಮ ಕೈಗೊಳ್ಳಬೇಕು. ತ್ವರಿತಗತಿಯಲ್ಲಿ ದಿಗ್ಬಂಧನ ಕೇಂದ್ರವನ್ನು ವಿಸ್ತರಣೆ ಮಾಡಿದರೆ ಅಕ್ರಮವಾಗಿ ನೆಲೆಸಿರುವವರನ್ನು ತಾತ್ಕಾಲಿಕವಾಗಿ ಅಲ್ಲಿರಿಸಿ ಬಳಿಕ ಅವರನ್ನು ಗಡಿಪಾರು ಮಾಡಲಾಗುವುದು' ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಗೃಹ ಇಲಾಖೆ ಸಲ್ಲಿಸುವ ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು. ಅಲ್ಲದೆ, ಸಭೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ಅಗತ್ಯ ಅನುದಾನ ಒದಗಿಸುವ ಸಂಬಂಧ ಕ್ರಮ ವಹಿಸಬೇಕು' ಎಂದು ಸೂಚನೆ ನೀಡಿದರು.

ಬಿಡುಗಡೆಗೆ ವಿರೋಧ: ‘ಸನ್ನಡತೆ ಆಧಾರದಲ್ಲಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವಾಮಂಜೂರಿನ ಪ್ರವೀಣ್ ಬಿಡುಗಡೆಯಾಗುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇಂದು ನನ್ನನ್ನು ಭೇಟಿಯಾದ ಪ್ರವೀಣ್ ಹೆಂಡತಿ ಮತ್ತು ಕುಟುಂಬ ಹಾಗೂ ಕೊಲೆಯಾದ ಕುಟುಂಬದ ಸದಸ್ಯರು ಯಾವುದೇ ಕಾರಣಕ್ಕೂ ಆತನನ್ನ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡದಂತೆ ಮನವಿ ಮಾಡಿದ್ದಾರೆ. ಈ ಕುರಿತು ಅಧಿಕಾರಿಗಳ ಜೊತೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು' ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

‘ಅಧಿಕಾರವಿಲ್ಲದೆ ನಿರುದ್ಯೋಗಿಗಳಾಗಿರುವ ಕಾಂಗ್ರೆಸ್ ನಾಯಕರು ಸುಳ್ಳು ಆರೋಪಗಳನ್ನು ಮಾಡುತ್ತಾ ಸರಕಾರ ಮತ್ತು ನಮ್ಮ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂದು ಹೇಳಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ. ನಮ್ಮ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ'

-ಆರಗ ಜ್ಞಾನೇಂದ್ರ ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News