ಸಿಎಂ ಬದಲಾವಣೆ ವಿಚಾರ; ಬಿಜೆಪಿ ನಾಯಕರೇ ಸಾಕಷ್ಟು ಮುನ್ಸೂಚನೆ ನೀಡಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್

Update: 2022-08-10 13:40 GMT

ಬೆಂಗಳೂರು, ಆ.10: ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾವುದೇ ರಾಜ್ಯಕ್ಕೆ ಹೋದರೂ ಬದಲಾವಣೆ ಆಗುತ್ತದೆ. ಬಿಜೆಪಿ ಶಾಸಕರಿಗೆ ವಿಳ್ಯೆದೆಲೆ ಶಾಸ್ತ್ರ ಮಾಡಲು ಅಮಿತ್ ಶಾ ಇಲ್ಲಿಗೆ ಬಂದಿದ್ದರೇ? ಇಲ್ಲಿಗೆ ಬಂದು ಗೃಹ ಮಂತ್ರಿ, ಮುಖ್ಯಮಂತ್ರಿಗಳಿಗೆ ಏನು ಹೇಳಿದರು ಎಂದು ಗೊತ್ತಾದರೆ ಎಲ್ಲವೂ ತಿಳಿಯುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಮಾಡಿರುವ ಟೀಕೆ ಕುರಿತು ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ರಾಜ್ಯ ಸರಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಅವರದೇ ಪಕ್ಷದ ನಾಯಕರು ಸಾಕಷ್ಟು ಮುನ್ಸೂಚನೆ ನೀಡಿದ್ದಾರೆ. ಅದಕ್ಕೂ ಮಿಗಿಲಾಗಿ ಯತ್ನಾಳ್ ಅವರ ಪ್ರಕಾರ ರಾಜ್ಯದಲ್ಲಿ ಸಿಎಂ ಆಗಬೇಕಾದರೆ 2,500 ಕೋಟಿ ಹಣ ಬೇಕಿದೆ. ಅಮಿತ್ ಶಾ ಅವರು ಬಂದು ಹೋಗಿದ್ದು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನಂತರ ಮತ್ತೊಬ್ಬರು ಈ ಹಣ ಪಾವತಿಸಿರಬೇಕು ಎಂದು ಅವರು ಹೇಳಿದರು.

ಅದಕ್ಕಾಗಿ ಮುಖ್ಯಮಂತ್ರಿ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಇದು ಹೊಸತೇನಲ್ಲ. ಉತ್ತರಾಂಚಲದಲ್ಲಿ 3 ಮುಖ್ಯಮಂತ್ರಿ ಬದಲಿಸಿ ನಾಲ್ಕನೇ ಮುಖ್ಯಮಂತ್ರಿ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದರು. ಮುಂಬರುವ ಚುನಾವಣೆಗೆ ಅನುಕೂಲವಾಗಲು ಬೇರೆಯವರಿಂದ ಈ ಹಣ ಪಡೆದಿರಬೇಕು ಅಥವಾ ಬೊಮ್ಮಾಯಿ ಅವರೇ ಮತ್ತೆ ಈ ಹಣವನ್ನು ನೀಡಬೇಕಾಗಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಯತ್ನಾಳ್ ಅವರನ್ನು ಸಂಪರ್ಕಿಸಿ. ಅವರು ಸಂಪೂರ್ಣ ವಿವರ ನೀಡುತ್ತಾರೆ ಎಂದು ಹರಿಪ್ರಸಾದ್ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗಾಂಜಾ ಹೆಚ್ಚಾಗಿದೆ. ಗಾಂಜಾ ಕುಡಿದವರಿಗೆ ಉತ್ತರ ಕೊಡಲಾಗುವುದಿಲ್ಲ. ಈಶ್ವರಪ್ಪ ಬೇಗ ಮಂತ್ರಿ ಆಗಲು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿಸಿಕೊಂಡು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳ ರಕ್ಷಣೆಗೆ ಬರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಅಮಿತ್ ಶಾ ಯಾವ ಕಾರಣಕ್ಕೆ ಬಂದು ಹೋದರು ಎಂಬ ಕಾರಣವನ್ನು ಯಾರೊಬ್ಬರೂ ಹೇಳುತ್ತಿಲ್ಲ. ಸಿಎಂಗೆ ಕೋವಿಡ್ ಬಂದಿದೆಯೋ ಅಥವಾ ರಾಜಕೀಯ ಕೋವಿಡ್ ಬಂದಿದೆಯೋ ಎಂಬ ಅನುಮಾನವಿದೆ. ಈಶ್ವರಪ್ಪ ಹೇಳಿಕೆಗೆ ಅವರ ಪಕ್ಷದವರೇ ಬೆಲೆ ಕೊಡುವುದಿಲ್ಲ. ಬೇರೆಯವರು ಯಾಕೆ ನೀಡುತ್ತಾರೆ? ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.

ನಿನ್ನೆ ಹಿಂದೂ ಮಹಾಸಭಾ ವ್ಯಕ್ತಿ ಮಹಾತ್ಮಾ ಗಾಂಧಿ ಅವರಿಗೆ ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಮಹಾತ್ಮ ಗಾಂಧಿ ಅವರ ಕೊಲೆ ಮಾಡಿದ್ದು ನಾವೇ ಎಂದು ಹೇಳಿದ್ದಾರೆ. ಪೊಲೀಸರು ಕೂಡಲೇ ಅವರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಬೇಕು. ಈ ವಿಚಾರವಾಗಿ ನಮ್ಮ ಪ್ರಧಾನ ಕಾರ್ಯದರ್ಶಿ ಮನೋಹರ್ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಈಶ್ವರಪ್ಪ 40 ಪರ್ಸೆಂಟ್ ಸುಪಾರಿ ತೆಗೆದುಕೊಂಡಿದ್ದಾರೆ. ಯಾರೆಲ್ಲಾ ಈ ಕಮಿಷನ್‍ಗೆ ವಿರೋಧ ಮಾಡುತ್ತಾರೋ ಅವರನ್ನು ಇಹಲೋಕದಿಂದ ಕಳುಹಿಸುತ್ತಿದ್ದಾರೆ. ಅವರದೇ ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವಾಗ ತಮ್ಮ ಕಾರ್ಯಕರ್ತನ ರಕ್ಷಣೆ ಹೇಗೆ ಮಾಡಬೇಕು ಎಂದು ತಿಳಿಯದ ಬಿಜೆಪಿಗೆ ಮಾನ ಮರ್ಯಾದೆ ಇಲ್ಲವಾಗಿದೆ ಎಂದು ಅವರು ಕಿಡಿಗಾರಿದರು.

ಮಂಗಳೂರಿನಲ್ಲಿ ಹತ್ಯೆಯಾದವನೂ ಬಜರಂಗದಳದವನು. ಅವನಿಗೂ ರಕ್ಷಣೆ ಇಲ್ಲ. ಇನ್ನು ಈಶ್ವರಪ್ಪ ಮಾತು ಯಾರು ಕೇಳುತ್ತಾರೆ? ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯುವುದಿಲ್ಲ ಎಂದು ಭಾವಿಸಿದ್ದಾರೆ. ರಾಜಕೀಯದಲ್ಲಿರುವ ಎಲ್ಲರಿಗೂ ಏನು ನಡೆಯುತ್ತಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹರಿಪ್ರಸಾದ್ ತಿಳಿಸಿದರು.

ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ತಮ್ಮ ಸಹೋದ್ಯೋಗಿಗಳನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂಬುದನ್ನು ಬಿಹಾರ ರಾಜಕಾರಣ ಸ್ಪಷ್ಟವಾಗಿ ತಿಳಿಯುತ್ತದೆ. ಇದು ರಾಷ್ಟ್ರ ರಾಜಕಾರಣದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕಾದುನೋಡಬೇಕು. ಇನ್ನು ಟಿಆರ್‍ಎಸ್ ಕೂಡ ಬಿಜೆಪಿ ವಿರುದ್ಧ ನಿಂತಿದೆ. ಮುಂದೆ ಏನಾಗುತ್ತದೆ ಎಂದು ನೋಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News