ಹರ್ಯಾಣ: ಐದು ವರ್ಷಗಳಲ್ಲಿ ಜಾನುವಾರುಗಳಿಂದ ಉಂಟಾದ ಅಪಘಾತಗಳಲ್ಲಿ 900ಕ್ಕೂ ಅಧಿಕ ಸಾವು

Update: 2022-08-10 15:32 GMT
Credit: Adobe Stock

 ಚಂಡಿಗಡ,ಆ.10: ಹರ್ಯಾಣದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿಡಾಡಿ ಜಾನುವಾರುಗಳಿಂದಾಗಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 900ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಇಂತಹ ಒಟ್ಟು 3,383 ರಸ್ತೆ ಅಪಘಾತಗಳು ಸಂಭವಿಸಿದ್ದು,919 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 3,017 ಜನರು ಗಾಯಗೊಂಡಿದ್ದಾರೆ ಎಂದು ಹರ್ಯಾಣದ ಕೃಷಿ ಮತ್ತು ಪಶು ಸಂಗೋಪನಾ ಸಚಿವ ಜೆ.ಪಿ.ದಲಾಲ ಅವರು ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದರು.

ಬಿಡಾಡಿ ಜಾನುವಾರುಗಳ ಸಮಸ್ಯೆಯನ್ನು ಬಗೆಹರಿಸಲು ಕ್ರಮಗಳ ಕುರಿತಂತೆ ಅವರು,2020-21 ಮತ್ತು 2021-22ರಲ್ಲಿ ಒಂದು ಲಕ್ಷಕ್ಕೂ ಅಧಿಕ ಬಿಡಾಡಿ ಜಾನುವಾರುಗಳಿಗೆ ವಿವಿಧ ಗೋಶಾಲೆಗಳಲ್ಲಿ ಆಶ್ರಯ ಒದಗಿಸಲಾಗಿದೆ. ಈ ಗೋಶಾಲೆಗಳಿಗೆ ಸರಕಾರವು ಹಣಕಾಸು ನೆರವನ್ನೂ ಒದಗಿಸುತ್ತಿದೆ ಎಂದು ತಿಳಿಸಿದರು.

ಹರ್ಯಾಣ ಗೋ ಸೇವಾ ಆಯೋಗದಲ್ಲಿ ನೋಂದಾಯಿಸಿಕೊಂಡಿರುವ 569 ಗೋಶಾಲೆಗಳಿಗೆ ಮೇವು ಖರೀದಿಗಾಗಿ 2020-21,2021-22 ಮತ್ತು 2022-23 (ಈವರೆಗೆ)ರಲ್ಲಿ ಅನುಕ್ರಮವಾಗಿ 17.75 ಕೋ.ರೂ.,29.50 ಕೋ.ರೂ. ಮತ್ತು 13.50 ಕೋ.ರೂ.ಗಳ ಹಣಕಾಸು ನೆರವನ್ನು ಒದಗಿಸಲಾಗಿದೆ ಎಂದು ದಲಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News