ಕಾಲ್ತೋಡು: ಸಂಕದಿಂದ ಬಿದ್ದು ನೀರುಪಾಲಾದ ಬಾಲಕಿಯ ಮನೆಗೆ ಸಚಿವ ಅಂಗಾರ ಭೇಟಿ

Update: 2022-08-10 15:32 GMT

ಬೈಂದೂರು, ಆ.10: ಎರಡು ದಿನಗಳ ಹಿಂದೆ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಶಾಲೆಯಿಂದ ಮನೆಗೆ ಮರಳುವಾಗ ಕಾಲುಜಾರಿ ತುಂಬಿ ಹರಿಯುವ ತೊರೆಗೆ ಬಿದ್ದು ನಾಪತ್ತೆಯಾಗಿದ್ದ ಸನ್ನಿಧಿ (7)ಯ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರೊಂದಿಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು.

ಬೊಳ್ಳಂಬಳಿ ಮಕ್ಕಿಮನೆ ನಿವಾಸಿ ರಿಕ್ಷಾ ಚಾಲಕರಾದ ಪ್ರದೀಪ್ ಪೂಜಾರಿ  ಹಾಗೂ ಸುಮಿತ್ರಾ ದಂಪತಿ ಹಿರಿಯ ಪುತ್ರಿ ಸನ್ನಿಧಿ ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದಳು. 

ಮನೆಗೆ ತೆರಳಿ ತಂದೆ ಪ್ರದೀಪ್ ಕುಮಾರ್ ಅವರಿಗೆ ಸಾಂತ್ವನ ಹೇಳಿದ ಸಚಿವರು, ಸರಕಾರದ ವತಿಯಿಂದ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಸಿಗುವ ಪರಿಹಾರ ನೀಡುವ ಭರವಸೆ ನೀಡಿದಲ್ಲದೇ, ಈ ಭಾಗದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಸನ್ನಿಧಿಯ ಕಿರಿಯ ಸಹೋದರಿ ಶ್ರೀನಿಧಿ (3)ಯನ್ನು ತಾನು ದತ್ತು ಸ್ವೀಕರಿಸಲಿದ್ದು, ಆಕೆಯ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾನು ಹೊರುವುದಾಗಿ ಘೋಷಿಸಿದ್ದರಲ್ಲದೇ, ಕುಂದಾಪುರದಲ್ಲಿ ಆಕೆಯ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಂಗಾರ, ಪ್ರಾಕೃತಿಕ ವಿಕೋಪದಿಂದಾಗಿ ಈ ದುರಂತ ಸಂಭವಿಸಿದೆ. ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಕಾಲಸಂಕಗಳ ನಿರ್ಮಾಣ ಅತಿಮುಖ್ಯ. ಮುಂದೆ ಇಂಥ ಘಟನೆಗಳು ಸಂಭವಿಸದಂತೆ ಜಿಲ್ಲಾಡಳಿತಕ್ಕೆ ಕ್ರಮಕೈಗೊಳ್ಳಲು ಸೂಚಿಸಿದ್ದೇವೆ ಎಂದರು.

ನರೇಗಾ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಕಾಲುಸಂಕ ಅಗತ್ಯ ಇರುವಲ್ಲಿ ಅವುಗಳಿಗೆ ಆದ್ಯತೆ ನೀಡಲು ಜಿಲಾಧಿಕಾರಿಗೆ ತಿಳಿಸಲಾಗಿದೆ. ಮುಂದೆ ಇಂಥ ದುರಂತ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

150 ಕಾಲುಸಂಕ ಆಗಬೇಕು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 204ರಷ್ಟು ಕಾಲುಸಂಕಗಳ ನಿರ್ಮಾಣವಾಗಿದೆ. ಇನ್ನೂ 150ರಷ್ಟು ಆಗಬೇಕಾಗಿದೆ. ಕಾಲ್ತೋಡು ಗ್ರಾಮ ಒಂದರಲ್ಲಿ 240ರಷ್ಟು ತೋಡುಗಳಿವೆ ಎಂದು ಶಾಸಕ ಸುಕುಮಾರ್ ಶೆಟ್ಟಿ ತಿಳಿಸಿದರು. ದುರಂತ ಸಂಭವಿಸಿದ ವಾಟೆಗುಂಡಿಯಲ್ಲಿ ಕಾಲುಸಂಕ ನಿರ್ಮಾಣಕ್ಕೆ 8 ಲಕ್ಷ ರೂ.ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆಯವರು ಕೆಲಸ ಮಾಡಿಲ್ಲ ಎಂದು ಅವರು ನುಡಿದರು. ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದವರು ಆರೋಪಿಸಿದರು.

ಬೀಜಮಕ್ಕಿಗೆ ಕಾಲುಸಂಕ 8 ವರ್ಷಗಳ ಬೇಡಿಕೆ

ಸನ್ನಿಧಿ ನೀರು ಪಾಲಾದ ಜಾಗದ ಸಮೀಪದಲ್ಲೇ ಎಂಟು ವರ್ಷಗಳ ಹಿಂದೆ ತನ್ನ ಮಗಳು ಸುನೀತಾ ಸಹ ಮಳೆಗಾಲದಲ್ಲಿ ಕಾಲುಜಾರಿ ನೀರಿಗೆ ಬಿದ್ದಿದ್ದಳು. ಆಗ ನೀರಿನ ಹರಿವು ಕಡಿಮೆ ಇದ್ದು, ಹೊಲದಲ್ಲಿ ಕೆಲಸ ಮಾಡುವವರು ನೋಡಿ ಆಕೆಯನ್ನು ತಕ್ಷಣ ರಕ್ಷಿಸಿದ್ದರು. ಇಂದು ಆಕೆ ದ್ವಿತೀಯ ಪಿಯುಸಿ ಓದುತಿದ್ದಾಳೆ ಎಂದು ಅದೇ ಗ್ರಾಮದ ಸುಮತಿ ನೆನಪಿಸಿಕೊಂಡರು.

ಅಂದು ಊರವನ್ನು ಅಲ್ಲಿಗೆ ಕಾಲುಸಂಕ ಬೇಕೆಂದು ಬಲವಾಗಿ ಆಗ್ರಹಿಸಿದ್ದರು. ಕಾಲ್ತೋಡು ಗ್ರಾಪಂ ಯೋಜನೆ ರೂಪಿಸಿ ಯೋಜನೆ ಮಂಜೂರಾಗಿದೆ ಎಂದು ತಿಳಿಸಿದ್ದರು. ಆದರೆ ಮಂಜೂರಾದ ಕಾಲುಸಂಕ ಕಾಮಗಾರಿ ಎಂಟು ವರ್ಷಗಳಾದರೂ ಪ್ರಾರಂಭಗೊಳ್ಳಲೇ ಇಲ್ಲ. ಗ್ರಾಪಂ ಬಳಿ ಕೇಳಿದರೆ ಹಣ ಲ್ಯಾಪ್ಸ್ ಆಗಿದೆ ಎಂದು ಹೇಳುತ್ತಾರೆ.

ಆಗಲೇ ಎಚ್ಚೆತ್ತುಕೊಂಡು ಕಾಲುಸಂಕ ನಿರ್ಮಿಸಿದ್ದರೆ ಇಂದಿನ ದುರಂತ ಸಂಭವಿಸುತ್ತಿರಲಿಲ್ಲ. ಸುಮಿತ್ರಾ ತನ್ನ ಕರುಳಕುಡಿಯನ್ನು ಕಳೆದುಕೊಳ್ಳಬೇಕಿರಲಿಲ್ಲ ಎಂದು ಸುಮತಿ ನುಡಿದರು.

"ಬೊಳ್ಳಂಬಳಿಗೆ ಯಾರೂ ರಾಜಕಾರಣಿಗಳು, ಜನಪ್ರತಿನಿಧಿಗಳು ಬರುವುದಿಲ್ಲ. ಚುನಾವಣೆ ಬಂದಾಗ ಬರುತ್ತಾರೆ. ಕಾಲುಸಂಕಕ್ಕೆ ಒಂದು ದಿನದ ಕೆಲಸ ನಡೆಯುತ್ತೆ. ಆಮೇಲೆ ಇಲ್ಲಿಗೆ ನಿಲ್ಲುತ್ತದೆ. ಬಸ್ ಹಿಡಿಯಲು 4 ಕಿ.ಮೀ. ನಡೆಯಬೇಕು. ದಿನಕ್ಕೆ ಎರಡು ಬಸ್ ಬರುತ್ತದೆ. ರಾತ್ರಿ ತುರ್ತು ಸಮಸ್ಯೆ ಬಂದರೆ ದೇವರೇಗತಿ. ಇಲ್ಲಿ ನೆಟ್‌ವರ್ಕ್ ಇಲ್ಲ. ಹೀಗಾಗಿ ಹೊರಲೋಕದ ಸಂಪರ್ಕ ಸಾಧ್ಯವಿಲ್ಲ. ಸಮೀಪದ ಶಾಲೆ 2 ಕಿ.ಮೀ. ದೂರವಿದೆ. ಪೆಟ್ರೋಲ್ ಬಂಕ್ 15 ಕಿ.ಮೀ. ದೂರದಲ್ಲಿದೆ. ಒಟ್ಟಾರೆ ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲ".
-ರಾಘವೇಂದ್ರ, ಸನ್ನಿಧಿಯ ದೊಡ್ಡಪ್ಪ.

"ಎರಡು ದಿನ ಆಯಿತು ನಮ್ಮ ಮಗು ಪತ್ತೆ ಇಲ್ಲ. ಇವರು ಹುಡುಕುವ ನಾಟಕ ಮಾಡುತಿದ್ದಾರೆ ಅಷ್ಟೇ. ಮೊದಲು ಸಚಿವರನ್ನು ನೀರಿಗೆ ಇಳಿಸಿ ಹುಡುಕಲು ಹೇಳಿ. ಎಲ್ಲರೂ ಬಂದು ಪೋಟೊಗೆ ಪೋಸ್ ಕೊಟ್ಟು ಹೋದರೆ ಏನೂ ಆಗಲ್ಲ".
-ಗುಲಾಬಿ, ಸನ್ನಿಧಿಯ ದೊಡ್ಡಮ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News