ಭಾರೀ ಮಳೆಗೆ ಜಿಲ್ಲಾದ್ಯಂತ 220.94 ಕೋ.ರೂ. ನಷ್ಟ: ಚಿಕ್ಕಮಗಳೂರು ಡಿಸಿ ಕೆ.ಎನ್.ರಮೇಶ್

Update: 2022-08-12 13:24 GMT

ಚಿಕ್ಕಮಗಳೂರು, ಆ.12: ಜಿಲ್ಲಾದ್ಯಂತ ಸುರಿದ ಭಾರೀ ಮಳೆಗೆ 220.94 ಕೋಟಿ ರೂ.ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅತಿವೃಷ್ಟಿ ಹಾನಿ ಸಂಬಂಧ ರಾಜ್ಯ ಸರ್ಕಾರ ಇತ್ತೀಚೆಗೆ 10ಕೋಟಿ ರೂ. ಬಿಡುಗಡೆಗೊಳಿಸಿದ್ದು,ಶೇ.80ರಷ್ಟು ಪರಿಹಾರ ವಿತರಣೆ ಮಾಡಲಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದು, ಎರಡು ದಿನಗಳಲ್ಲಿ ಗಾಳಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. ಮಳೆಯಿಂದ ಅಪಾರ ಪ್ರಮಾಣ ಹಾನಿಯಾಗಿದ್ದು, ಪ್ರಾಣಹಾನಿಯೂ ಸಂಭವಿಸಿದೆ. ರಸ್ತೆ, ಸೇತುವೆ, ವಿದ್ಯುತ್ ಕಂಬಗಳು ಹಾನಿಯಾಗಿದ್ದು, ತ್ವರಿತ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅತಿವೃಷ್ಟಿ ಸಮೀಕ್ಷೆಗೆ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ತಂಡಗಳನ್ನು ರಚಿಸಿ ಸಮೀಕ್ಷೆ ನಡೆಸಿದ್ದು, ಅಂದಾಜು 220.94 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದ ಅವರು, ಭಾರೀ ಮಳೆಯಿಂದ ಅರಣ್ಯ ಮತ್ತು ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೂ ಮಾನವೀಯತೆ ದೃಷ್ಟಿಯಿಂದ ಪರಿಹಾರವನ್ನು ವಿತರಿಸಲಾಗುತ್ತಿದೆ. ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಅತಿವೃಷ್ಟಿ ಸ್ಥಳಕ್ಕೆ ಭೇಟಿನೀಡದೆ ಕಚೇರಿಯಲ್ಲಿ ಕುಳಿತು ಸಮೀಕ್ಷ ವರದಿ ತಯಾರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಅನಾಹುತ ಸಂಭವಿಸಿದ ಸ್ಥಳಕ್ಕೆ ಕಡ್ಡಾಯವಾಗಿ ಭೇಟಿನೀಡಿ ಪರೀಶೀಲನೆ ನಡೆಸಿ ಸಮೀಕ್ಷ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಾನವೀಯ ದೃಷ್ಟಿಯಿಂದ ಬಲವಂತವಾಗಿ ಮನೆ ತೆರವುಗೊಳಿಸಿಲ್ಲ: ಸರಕಾರಿ ಮತ್ತು ಅರಣ್ಯ ಜಾಗದಲ್ಲಿ ಮನೆಕಟ್ಟಿಕೊಂಡು ವಾಸ ಮಾಡುತ್ತಿರುವ ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆಯಾದರೂ ಮಾನವೀಯ ದೃಷ್ಟಿಯಿಂದ ಬಲವಂತದಿಂದ ಮನೆಗಳನ್ನು ತೆರವುಗೊಳಿಸುತ್ತಿಲ್ಲ. ನ್ಯಾಯಾಲಯದ ಆದೇಶದ ಮೇರೆಗೆ ತತ್ಕೊಳ ಸೇರಿದಂತೆ ಇತರೆಡೆ ಸೂಕ್ತ ಪರಿಹಾರ ನೀಡಿ ತೆರವುಗೊಳಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಬಲವಂತವಾಗಿ ಎಲ್ಲೂ ಮನೆಗಳನ್ನು ತೆರವುಗೊಳಿಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News