ಆ.28ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ: ಸಚಿವ ಡಾ.ಕೆ.ಸುಧಾಕರ್

Update: 2022-08-12 13:29 GMT

ಬೆಂಗಳೂರು, ಆ.12: ರಾಜ್ಯ ಬಿಜೆಪಿ ಸರಕಾರದ ಮೂರು ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಆ.28ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ‘ಜನೋತ್ಸವ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಹಾವಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಿಂದಾಗಿ ಈ ಹಿಂದೆ ನಿಗದಿಪಡಿಸಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು. ಇದೀಗ, ಆ.28ರಂದು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಸೇರಿಸಿ ‘ಜನೋತ್ಸವ’ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ರಾಜ್ಯದ ಬೇರೆ ಬೇರೆ ಕಡೆ ಸುಮಾರು 5-6 ಕಾರ್ಯಕ್ರಮವನ್ನು ಮಾಡಿ, ಆನಂತರ ರಾಜ್ಯಮಟ್ಟದ ಒಂದು ದೊಡ್ಡ ಕಾರ್ಯಕ್ರಮ ಮಾಡಲು ಉದ್ದೇಶಿಸಲಾಗಿದೆ. ರಾಜ್ಯಮಟ್ಟದ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಹಿರಿಯ ಮುಖಂಡರು ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ ಎಂದು ಸುಧಾಕರ್ ಹೇಳಿದರು.

ಯಡಿಯೂರಪ್ಪ ನೇತೃತ್ವದ ಸರಕಾರ ಎರಡು ವರ್ಷ ಆಡಳಿತ ನಡೆಸಿತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬಸವರಾಜ ಬೊಮ್ಮಾಯಿ ಸರಕಾರ ಒಂದು ವರ್ಷವನ್ನು ಪೂರೈಸಿದೆ. ರಾಜ್ಯ ಸರಕಾರದ ಹಲವಾರು ಯೋಜನೆಗಳ ಲಾಭ ಜನಸಾಮಾನ್ಯರಿಗೆ ತಲುಪಿದೆ. ಆದುದರಿಂದ, ಇದನ್ನು ಜನರ ಹಬ್ಬವಾಗಿ ‘ಜನೋತ್ಸವ’ ಆಚರಿಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ‘ಟಿಕೆಟ್’ ಕೊಡಿಸಲಿಲ್ಲ: 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನನಗೆ ಟಿಕೆಟ್ ಕೊಡಿಸಿದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನು ಇಲ್ಲ. ಅವರು ಮುಖ್ಯಮಂತ್ರಿ ಆದ ಬಳಿಕ ನನಗೆ ಸಹಕಾರ ನೀಡಿದ್ದಾರೆ ಎಂದು ಸುಧಾಕರ್ ಹೇಳಿದರು.


''ಕಥೆ ಬಿಚ್ಚಿಡಲಿ, ಅಭ್ಯಂತರವಿಲ್ಲ''

ಸಿದ್ದರಾಮಯ್ಯ ನನ್ನ ಹಳೆ ಕಥೆ ಬಿಚ್ಚಿಡುವುದಾಗಿ ಹೇಳಿದ್ದಾರೆ. ನನ್ನ ಮೇಲಿನ ಅತಿಯಾದ ಪ್ರೀತಿಯಿಂದ ಆ ರೀತಿ ಹೇಳಿರಬಹುದು. ಆದರೆ, ನಾನು ಸತ್ಯವನ್ನೆ ಹೇಳಿದ್ದೇನೆ. ನನ್ನ ಯಾವ ಕಥೆ ಅವರ ಬಳಿ ಇದೆಯೋ ಅದನ್ನು ಬಿಚ್ಚಿಡಲಿ, ನನ್ನದೇನು ಅಭ್ಯಂತರವಿಲ್ಲ. ಅವರ ಕಥೆ ನನಗೆ ಗೊತ್ತಿದೆ, ನನ್ನ ಕಥೆ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರ ಮೇಲೆ ಗೌರವವಿದೆ. ವೈಯಕ್ತಿಕವಾದ ಸಂಬಂಧಗಳೆ ಬೇರೆ, ರಾಜಕಾರಣವೇ ಬೇರೆ.

-ಡಾ.ಕೆ. ಸುಧಾಕರ್, ಆರೋಗ್ಯ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News