ಶಿಕ್ಷಕರ ನೇಮಕಾತಿಗೆ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ತೀರ್ಮಾನ

Update: 2022-08-12 13:47 GMT

ಬೆಂಗಳೂರು, ಆ. 12: ‘ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ನಿಗದಿಯಾಗಿದ್ದ ವಯೋಮಿತಿ'ಯನ್ನು ಎಲ್ಲ ವರ್ಗದವರಿಗೆ ಒಂದು ಅವಧಿಗೆ ಎರಡು ವರ್ಷ ಸಡಿಲಿಕೆಗೆ ಅಗತ್ಯ ತಿದ್ದುಪಡಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಲಾಗಿದೆ.

ಶುಕ್ರವಾರ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ‘ಶಿಕ್ಷಕರ ನೇಮಕಾತಿಗೆ ನಿಗದಿಯಾಗಿದ್ದ ವಯೋಮಾನ ತಿದ್ದುಪಡಿ ಮಾಡಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಎಸ್ಸಿ-ಎಸ್ಟಿ, ಅಂಗವಿಕಲರು ಹಾಗೂ ಪ್ರವರ್ಗ-1ಕ್ಕೆ 47 ವರ್ಷ, ಇತರೆ ಹಿಂದುಳಿದ ವರ್ಗದವರಿಗೆ 45 ಹಾಗೂ ಸಾಮಾನ್ಯ ವರ್ಗದವರಿಗೆ 42 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಎಲ್ಲ ವರ್ಗದವರಿಗೆ ಎರಡು ವರ್ಷ ಸಡಿಲಿಕೆ ಮಾಡಲಾಗಿದೆ' ಎಂದು ವಿವರಿಸಿದರು.

‘ರಾಜ್ಯದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರಕಾರ ತೀರ್ಮಾನಿಸಿದೆ. ಕೋವಿಡ್ ಸೋಂಕು ಹಾಗೂ ಇನ್ನಿತರ ಕಾರಣಗಳಿಂದಾಗಿ ಬಹುದಿನಗಳಿಂದ ಶಿಕ್ಷಕರ ನೇಮಕಾತಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಡಿ.ಎಡ್, ಬಿ.ಎಡ್ ಕಲಿತ ಬಹಳಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಶಿಕ್ಷಕರ ವಯೋಮತಿಯಲ್ಲಿ ಸಡಿಲಿಕೆ ಮಾಡಿ ನೇಮಕಾತಿ ಮಾಡಲು ಸಂಪುಟ ಸಮ್ಮತಿಸಿದೆ. ನೇಮಕಾತಿ ಸಂದರ್ಭದಲ್ಲಿ ಅರ್ಹತಾ ಪರೀಕ್ಷೆಗೆ ನಿಗದಿಯಾಗಿದ್ದ ಶೇ.60ರಷ್ಟು ಅಂಕಗಳನ್ನು ಸಡಿಲಿಕೆ ಮಾಡಿ ಶೇ.50ಕ್ಕೆ ನಿಗದಿ ಮಾಡಲಾಗಿದೆ. ಅಲ್ಲದೆ, ನೇಮಕಾತಿ ವೇಳೆ ನಿಗದಿತ ಅಂಕ ಪಡೆದಿರುವ ಅಭ್ಯರ್ಥಿಗಳು ಸಿಗದಿದ್ದರೆ ಅಲ್ಲಿನ ಪರಿಸ್ಥಿತಿಗನುಗುಣವಾಗಿ ಸಡಿಲಿಕೆ ಮಾಡಿಕೊಂಡು ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ' ಎಂದು ಮಾಧುಸ್ವಾಮಿ ತಿಳಿಸಿದರು.

‘ನೇಮಕಾತಿ ನಿರೀಕ್ಷೆಯಲ್ಲಿದ್ದ ಸಾವಿರಾರು ನಿರುದ್ಯೋಗಿ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳು ವಯೋಮಿತಿ ಮೀರಿ ನೇಮಕಾತಿಯಿಂದ ವಂಚಿತರಾಗುತ್ತಿದ್ದಾರೆಂದು ಶಿಕ್ಷಣ ಇಲಾಖೆಗೆ ಮನವಿಗಳು ಬಂದಿದ್ದವು. ಮೂರು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆಸದಿರುವುದರಿಂದ ಬಿ-ಇಡಿ ಮತ್ತು ಟಿಇಟಿ ಪರೀಕ್ಷೆ ಅರ್ಹತೆ ಹೊಂದಿದ ಸಾಕಷ್ಟು ವಯೋಮಿತಿ ಮೀರಿರುವ ಅಭ್ಯರ್ಥಿಗಳಿಗೆ ಒಂದು ಬಾರಿ ಅನ್ವಯವಾಗುವಂತೆ ವಯೋಮಿತಿಯನ್ನು ಸಡಿಲಿಕೆ ಮಾಡಲು ಸರಕಾರ ತೀರ್ಮಾನ ಮಾಡಿದೆ' ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News