ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಯೋಜನೆಗೆ ಸಂಪುಟ ಒಪ್ಪಿಗೆ

Update: 2022-08-12 14:35 GMT

ಬೆಂಗಳೂರು, ಆ. 12: ‘ಡಾ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನನ್ವಯ ಪ್ರಾದೇಶಿಕ ಅಸಮತೋಲನ ನಿವಾರಿಸಲು ಜಾರಿಯಲ್ಲಿರುವ ವಿಶೇಷ ಅಭಿವೃದ್ಧಿ ಯೋಜನೆಯ ಕಾಲಾವಧಿ ಮುಗಿದಿರುವುದರಿಂದ ಹೊಸ ‘ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಯೋಜನೆ’ಯನ್ನು ನೀತಿ ಆಯೋಗ ಸೂಚಿಸಿರುವ 49 ಸೂಚಕಗಳನ್ನು ಅಳವಡಿಸಿ ಅನುಷ್ಠಾನಗೊಳಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ‘ವಿವಿಧ ಅಭಿವೃದ್ಧಿ ಸೂಚಕಗಳಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಸಾಧನೆ ಮಾಡುತ್ತಿರುವ ತಾಲೂಕುಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳೆಂದು ಗುರುತಿಸಲಾಗಿದೆ. ಈ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ' ಎಂದು ಮಾಹಿತಿ ನೀಡಿದರು.

‘ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆಯನ್ನು ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ನೀಡಲಾಗುವುದು. ಇದರ ಅನ್ವಯ 93 ತಾಲೂಕುಗಳಲ್ಲಿ ಶಿಕ್ಷಣ ಗುಣಮಟ್ಟ ವೃದ್ಧಿಸಲು, 100 ತಾಲೂಕುಗಳಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸಲು ಮತ್ತು 102 ತಾಲೂಕುಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಒಟ್ಟಾರೆ 3ಸಾವಿ ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಅವರು ವಿವರಿಸಿದರು.

ಜಲನೀತಿ-2022ಕ್ಕೆ ಅಸ್ತು: ‘ಕೃಷಿಯಲ್ಲಿ ನೀರಿನ ಮಿತ ಬಳಕೆ, ಮಳೆ, ಪ್ರವಾಹ ಉಂಟಾದ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ವರ್ಷಕ್ಕೆ 1,608 ಘ.ಮೀ.ಗಳಷ್ಟು ನೀರನ್ನು ಒದಗಿಸುವ ಮಹತ್ವದ ಅಂಶಗಳನ್ನು ಒಳಗೊಂಡ ‘ರಾಜ್ಯ ಜಲನೀತಿ-2022'ಕ್ಕೆ ಸಚಿವ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ' ಎಂದು ಮಾಧುಸ್ವಾಮಿ ತಿಳಿಸಿದರು.

ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ನೀರಾವರಿ ಸಾಮಥ್ರ್ಯ ಸೃಷ್ಟಿ ಮತ್ತು ಅವುಗಳ ಸದ್ಬಳಕೆಗಳ ನಡುವೆ ಇರುವ ಅಂತರವನ್ನು ನಿವಾರಿಸುವುದು. ಸಾಧ್ಯವಿರುವ ಕಡೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ನೀರಾವರಿ ವ್ಯವಸ್ಥೆಯಲ್ಲಿ ಕಾಲುವೆ ಯಾಂತ್ರೀಕರಣದ ಬಳಕೆ ಕಡ್ಡಾಯಗೊಳಿಸಿ, ತೂಬುಗಳಲ್ಲಿ ನಿಗದಿತ ಹರಿಯುವಿಕೆ ದೃಢೀಕರಿಸಬೇಕೆಂದು ನಿರ್ಧರಿಸಲಾಗಿದೆ' ಎಂದು ಹೇಳಿದರು.

‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಕುಸಿಯುವಿಕೆ ಮತ್ತು ಹೆಚ್ಚುತ್ತಿರುವ ಅಂತರ್ಜಲ ಮಲಿನತೆಯು ಕಳವಳಕಾರಿ. ಹೀಗಾಗಿ ಭವಿಷ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪೂರೈಸಲು ಗ್ರಾಮ ಪಂಚಾಯಿತಿ ಮಟ್ಟದ ಅಂತರ್ಜಲ ಬಜೆಟ್ ಮತ್ತು ಸಮಗ್ರ ಅಂತರ್ಜಲ, ಕೆರೆ, ಜಲಾನಯನ ನಿರ್ವಹಣೆಯ ಸಹಭಾಗಿತ್ವ ಅಳವಡಿಸಿಕೊಳ್ಳಬೇಕೆಂದು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

ಭೂಮಿ ಮಂಜೂರು: ‘ಬೆಂಗಳೂರು, ದಕ್ಷಿಣ ತಾಲೂಕು, ಕುರುಬರಹಳ್ಳಿ ಗ್ರಾಮದ ಸ.ನಂ, 89ರ 35.35 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಜನಸೇವಾ ಟ್ರಸ್ಟ್‍ಗೆ ಮಂಜೂರು. ದಕ್ಷಿಣ ತಾಲೂಕು, ದಾಸನಪುರ ಹೋಬಳಿ, ಕಮ್ಮಸಂದ್ರ ಗ್ರಾಮದ ಸರ್ವೆ ನಂ.65ರಲ್ಲಿ 3.24 ಎಕರೆ ಜಮೀನನ್ನು ‘ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾಸಂಸ್ಥೆ'ಗೆ ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ' ಎಂದು ಅವರು ತಿಳಿಸಿದರು.

‘ರಾಜ್ಯದಲ್ಲಿ 128 ‘ಮಹಿಳಾ ಸ್ವಾಸ್ಥ್ಯ ಕೇಂದ್ರಗಳ'ನ್ನು 22.40 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ. ಕೊಪ್ಪಳ ಜಿಲ್ಲೆಯ ಕಾಟ್ರಳ್ಳಿ ಮತ್ತು ಗುನ್ನಹಳ್ಳಿ ಗ್ರಾಮದ ನಡುವೆ ಹರಿಯುವ ಹಿರೇಹಳ್ಳಕ್ಕೆ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಯ 12.35 ಕೋಟಿ ರೂ.ಪರಿಷ್ಕøತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

‘ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಮೂಲ ಸೌಕರ್ಯ ಕಲ್ಪಿಸಲು 100 ಕೋಟಿ ರೂ. ಯೋಜನೆಗೆ ಅನುಮೋದನೆ. ಜಲ ಜೀವನ್ ಮಿಷನ್ ಯೋಜನೆಯಡಿ ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಸಣ ನೀರಾವರಿ ಕರೆಯಿಂದ ಹೊಸಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿರುವ 16 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜಿನ ಯೋಜನೆಯನ್ನು 18ಕೋಟಿ ರೂ.ಗಳ ಅಂದಾಜು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

ಹೊಸ ಬಸ್ ಖರೀದಿಗೆ ಒಪ್ಪಿಗೆ: 2022-23ನೆ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಅವಶ್ಯವಿರುವ ವಿವಿಧ ಮಾದರಿಯ 650 ಹೊಸ ಬಸ್‍ಗಳನ್ನು 199.40 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಹಾಗೂ ಬಿಎಂಟಿಸಿಗೆ 840 ಬಿಎಸ್-5 ಡೀಸೆಲ್ ಬಸ್ಸುಗಳನ್ನು, ಒಟ್ಟಾರೆ 336 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News