ಕುಂದಾಪುರ ಪುರಸಭೆ: ಯುಜಿಡಿ ಕಾಮಗಾರಿ ಚರ್ಚೆಗೆ ವಿಶೇಷ ಸಾಮಾನ್ಯ ಸಭೆ

Update: 2022-08-12 15:22 GMT

ಕುಂದಾಪುರ, ಆ.12: ಯುಜಿಡಿ ಕಾಮಗಾರಿ ವಿಷಯದಲ್ಲಿ ವಿಶೇಷ ಚರ್ಚೆಗೆ  ಕುಂದಾಪುರ ಪುರಸಭೆಯ ವಿಶೇಷ ಸಾಮಾನ್ಯ ಸಭೆ ಶುಕ್ರವಾರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಯುಜಿಡಿ ಕಾಮಗಾರಿಯ ಪರ ಹಾಗೂ ವಿರೋಧದಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆ ನಡೆಯಿತು. ಈಗಾಗಲೇ ಶೇ.೭೦ರಷ್ಟು ಕಾಮಗಾರಿ ಪೂರ್ಣ ವಾಗಿದ್ದು,  ಕಾಮಗಾರಿ ವಿರೋಧಿಸುವುದು ಸರಿಯಲ್ಲ. ಕೋಟ್ಯಾಂತರ ರೂ. ವಿನಿಯೋಗವಾಗಿದ್ದು ಈಗ  ಕಾಮಗಾರಿ ಬೇಕು ಬೇಡ ಎನ್ನುವುದು ಸೂಕ್ತ ವಿಚಾರ ಅಲ್ಲ ಎಂಬ ಬಗ್ಗೆ ಪರ-ವಿರೋಧ ಚರ್ಚೆ ನಡೆಯಿತು.

ಸದಸ್ಯ ಶೇಖರ ಪೂಜಾರಿ ಮಾತನಾಡಿ, ವೆಟ್‌ವೆಲ್, ಎಸ್‌ಟಿಪಿಯನ್ನು  ಹುಂಚಾರಬೆಟ್ಟು ಪ್ರದೇಶದಲ್ಲಿ ನಿರ್ಮಾಣ ಮಾಡುವುದಕ್ಕೆ ಜನರ ವಿರೋಧವಿದೆ. ಮುಂದೆ ಅದೇ ಜಾಗದಲ್ಲಿ ಮನೆಗಳ ನಿರ್ಮಾಣವಾಗಿ ಜನ ವಸತಿ ಪ್ರದೇಶ ವಾಗಲಿದೆ. ಹಿಂದೆ ಗುರುತಿಸಿದ  ಜಾಗದಲ್ಲೇ ವೆಟ್‌ವೆಲ್- ಎಸ್ಟಿಪಿ ಕಾಮಗಾರಿ ಮಾಡಬೇಕು. ಇದನ್ನು ಜನರು ವಿರೋಧಿಸುತಿದ್ದಾರೆ ಎಂದಾಗ ಸಭೆಯ ಆರಂಭದಲ್ಲೇ ವ್ಯಾಪಕ ಚರ್ಚೆ ನಡೆಯಿತು.

ವಿರೋಧ ಪಕ್ಷದ ಸದಸ್ಯ ಚಂದ್ರಶೇಖರ ಖಾರ್ವಿ ಮಾತನಾಡಿ, ಕುಂದಾಪುರಕ್ಕೆ ಯುಜಿಡಿ ಕಾಮಗಾರಿ ಅವಶ್ಯವಿದೆ. ಬಹುತೇಕ ಕಾಮಗಾರಿ ಮುಗಿದ ಮೇಲೆ ಅಕ್ಷೇಪ ಮಾಡುವುದು ಸೂಕ್ತವಲ್ಲ. ಹುಂಚಾರಬೆಟ್ಟು ಸದಸ್ಯ ಅಲ್ಲಿಯ ಜನರ ಮನವೊಲಿಸಿ, ನಗರದ ತ್ಯಾಜ್ಯ ವಿಲೇವಾರಿ ಅಗತ್ಯತೆ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿ ಕಾಮಗಾರಿ ಮುಂದುವರಿಸಲು ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದರು. 

ಇದನ್ನು ಬೆಂಬಲಿಸಿದ ಶ್ರೀಧರ ಶೇರೆಗಾರ್, ಯುಜಿಡಿ ನಗರಕ್ಕೆ ಬೇಕೋ ಬೇಡವೋ ಎನ್ನುದನ್ನು ಸ್ಪಷ್ಟಪಡಿಸಲಿ. ಈಗಾಗಲೇ ಯುಜಿಡಿ ಕಾಮಗಾರಿ ಆರಂಭವಾಗಿ ಹತ್ತು ವರ್ಷವಾಗಿದೆ. ಅಲ್ಲಲ್ಲಿ ಕೇಳಿಬರುತ್ತಿರುವ ಆಕ್ಷೇಪ ಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಹೇಳಿದರು.

ಸದಸ್ಯ ಪ್ರಭಾಕರ್ ಕುಂದಾಪುರ, ನಾಮನಿರ್ದೇಶಿತ ಸದಸ್ಯ ಪ್ರಕಾಶ ಖಾರ್ವಿ, ಯುಜಿಡಿ ಕಾಮಗಾರಿ ನಗರಕ್ಕೆ ಅಗತ್ಯವಿದ್ದು, ಜನರ ಸಮಸ್ಯೆಯನ್ನು ಸೌಹಾರ್ದ ಯುತವಾಗಿ ಪರಿಹರಿಸಿ, ಕೆಲಸ ಮುಂದುವರಿಸಲಿ ಎಂದು ಸಲಹೆ ಮಾಡಿದರು. ರಾಘವೇಂದ್ರ ಖಾರ್ವಿ ಮದ್ದುಗುಡ್ಡೆಯಲ್ಲಿ ಜನ ವಸತಿ ಪ್ರದೇಶದಲ್ಲಿ ವೆಟ್‌ವೆಲ್ ಇದ್ದು, ಹೀಗೆ ಸಮಸ್ಯೆಯಾದರೆ ಮದ್ದುಗುಡ್ಡೆ ವೆಟ್‌ವೆಲ್‌ನ್ನು ಸ್ಥಳಾಂತರಿಸುವಂತೆ ಜನರ ಸಹಿ ಸಹಿತ ಆಕ್ಷೇಪಣೆ ಮಾಡುತ್ತೇವೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಯುಜಿಡಿ ಕಾಮಗಾರಿ ಪ್ರಗತಿ, ಹಿಂದಿನ ವೆಟ್‌ವೆಲ್, ಎಸ್ಟಿಪಿ ಸ್ಥಳಾಂತರ ಹಿನ್ನೆಲೆ, ಬೇರೆ ಪ್ರದೇಶ ಗುರುತಿಸಿ ವೆಟ್‌ವೆಲ್ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ೨  ಕೋಟಿ ನೀಡಿರುವುದು, ಮುಕ್ಕಾಲು ಭಾಗ ಕಾಮಗಾರಿ ಆಗಿರುವ ಬಗ್ಗೆ ವಿವರಿಸಿದರು. ಈಗ ಆಕ್ಷೇಪ ಸಲ್ಲಿಸಿದರೆ ಕೆಲಸ ಮತ್ತಷ್ಟು ವಿಳಂಬವಾಗಲಿದೆ ಎಂದು ವಿವರಿಸಿದರು.

ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಗೋಪಾಲಕೃಷ್ಣ ಶೆಟ್ಟಿ ಅವರ ಸಲಹೆಯನ್ನು ಸ್ವಾಗತಿಸಿ, ಆಕ್ಷೇಪ ವ್ಯಕ್ತಪಡಿಸಿದವರು ಜಾಗ ಗುರುತಿಸಿ ತಿಳಿಸಿದ ಬಳಿಕ ಕಾಮಗಾರಿ ಮುಂದುವರಿಸುವ ನಿರ್ಣಯ ಮಾಡಲಾಯಿತು.
ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಸ್., ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಶಾಸ್ತ್ರಿ ಸರ್ಕಲ್ ನವೀಕರಣ ಕಾಮಗಾರಿ

ಕುಂದಾಪುರ ನಗರ ಪ್ರವೇಶದ ಬಳಿ ಸುಮಾರು  50 ಲಕ್ಷ ರೂ. ವೆಚ್ಚದಲ್ಲಿ ಶಾಸ್ತ್ರೀ ವೃತ್ತವನ್ನು ನವೀಕರಣ ಮಾಡಲಾಗುತ್ತಿದೆ. ಶಾಸ್ತ್ರಿ ಪ್ರತಿಮೆ ಸ್ಥಾಪನೆಗೆ ಶಿಲಾ ಮಂಟಪ ಕೂಡಾ ನಿರ್ಮಾಣ ಹಂತದಲ್ಲಿದೆ. ಈ ಹಿಂದಿದ್ದ ಶಾಸ್ತ್ರೀ ಪ್ರತಿಮೆ ಹಾನಿಯಾಗಿದೆ. ಶಾಸ್ತ್ರಿ ಅವರಷ್ಟೇ ಎತ್ತರದ ನಿಂತ ಭಂಗಿಯ ಮೂರ್ತಿ ಸ್ಥಾಪಿಸಿದರೆ ವೀಕ್ಷಣೆಗೂ ಸಿಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾದಾಗ,  ನವೀಕೃತ ಶಾಸ್ತ್ರೀಜಿ ಪ್ರತಿಮೆ ಸ್ಥಾಪನೆಗೆ ಸದಸ್ಯರ ಬೆಂಬಲ ವ್ಯಕ್ತವಾಯಿತು.

ಶಾಸ್ತ್ರಿ ವೃತ್ತದ ಸುತ್ತ ಹಸುರೀಕರಣ, ಕಾರಂಜಿ, ಸುತ್ತ ಕಾಂಪೌಂಡ್ ನಿರ್ಮಾಣ ವಾಗಲಿದ್ದು, ಈಗಿರುವ ಹೈಮಾಸ್ಕ್ ದೀಪದ ಕಂಬ ಸ್ಥಳಾಂತರ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು  ಪುರಸಭೆ ಇಂಜಿನಿಯರ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News