ಸೆಕ್ಯುಲರ್ ಅವಕಾಶವಾದದಿಂದ ಫ್ಯಾಶಿಸಂ ಅನ್ನು ಸೋಲಿಸಬಹುದೇ?

Update: 2022-08-13 04:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಿತೀಶ್ ಕುಮಾರ್ ಅವರು ಮತ್ತೆ ‘ಸೆಕ್ಯುಲರ್’ ಶಿಬಿರಕ್ಕೆ ಜಿಗಿದಿರುವುದರಿಂದ ಬಿಜೆಪಿಯ ಫ್ಯಾಶಿಸ್ಟ್ ಆಳ್ವಿಕೆಯಿಂದ ಬೇಸತ್ತಿರುವ ಹಲವರಲ್ಲಿ ಹೊಸ ಆಸೆಯನ್ನು ಕೆರಳಿಸಿದೆ. ಮತ್ತೊಮ್ಮೆ ಸೆಕ್ಯುಲರ್ ಶಿಬಿರ ಚಿಗಿತುಕೊಂಡು 2024ರ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬಹುದು ಎನ್ನುವವರೆಗೆ ಈ ಆಶಾವಾದ ಚಾಚಿಕೊಂಡಿದೆ. ಇದರ ಹಿಂದೆ ನಿರಂತರ ಬಲಿಷ್ಠಗೊಳ್ಳುತ್ತಿರುವ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳಿಗೆ ಯಾವುದೇ ಹಿನ್ನೆಡೆಯಾದರೂ ಒಳ್ಳೆಯದೇ ಎಂಬ ಸಹಜ ನಿರೀಕ್ಷೆ ಇದೆ. ಆದರೆ ಅದೇ ಸಮಯದಲ್ಲಿ ಇದು ನೆಮ್ಮದಿಯ ಬದುಕನ್ನು ಆಶಿಸುವವರ ಅಸಹಾಯಕ ಅವಲಂಬನೆಯೂ ಆಗಿದೆ. ವಾಸ್ತವದೃಷ್ಟಿಯಿಂದ ಈ ಆಶಾವಾದಕ್ಕೆ ಬೇರುಗಳಿವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಮೊದಲನೆಯದಾಗಿ ನಿತೀಶ್ ಕುಮಾರ್ ಅವರನ್ನು ಬಿಹಾರದ ರಾಜಕಾರಣದಲ್ಲಿ ಉಲ್ಟಾ ಚಾಚೂ ಎಂದೇ ಕರೆಯುತ್ತಾರೆ. ಅವರ ವೈಯಕ್ತಿಕ ನಿಲುವುಗಳು ಏನೇ ಅಗಿದ್ದರೂ ಅಧಿಕಾರದಲ್ಲುಳಿಯಲು ಸಂವಿಧಾನದ ಶತ್ರುಗಳ ಜೊತೆಗೂ ಎಂತಹ ರಾಜಿಗಳನ್ನೂ ಮಾಡಿಕೊಳ್ಳಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಅವರು ಆರಕ್ಕೂ ಹೆಚ್ಚು ಬಾರಿ ಶಿಬಿರವನ್ನು ಬದಲಿಸಿದ್ದಾರೆ. ಬಿಜೆಪಿ ವಿರೋಧಿ ಬಣವನ್ನು ತೊರೆಯುವಾಗ ಭ್ರಷ್ಟಾಚಾರ ವಿರೋಧ ಎಂಬ ಕಾರಣವನ್ನೂ, ಬಿಜೆಪಿ ಬಣವನ್ನು ತೊರೆಯುವಾಗ ಕೋಮುವಾದ ವಿರೋಧ ಎಂಬ ಕಾರಣವನ್ನೂ ಕೊಡುತ್ತಾ ಬಂದಿದ್ದಾರೆ. ವಾಸ್ತವದಲ್ಲಿ ಅವರು ಭ್ರಷ್ಟಾಚಾರದ ವಿರೋಧಿಯೂ ಅಲ್ಲ, ಕೋಮುವಾದದ ವಿರೋಧಿಯೂ ಅಲ್ಲ. ಹೀಗಾಗಿ ನಿತೀಶ್ ಕುಮಾರ್ ಅವರ ಪುನರಾಗಮನವನ್ನು ಸೆಕ್ಯುಲರ್ ಶಕ್ತಿಗಳ ಬಲವರ್ಧನೆ ಎಂದು ವ್ಯಾಖ್ಯಾನಿಸುವುದು ಕೇವಲ ಆತ್ಮ ವಂಚನೆಯಾದೀತು.

ಎರಡನೆಯದಾಗಿ, ನಿತೀಶ್ ಕುಮಾರ್ ಅವರು ಬಿಜೆಪಿ ಸಖ್ಯದಲ್ಲಿದ್ದರೂ ಕೋಮುವಾದದ ಪ್ರಭಾವಕ್ಕೆ ಒಳಗಾಗಿರಲಿಲ್ಲ ಎಂದು ಅವರನ್ನು ಸಮರ್ಥಿಸಿಕೊಳ್ಳುವ ‘ಸಮಾಜವಾದಿ’ಗಳಿದ್ದಾರೆ. ಆದರೆ ಇಡೀ ದೇಶವನ್ನೇ ಕಂಗಾಲಾಗಿಸಿದ ಕಪ್ಪುಹಣವನ್ನು ಬಿಳಿ ಮಾಡಲೆಂದೇ ತರಲಾದ ನೋಟು ನಿಷೇಧ ಯೋಜನೆಯನ್ನು ಬಿಜೆಪಿಯ ಇತರ ಮಿತ್ರಪಕ್ಷಗಳು ಸಹ ಪೂರ್ತಿ ಬೆಂಬಲಿಸಿರಲಿಲ್ಲ. ಆದರೆ ಬಿಜೆಪಿಯೊಡನೆ ಸಖ್ಯ ಕುದುರುವ ಮೊದಲು ನೋಟು ನಿಷೇಧವನ್ನು ವಿರೋಧಿಸುತ್ತಿದ್ದ ನಿತೀಶ್‌ರ ಜೆಡಿಯು ಪಕ್ಷ ಬಿಜೆಪಿಯೊಡನೆ ಅಧಿಕಾರ ರಚಿಸಿದೊಡನೆ ನೋಟು ನಿಷೇಧವನ್ನು ಹಾಡಿಹೊಗಳಲು ಆರಂಭಿಸಿತು. ಅಷ್ಟು ಮಾತ್ರವಲ್ಲ, 2019ರಲ್ಲಿ ಮೋದಿ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಸೆಕ್ಯುಲರಿಸಂ ಮೇಲೆ ಪ್ರಜಾತಂತ್ರದ ಮೇಲೆ ಹಾಗೂ ಸಂವಿಧಾನದ ಮೇಲೆ ನಡೆಸಿದ ಪ್ರತಿಯೊಂದು ದಾಳಿಗಳಿಗೂ ಶಾಸನಾತ್ಮಕ ಬೆಂಬಲ ಪಡೆದುಕೊಳ್ಳುವುದರಲ್ಲಿ ಜೆಡಿಯು ಕೀಲಕ ಪಾತ್ರ ವಹಿಸಿದೆ.

2019ರಲ್ಲಿ ಲೋಕಸಭೆಯಲ್ಲಿ ಬಹುಮತ ಪಡೆದುಕೊಂಡಿದ್ದರೂ ಈವರೆಗೆ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಸಿಕ್ಕಿಲ್ಲ. ಹೀಗಾಗಿ ಕಾಶ್ಮೀರದ ಸ್ಥಾನಮಾನ ರದ್ದು ಮಾಡಿದ ಅಪ್ರಜಾತಾಂತ್ರಿಕ ಆರ್ಟಿಕಲ್ 370 ರದ್ದು ವಿಧಿಯು ಜೆಡಿಯು ಬೆಂಬಲವಿಲ್ಲದೆ ಶಾಸನವಾಗುತ್ತಿರಲಿಲ್ಲ. ಹಾಗೆಯೇ ಕರಾಳ ಕಾನೂನಾದ ಯುಎಪಿಎ ತಿದ್ದುಪಡಿ ಕಾಯ್ದೆ, ರೈತ ವಿರೋಧಿ ಕೃಷಿ ಮಸೂದೆಗಳು ರಾಜ್ಯಸಭೆಯಲ್ಲಿ ಜೆಡಿಯು ಬೆಂಬಲದಿಂದಲೇ ಪಾಸಾದವು. ಎಲ್ಲಕ್ಕಿಂತ ಹೆಚ್ಚಾಗಿ ಈ ದೇಶದ ಸೆಕ್ಯುಲರ್ ಸ್ವರೂಪಕ್ಕೆ ಗಂಡಾಂತರ ತಂದಿರುವ ನಾಗರಿಕತ್ವ ತಿದ್ದುಪಡಿ ಕಾಯ್ದೆ(ಸಿಎಎ) ರಾಜ್ಯಸಭೆಯಲ್ಲಿ ಪಾಸಾಗಿ ಕಾಯ್ದೆಯಾಗಲು ಕಾರಣವೇ ಜೆಡಿಯು ಬಹಿರಂಗದಲ್ಲಿ ವಿರೋಧಿಸುತ್ತಾ ರಾಜ್ಯಸಭೆಯಲ್ಲಿ ಅದನ್ನು ಬೆಂಬಲಿಸಿದ್ದು. ಹೀಗಾಗಿ ಈ ದೇಶದಲ್ಲಿ ಕಳೆದ ಎರಡು-ಮೂರು ವರ್ಷಗಳಲ್ಲಿ ಫ್ಯಾಶಿಸಂ ಬೇರುಗಳು ಇನ್ನಷ್ಟು ಸಾಮಾಜಿಕ ನೆಲೆಗಳನ್ನು ಹಾಗೂ ಶಾಸನಾತ್ಮಕ ಬಲವನ್ನು ಪಡೆದುಕೊಳ್ಳುವಲ್ಲಿ ನಿತೀಶ್ ಕುಮಾರ್ ಬ್ರಾಂಡ್‌ನ ಅವಕಾಶವಾದಿ ಸೆಕ್ಯುಲರಿಸಂನ ಪಾತ್ರ ಬಹುಮುಖ್ಯವಾದದ್ದು. ಆದ್ದರಿಂದ ಅವರು ಮೋದಿಯವರ ಒಂದೆರಡು ಸಭೆಗಳಿಗೆ ಗೈರುಹಾಜರಾಗಿದ್ದು ಅಥವಾ ಮುಸ್ಲಿಮರೊಂದಿಗೆ ನಮಾಜಿನಲ್ಲಿ ಭಾಗವಹಿಸಿದ್ದನ್ನು ಮಾತ್ರ ಗಮನಿಸಿ ಅವರಿನ್ನೂ ಸೆಕ್ಯುಲರ್ ಎಂದು ಸಮಾಧಾನಪಟ್ಟುಕೊಳ್ಳುವುದು ತರ್ಕರಹಿತವಾಗುತ್ತದೆ. ಮೂರನೆಯದಾಗಿ ಹಾಗೂ ಅತಿ ಮುಖ್ಯವಾಗಿ ಹಿಂದುತ್ವಕ್ಕೆ ಪಾರಂಪರಿಕವಾಗಿ ನೆಲೆಯಿಲ್ಲದ ಬಿಹಾರದಂತಹ ರಾಜ್ಯಗಳಲ್ಲಿ ಬಿಜೆಪಿಯು ನೆಲೆಯನ್ನು ಪಡೆದುಕೊಳ್ಳಲು ಮೊದಲು ಅವಕಾಶವಾದಿ ಸೆಕ್ಯುಲರ್ ಪಕ್ಷಗಳನ್ನು ನೆಚ್ಚಿಕೊಳ್ಳುವುದು ಅದರ ಕುತಂತ್ರಿ ವ್ಯೆಹತಂತ್ರಗಳಲ್ಲಿ ಪ್ರಧಾನವಾದುದು.

ಆರ್‌ಜೆಡಿ ಪಕ್ಷವೊಂದನ್ನು ಬಿಟ್ಟರೆ ಮಿಕ್ಕ ಎಲ್ಲಾ ಪ್ರಾದೇಶಿಕ ಪಕ್ಷಗಳೂ ತಮ್ಮ ಅವಕಾಶವಾದಿತನದಿಂದಾಗಿ ಬಿಜೆಪಿಯನ್ನು ಗಟ್ಟಿಗೊಳಿಸುವಲ್ಲಿ ಪಾತ್ರವಹಿಸಿವೆ. ಬಿಜೆಪಿ ಇತರ ರಾಜಕೀಯ ಪಕ್ಷಗಳಂತೆ ಕೇವಲ ಅಧಿಕಾರಕ್ಕೆ ರಾಜಕೀಯ ಮಾಡುವ ಪಕ್ಷವಲ್ಲ. ಅದು ಸಂಘಪರಿವಾರದ ಭಾಗವಾಗಿದ್ದು ಅದಕ್ಕೆ ಭಾರತವನ್ನು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಮತ್ತೊಮ್ಮೆ ಬ್ರಾಹ್ಮಣಶಾಹಿ ರಾಷ್ಟ್ರವನ್ನಾಗಿಸುವ ಅಪಾಯಕಾರಿ ಸೈದ್ಧಾಂತಿಕ ಧ್ಯೇಯವಿದೆ. ಅದರ ಈಡೇರಿಕೆಗೆ ಅಧಿಕಾರ ಒಂದು ಸಾಧನ. ಹೀಗಾಗಿ ಅದರ ದೂರಗಾಮಿ ಉದ್ದೇಶವನ್ನು ಈಡೇರಿಸಿಕೊಳ್ಳುವ ಸಲುವಾಗಿ ತಾತ್ಕಾಲಿಕವಾಗಿ ಎಂತಹ ರಾಜಿಗಳಿಗೂ ಸಿದ್ಧವಿರುತ್ತದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಮತ್ತೊಬ್ಬರನ್ನು ಕೂರಿಸಿ ತಾನು ಹಿಂದಿನಿಂದ ಹಿಂದುತ್ವವಾದಿ, ಕಾರ್ಪೊರೇಟ್ ಪರ, ಅಲ್ಪಸಂಖ್ಯಾತ ವಿರೋಧಿ ಶಾಸನಗಳನ್ನು ಮಾಡಿಸುತ್ತದೆ ಹಾಗೂ ಅದರ ಮೂಲಕ ಸಮಾಜದಲ್ಲಿ ಸಂಘಪರಿವಾರದ ಅಂಗಸಂಸ್ಥೆಗಳ ಮೂಲಕ ರಾಜಕೀಯ ಅಧಿಕಾರವನ್ನು ತಮ್ಮ ಸಾಮಾಜಿಕ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಳಸಿಕೊಳ್ಳುತ್ತದೆ. ಬಿಹಾರದ ಉದಾಹರಣೆಯನ್ನೇ ನೋಡಿ. ಬಿಜೆಪಿಯಾಗಿ ಅವತರಿಸಿದ ನಂತರ 1985ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ ಪಕ್ಷ ಪಡೆದುಕೊಂಡಿದ್ದು ಕೇವಲ ಶೇ. 7.5ರಷ್ಟು ವೋಟುಗಳನ್ನು ಮಾತ್ರ. ಆದರೆ 2010ರಲ್ಲಿ ನಿತೀಶ್‌ರೊಡನೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದಾಗ ಜೆಡಿಯುಗೆ ಶೇ.22ರಷ್ಟು ವೋಟುಗಳು ಹಾಗೂ ಬಿಜೆಪಿಗೆ ಶೇ. 16.5ರಷ್ಟು ವೋಟುಗಳೂ ಬಂದವು.

2020ರಲ್ಲಿ ಜೆಡಿಯು ವೋಟಿನ ಪ್ರಮಾಣ ಶೇ. 15ಕ್ಕೆ ಕುಸಿದಿದ್ದರೆ, ಬಿಜೆಪಿಯ ವೋಟಿನ ಪ್ರಮಾಣ ಶೇ. 20ಕ್ಕೆ ಏರಿದೆ. ಅದಕ್ಕೆ ಬಿಜೆಪಿಯು ಎಲ್‌ಜೆಪಿಯ ಜೊತೆಗೆ ನಡೆಸಿದ ಕುತಂತ್ರ ಕಾರಣವೆಂದುಕೊಂಡರೂ, ಬಿಜೆಪಿ ಸ್ಪರ್ಧಿಸಿದ 110 ಕ್ಷೇತ್ರಗಳಲ್ಲಿ ಅದಕ್ಕೆ ಶೇ. 42ರಷ್ಟು ವೋಟುಗಳು ಬಿದ್ದಿವೆ. ಇದಕ್ಕೆ ಪ್ರತಿಯಾಗಿ ಜೆಡಿಯು ಸ್ಪರ್ಧಿಸಿದ 115 ಕ್ಷೇತ್ರಗಳಲ್ಲಿ ಕೇವಲ ಶೇ. 32ರಷ್ಟು ಮತಗಳು ಬಿದ್ದಿವೆ. ಅತಿ ಹೆಚ್ಚು ಸೀಟುಗಳನ್ನು ಪಡೆದುಕೊಂಡ ಅರ್‌ಜೆಡಿಯು ಕೂಡ ಒಟ್ಟಾರೆ ಶೇ. 23ರಷ್ಟು ಮತಗಳನ್ನು ಪಡೆದುಕೊಂಡಿದ್ದರೂ ತಾನು ಸ್ಪರ್ಧಿಸಿದ 144 ಕ್ಷೇತ್ರಗಳಲ್ಲಿ ಕೇವಲ ಶೇ. 39ರಷ್ಟು ಮತಗಳನ್ನು ಪಡೆದುಕೊಂಡಿವೆ. ಅಂದರೆ ಬಿಜೆಪಿ ತಾನು ಸ್ಪರ್ಧಿಸುತ್ತಿರುವ ಕಡೆ ನಿರಂತರವಾಗಿ ತನ್ನ ಬೆಂಬಲವನ್ನು ಇತರ ಎಲ್ಲಾ ಪಕ್ಷಗಳಿಗಿಂತಲೂ ತೀವ್ರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಅದಕ್ಕೆ ಪ್ರಧಾನ ಕಾರಣ ಅಧಿಕಾರವನ್ನು ಬಳಸಿಕೊಂಡು ಅವರು ತಮ್ಮ ಸಾಮಾಜಿಕ ನೆಲೆಯನ್ನು ವಿಸ್ತರಿಸಿಕೊಳ್ಳುವ ಸೈದ್ಧಾಂತಿಕ ವ್ಯೆಹತಂತ್ರ. ನಿತೀಶ್ ಕುಮಾರ್ ಅಂತಹವರ ಸೆಕ್ಯುಲರ್ ಅವಕಾಶವಾದ ಈ ವ್ಯೆಹಕ್ಕೆ ಸಾಕಷ್ಟು ಪುಷ್ಟಿಯನ್ನು ಕೊಟ್ಟಿದೆ. ಈಗ ಬಿಹಾರದಲ್ಲಿ ಬಿಜೆಪಿಯೊಂದೇ ಏಕಮಾತ್ರ ವಿರೋಧ ಪಕ್ಷವಾಗಿದೆ.

ಹಲವು ಪಕ್ಷಗಳು ಸೇರಿಕೊಂಡು ಮುಂದಿನ ಎರಡು-ಮೂರು ವರ್ಷಗಳ ಅಧಿಕಾರ ನಡೆಸಬೇಕಾಗುವುದರಿಂದ ಹುಟ್ಟಬಹುದಾದ ಎಲ್ಲಾ ಅಧಿಕಾರ ವಿರೋಧಿ ಮನೋಭಾವದ ಲಾಭವನ್ನೂ ಬಿಜೆಪಿಯೇ ಪಡೆಯಲಿದೆ. ಅವೆಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಸೆಕ್ಯುಲರ್ ಪಕ್ಷಗಳಿಗೂ ಇರದ ಕಾರ್ಯಕರ್ತರ ಪಡೆ, ಸುಳ್ಳು ಸಿದ್ಧಾಂತ, ವ್ಯೆಹಾತ್ಮಕ ಗುರಿಗಳಿರುವ ಸಂಘಪರಿವಾರ ಬಿಜೆಪಿಯ ಬೆನ್ನಿಗಿರುವುದರಿಂದ ಅದರ ದಾರಿಗೆ ಈ ಬೆಳವಣಿಗೆ ಅಡ್ಡಿಯಾಗುವುದಕ್ಕಿಂತ ಸುಲಭವಾಗಿರುವುದೇ ನಿಜ. ಯಾರು ಎಷ್ಟು ಸೆಕ್ಯುಲರ್ ಎನ್ನುವುದಕ್ಕೆ ಬಿಜೆಪಿಯಿಂದ ಇರುವ ರಾಜಕೀಯ ದೂರ ಮಾನದಂಡವಲ್ಲ. ಬ್ರಾಹ್ಮಣಶಾಹಿ, ಬಂಡವಾಳಶಾಹಿ ಸಂಘಪರಿವಾರದಿಂದ ಸೈದ್ಧಾಂತಿಕವಾಗಿ ಎಷ್ಟು ದೂರವೆನ್ನುವುದರಿಂದ ಒಬ್ಬರ ನೈಜ ಸೆಕ್ಯುಲರಿಸಂ ಸಾಬೀತಾಗುತ್ತದೆ. ಈ ಪರೀಕ್ಷೆಯಲ್ಲಿ ಪದೇಪದೇ ನಾಪಾಸಾಗುತ್ತಿರುವ ನಿತೀಶ್‌ರನ್ನು ಬಿಡಿ, ಕಾಂಗ್ರೆಸನ್ನೂ ಒಳಗೊಂಡಂತೆ ಯಾವುದೇ ವಿರೋಧ ಪಕ್ಷಗಳೂ ಉತ್ತೀರ್ಣರಾಗುತ್ತಿಲ್ಲ. ಕಷ್ಟದ ಪ್ರಶ್ನೆಗಳಿಗೆ ಸುಲಭದ ಉತ್ತರವನ್ನು ಹುಡುಕುವುದೂ ಕೂಡ ಅವಕಾಶವಾದವೇ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News