ಸ್ವಾತಂತ್ರ್ಯ ದಿನ ಆಚರಿಸಬಾರದೆಂದು ಹೇಳುವಷ್ಟು ಮೂರ್ಖರು ನಾವಲ್ಲ: ಡಿ.ಕೆ. ಶಿವಕುಮಾರ್

Update: 2022-08-13 14:58 GMT
ಡಿ.ಕೆ. ಶಿವಕುಮಾರ್ (File Photo)

ಬೆಂಗಳೂರು, ಆ. 13: ‘ಸ್ವಾತಂತ್ರ್ಯ ಕೇವಲ ಒಂದು ಪಕ್ಷಕ್ಕೆ ಸೇರಿದ್ದು ಎಂದು ನಾವು ಎಲ್ಲೂ ಹೇಳಿಲ್ಲ. ಸ್ವಾತಂತ್ರ್ಯ ತಂದುಕೊಟ್ಟಿರುವ ಇತಿಹಾಸ ನಮ್ಮ ಪಕ್ಷಕ್ಕೆ ಇದೆ. ನಮ್ಮ ನಾಯಕರುಗಳು ಸ್ವಾತಂತ್ರ್ಯ ತಂದುಕೊಟ್ಟು ಈ ದೇಶವನ್ನು ಕಟ್ಟಿದ್ದಾರೆ. ಇದನ್ನು ದೇಶದುದ್ದಗಲಕ್ಕೂ ಯುವ ಜನತೆಗೆ ತಿಳಿಸುವ ಕೆಲಸ ಮಾಡಿ ಎಂದು ನಾವು ಸೂಚನೆ ನೀಡಿದ್ದೇವೆಯೇ ಹೊರತು, ಸರಕಾರದವರು ಸ್ವಾತಂತ್ರ್ಯ ದಿನ ಆಚರಿಸಬಾರದು ಎಂದು ಹೇಳುವಷ್ಟು ಮೂರ್ಖರು ನಾವಲ್ಲ' ಎಂದು ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಸ್ಪಷ್ಟಣೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಶಿವಕುಮಾರ್, ‘ಸ್ವಾತಂತ್ರ್ಯ ಅಮೃತ ಮಹೋತ್ಸವ ಇದು ದೇಶದ ಕಾರ್ಯಕ್ರಮ. ಪ್ರತಿಯೊಬ್ಬ ಭಾರತೀಯನು ಆಚರಿಸಬಹುದಾದ ಕಾರ್ಯಕ್ರಮ. ನಾವು ಕೇವಲ ರಾಷ್ಟ್ರಧ್ವಜವನ್ನು ಮಾರಾಟದ ಸರಕಾಗಿ ಮಾಡಬೇಡಿ ಎಂದಷ್ಟೇ ಆಕ್ಷೇಪ ವ್ಯಕ್ತಪಡಿಸಿದ್ದೆವು' ಎಂದು ಬಿಜೆಪಿ(BJP) ವಿರುದ್ಧ ವಾಗ್ದಾಳಿ ನಡೆಸಿದರು.

‘ಕೇಂದ್ರ ಸಚಿವರು ಬಂದು ಕಾರ್ಯಕ್ರಮ ಮಾಡಲಿ. ಅವರಿಗೆ ತ್ರಿವರ್ಣ ಧ್ವಜಕ್ಕೆ ಗೌರವ ನೀಡುವ ಬುದ್ಧಿ ಬಂದಿರುವುದಕ್ಕೆ ನಾವು ಸಂತೋಷಪಡಬೇಕು. ನಾವು ಇಂತಹ ಚಿಲ್ಲರೆ ಚಿಂತನೆ ಮಾಡಬಾರದು. ನಮಗೆ ಮೊದಲು ರಾಷ್ಟ್ರ ಆದ್ಯತೆ ಆಗಿರಬೇಕು. ನಾವು ಇದನ್ನೇ ಆಗ್ರಹಿಸುತ್ತಿದ್ದೆವು. ಯಾರೋ ನಾಯಕನೊಬ್ಬ ರಾಷ್ಟ್ರಧ್ವಜ ತೆಗೆದು ಭಾಗವಾಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದ, ಅದರ ಬದಲು ಇಂತಹ ಕಾರ್ಯಕ್ರಮ ಮಾಡಲಿ. ದೇಶಪ್ರೇಮ ಬರಲಿ' ಎಂದು ಶಿವಕುಮಾರ್ ಟೀಕಿಸಿದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸೆಸ್ಸ್)ದವರು ರಾಷ್ಟ್ರಧ್ವಜ ಹಾರಿಸಿದೆ ಎಂಬ ಸುದ್ದಿ ಕೇಳಿ ನನಗೆ ಸಂತೋಷವಾಯಿತು. ನಾನು ಅವರಿಗೆ ಅಭಿನಂದಿಸುತ್ತೇನೆ. ಇಷ್ಟು ದಿನ ಆರೆಸೆಸ್ಸ್‍ನವರು ರಾಷ್ಟ್ರಧ್ವಜಕ್ಕೆ ಎಲ್ಲಿ ಗೌರವ ನೀಡುತ್ತಿದ್ದರು. ವಾಜಪೇಯಿ ಅವರು ಪಟ್ಟು ಹಿಡಿದ ನಂತರವಷ್ಟೇ ಅವರು ತಮ್ಮ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮುಂದಾದರು. ನಿನ್ನೆ ಶಿಕ್ಷಣ ಸಚಿವ ನಾಗೇಶ್ ಎಬಿವಿಪಿ ಧ್ವಜವನ್ನು ಮೇಲಿಟ್ಟು ಅದರ ಕೆಳಗೆ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ’ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

‘ಎಐಸಿಸಿ ಮುಖಂಡರಾದ ಪ್ರಿಯಾಂಕಾ ಗಾಂಧಿ ಅವರಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ವಿಚಾರ ಕೇಳಿ ಬಂದಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಮಗೆ ಈ ಕಾರ್ಯಕ್ರಮ ಮಾಡಲು ಕರೆ ನೀಡಿದ್ದು, ಇದು ನಮ್ಮೆಲ್ಲರ ಕಾರ್ಯಕ್ರಮ. ಕೇಂದ್ರದಿಂದ ಯಾರು ಬರುತ್ತಾರೆಂದು ಕಾದು ನೋಡೋಣ’ ಎಂದು ಶಿವಕುಮಾರ್ ಇದೇ ವೇಳೆ ವಿವರಣೆ ನೀಡಿದರು.

ಇದನ್ನೂ ಓದಿ: ದಾಂಡೇಲಿ: ಮೀನು ಹಿಡಿಯುತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News