ಸರಕಾರ ನಡೆಸುತ್ತಿಲ್ಲ, ಮ್ಯಾನೇಜ್ ಮಾಡ್ತೀದ್ದೀವಿ ಅಷ್ಟೇ: ಸಚಿವ ಮಾಧುಸ್ವಾಮಿ ಅವರದ್ದೆನ್ನಲಾದ ಆಡಿಯೋ ವೈರಲ್

Update: 2022-08-13 16:27 GMT
ಸಚಿವ ಮಾಧುಸ್ವಾಮಿ 

ಬೆಂಗಳೂರು: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhu Swamy) ಅವರು, ಕಾರ್ಯಕರ್ತರೊಬ್ಬರ ಜೊತೆಗೆ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಸರಕಾರ ನಡೆಸುತ್ತಿಲ್ಲ, ಬದಲಿಗೆ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ' ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆನ್ನಲಾದ ಆಡಿಯೋ ವಿಪಕ್ಷಗಳಿಗೆ ಆಹಾರವಾಗಿದೆ.

ಮಾಧುಸ್ವಾಮಿ ಅವರಿಗೆ ಕರೆ ಮಾಡಿದ ಸಾಮಾಜಿಕ ಕಾರ್ಯಕರ್ತರಾದಂತ ಭಾಸ್ಕರ್ ಎನ್ನುವವರು, ‘ವಿಎಸ್‍ಎಸ್‍ಎನ್ ಬ್ಯಾಂಕ್‍ನಲ್ಲಿ ರೈತರು 50 ಸಾವಿರ ರೂ.ಸಾಲ ತಗೊಂಡಿರುತ್ತಾರೆ. ಅದಕ್ಕೆ ಕಟ್ಟಬೇಕಾದಾಗ ರಿನೀವಲ್‍ಗೆ ಅಂತ, ಬ್ಯಾಂಕ್ ಸಿಬ್ಬಂದಿಗಳೇ 1,300 ರೂ.ತಗೊಳ್ಳುತ್ತಿದ್ದಾರೆ. ಅವರೇ ಕಟ್ಟಿಕೊಂಡು, 1,300 ರೂ.ಬಡ್ಡಿ ಎಂದು ಹಣವನ್ನು ರಾಜ್ಯಾದ್ಯಂತ ಹಿಡಿದುಕೊಳ್ಳುತ್ತಿದ್ದಾರೆ' ಎಂದು ತಿಳಿಸುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ ಅವರದ್ದೆನ್ನಲಾದ ಆಡಿಯೋದಲ್ಲಿ, ‘ನಾನು ಏನಪ್ಪ ಮಾಡಲಿ, ಇದೆಲ್ಲಾ ನನಗೆ ಗೊತ್ತು. ಸಹಕಾರ ಸಚಿವ ಸೋಮಶೇಖರ್ ಗಮನಕ್ಕೂ ತಂದಿದ್ದೇವೆ. ಬಡ್ಡಿ ಹೊಡೆದುಕೊಂಡು ತಿನ್ನುತ್ತಿದ್ದಾರೆ. ಹೆಚ್ಚು ಹಣವನ್ನು ರೈತರಿಂದ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದ್ದೇನೆ. ಅವರು ಏನೂ ಕ್ರಮ ಕೈಗೊಳ್ಳುತ್ತಾ ಇಲ್ಲ ಏನ್ ಮಾಡೋಣ' ಎಂದು ತಮ್ಮ ಸರಕಾರದ ನಿಷ್ಕ್ರಿಯತೆಯನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ.

‘ರೈತರಲ್ಲಪ್ಪ ನಾನೇ ಕಟ್ಟಿದ್ದೇನೆ. ನನ್ನ ಬಳಿಯಲ್ಲಿಯೂ ಬಡ್ಡಿ ತೆಗೆದುಕೊಂಡಿದ್ದಾರೆ. ‘ನೋಡಿ ಸಾರ್ ಈ ಅವ್ಯವಸ್ಥೆಯನ್ನು ಸರಿಪಡಿಸಿ' ಎಂದು ಭಾಸ್ಕರ್ ಕೋರುತ್ತಾರೆ. ಆಗ ಸಚಿವ ಮಾಧುಸ್ವಾಮಿ, ‘ಸರಕಾರ ನಡೆಯುತ್ತಿಲ್ಲ. ಮ್ಯಾನೇಜ್ ಮಾಡುತ್ತಿದ್ದೇವೆ ಅ. ಏನೋ ತಳ್ಳುತ್ತಾ ಇದ್ದೇವೆ' ಎಂದು ತಮ್ಮ ಅಸಹಾಯಕತೆಯನ್ನು ಅವರೇ ಒಪ್ಪಿಕೊಂಡಿದ್ದಾರೆನ್ನಲಾದ ಆಡಿಯೋ ವ್ಯಾಪಕ ಟೀಕೆಗೆ ಕಾರಣವಾಗಿದೆ.

ಇದನ್ನೂ ಓದಿ: ರಕ್ಷಾ ಬಂಧನಕ್ಕೆ ಸಹೋದರಿಯನ್ನು ಭೇಟಿಯಾಗಲು ಹೊರಟಿದ್ದ ವ್ಯಕ್ತಿಯ ಕತ್ತು ಸೀಳಿದ ಗಾಳಿಪಟದ ದಾರ ! 

‘ಬಿಜೆಪಿ ಸರಕಾರದ ನಿಷ್ಕ್ರಿಯತೆ, ಸಚಿವರುಗಳ ಅಸಾಮಥ್ರ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಸಚಿವ ಮಾಧುಸ್ವಾಮಿಯವರಿಂದ ಬಯಲಾಗಿದೆ. ಬಿಜೆಪಿ ಸರಕಾರದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರದ ಮ್ಯಾನೇಜ್ಮೆಂಟ್ ಮಾತ್ರ. ಬಸವರಾಜ ಬೊಮ್ಮಾಯಿ ಅವರ ನಿಷ್ಕ್ರಿಯ ಆಡಳಿತಕ್ಕೆ, ರೈತರಿಗಾಗುತ್ತಿರುವ ಅನ್ಯಾಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News