ಚಿಕ್ಕಮಗಳೂರು: ಸರಕಾರದ ನಿರ್ಲಕ್ಷ್ಯ ಖಂಡಿಸಿ ಚೆನ್ನಡ್ಲು ಅತಿವೃಷ್ಟಿ ಸಂತ್ರಸ್ಥರಿಂದ ಮನೆ ಅಡಿಪಾಯದ ಮೇಲೆ ಧ್ವಜಾರೋಹಣ

Update: 2022-08-13 17:30 GMT

ಚಿಕ್ಕಮಗಳೂರು(Chikkamagaluru), ಆ.13: ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯ ಕಳಸ ತಾಲೂಕಿನ ಚೆನ್ನಡ್ಲು ಗ್ರಾಮಲ್ಲಿ ಅತಿವೃಷ್ಟಿಯಿಂದಾಗಿ ಭೂ ಕುಸಿತ ಸಂಭವಿಸಿ 16 ಕುಟುಂಬಗಳು ಮನೆ, ಜಮೀನುಗಳನ್ನು ಕಳೆದುಕೊಂಡಿದ್ದು, ಈ ಕುಟುಂಬಗಳಿಗೆ ಪರ್ಯಾಯ ನಿವೇಶನ ನೀಡಿದ್ದರೂ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡದೇ ಸರಕಾರ ನಿರ್ಲಕ್ಷ್ಯವಹಿಸಿದೆ. ಸರಕಾರ, ಜನಪ್ರತಿನಿಧಿಗಳ ಈ ನಿರ್ಲಕ್ಷ್ಯ ಖಂಡಿಸಿ ಶನಿವಾರ ಸಂತ್ರಸ್ಥರು ವಿನೂತನವಾಗಿ ಪ್ರತಿಭಟಿಸಿದ್ದು, ಮನೆಯ ಅಡಿಪಾಯದ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 2019ರ ಆಗಸ್ಟ್ ತಿಂಗಳಿನಲ್ಲಿ ಜಿಲ್ಲಾದ್ಯಂತ ಭಾರೀ ಮಳೆ ಸುರಿದ ಪರಿಣಾಮ ಮಲೆನಾಡು ಭಾಗದಲ್ಲಿ ಭಾರೀ ಹಾನಿ ಸಂಭವಿಸಿತ್ತು. ಜಿಲ್ಲೆಯ ಕಳಸ ತಾಲೂಕಿನ ಚೆನ್ನಡ್ಲು ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದ 16 ಕುಟುಂಬಗಳಿಗೆ ಸೇರಿದ್ದ ಮನೆ, ಜಮೀನು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಅಲ್ಲದೇ ಮನೆಯೊಂದು ಕುಸಿದ ಪರಿಣಾಮ ವ್ಯಕ್ತಿಯೊಬ್ಬರು ಮನೆಯಡಿಯಲ್ಲಿ ಸಿಲುಕಿ ಸಾವಿಗೀಡಾಗಿದ್ದರು. ಅಂದು ಅಲ್ಲಿನ ಸಂತ್ರಸ್ಥರನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ತೆರವು ಮಾಡಿದ್ದರು.

ಬಳಿಕ ಮನೆ ಕಳೆದುಕೊಂಡ ಸಂತ್ರಸ್ಥರು ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಪರ್ಯಾಯ ಜಮೀನು, ನಿವೇಶನ ಜಾಗಕ್ಕೆ ಮನವಿ ಮಾಡಿದ್ದರು. ಅದರಂತೆ ಜಿಲ್ಲಾಡಳಿತ ಸಂತ್ರಸ್ಥರಿಗೆ ಬೇರೆ ಜಾಗದಲ್ಲಿ ನಿವೇಶನ ಕಲ್ಪಿಸಲು ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಿತ್ತು. ಮನೆ ನಿರ್ಮಾಣಕ್ಕೆಂದು ತಲಾ 1 ಲಕ್ಷ ರೂ. ಅನುದಾನವನ್ನೂ ನೀಡಿತ್ತು. ಆದರೆ ನಿವೇಶನ ಜಾಗ ಗುರುತಿಸಿ 4 ವರ್ಷ ಕಳೆದರೂ ಜಿಲ್ಲಾಡಳಿತ ಸಂತ್ರಸ್ಥ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡದಿರುವುದು ಒಂದೆಡೆಯಾದರೇ, ಮನೆ ನಿರ್ಮಾಣಕ್ಕೆ ಬಾಕಿ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಸಂತ್ರಸ್ಥರು ಆರೋಪಿಸಿದ್ದಾರೆ.

ನಿವೇಶನ ನೀಡಿರುವ ಜಾಗದಲ್ಲಿ ಸಂತ್ರಸ್ಥರ ನಿವೇಶನದ ಅಳತೆಯನ್ನೂ ಮಾಡದ ಕಂದಾಯಾಧಿಕಾರಿಗಳು ಇದುವರೆಗೂ ಹಕ್ಕುಪತ್ರವನ್ನು ನೀಡಿಲ್ಲ. ಹಕ್ಕುಪತ್ರ ಇಲ್ಲದೇ ಮನೆಯ ಜಿಪಿಎಸ್ ಮಾಡಲು ಸಾಧ್ಯವಿಲ್ಲ. ಪರಿಣಾಮ ಮನೆ ನಿರ್ಮಾಣದ ಅನುದಾನವೂ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಪಂ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದು ಸಂತ್ರಸ್ಥರು ಆರೋಪಿಸುತ್ತಿದ್ದಾರೆ.

ಹಕ್ಕುಪತ್ರ ನೀಡಬೇಕೆಂದು ಸಂತ್ರಸ್ಥರು ಅನೇಕ ಬಾರಿ ಕಳಸ ಪಟ್ಟಣದಲ್ಲಿ ಧರಣಿ ಮಾಡಿದ್ದು, ಧರಣಿ ವೇಳೆ ಶೀಘ್ರ ಹಕ್ಕುಪತ್ರದ ಭರವಸೆ ನೀಡಿದ್ದ ಸಂಬಂಧಿಸಿದ ಇಲಾಖಾಧಿಕಾರಿಗಳು ಇದುವರೆಗೂ ಹಕ್ಕುಪತ್ರ ನೀಡದೇ ಸತಾಯಿಸುತ್ತಿದ್ದಾರೆಂದು ಸಂತ್ರಸ್ಥರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಸರಕಾರ ನಡೆಸುತ್ತಿಲ್ಲ, ಮ್ಯಾನೇಜ್ ಮಾಡ್ತೀದ್ದೀವಿ ಅಷ್ಟೇ: ಮಾಧುಸ್ವಾಮಿ ಅವರದ್ದೆನ್ನಲಾದ ಆಡಿಯೋ ವೈರಲ್

ಸದ್ಯ ಸರಕಾರಗಳು ಹರ್ ಘರ್ ತಿರಂಗಾ ಕಾರ್ಯಕ್ರಮದಡಿಯಲ್ಲಿ ಎಲ್ಲ ಕುಟುಂಬಸ್ಥರಿಗೂ ರಾಷ್ಟ್ರಧ್ವಜವನ್ನು ನೀಡಿ ಅದನ್ನು ಮನೆಗಳ ಮೇಲೆ ಹಾರಿಸುವಂತೆ ಆದೇಶ ಹೊರಡಿಸಿದೆ. ಆದರೆ ಅತಿವೃಷ್ಟಿಯಿಂದ ಸಂತ್ರಸ್ಥರಾಗಿರುವ ನಾವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಭಾರೀ ಮಳೆಯಿಂದಾಗಿ ನಮ್ಮ ಮನೆಗಳು ಮಣ್ಣುಪಾಲಾಗಿವೆ. ಸರಕಾರದಿಂದ ಮನೆ ನಿರ್ಮಾಣಕ್ಕೆ ನಿವೇಶನ ಸಿಕ್ಕಿದೆಯಾದರೂ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡುತ್ತೇವೆ ಎಂದು ಹೇಳಿ ಕೇವಲ 1 ಲಕ್ಷ ರೂ. ಮಾತ್ರ ನೀಡಿದೆ. ಈ ಹಣದಲ್ಲಿ ಮನೆಯ ಅಡಿಪಾಯ ಮಾತ್ರ ನಿರ್ಮಿಸಲು ಸಾಧ್ಯವಾಗಿದೆ. 4 ವರ್ಷ ಕಳೆದರೂ ಬಾಕಿ ಅನುದಾನವನ್ನು ಬಿಡುಗಡೆ ಮಾಡದೇ ಸತಾಯಿಸಲಾಗುತ್ತಿದೆ. ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ನಾವು ಬೇಸತ್ತು ಹೋಗಿದ್ದೇವೆ. ರಾಷ್ಟ್ರಧ್ವಜ ಹಾರಿಸಲು ನಮಗೆ ಮನೆಯೇ ಇಲ್ಲ, ಈ ಕಾರಣಕ್ಕೆ ಮನೆಯ ಅಡಿಪಾಯದ ಮೇಲೆ ಶನಿವಾರ ಧ್ವಜಾರೋಹಣ ಮಾಡಿದ್ದೇವೆ ಎಂದು ಸಂತ್ರಸ್ಥರಾದ ಅವಿನಾಶ್, ವಾಸು ಸಂತ್ರಸ್ಥರು ವಾರ್ತಾಭಾರತಿ ಬಳಿ ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಡಳಿತ ಈ ಕೂಡಲೇ ಇಲ್ಲಿನ 16 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ಹಂಚಿಕೆ ಮಾಡಬೇಕು. ಮನೆ ನಿರ್ಮಾಣಕ್ಕೆ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿರುವ ಸಂತ್ರಸ್ಥರು, ನಿವೇಶನ ನೀಡಿರುವ ಜಾಗದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್‍ನಂತಹ ಮೂಲಸೌಕರ್ಯಗಳಿಲ್ಲದೇ ಮನೆ ನಿರ್ಮಾಣದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತಿ ಹಾಗೂ ಕ್ಷೇತ್ರದ ಶಾಸಕರು ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News