ಬಿಟ್ಟಾ ಕರಾಟೆಯ ಪತ್ನಿ, ಹಿಜ್ಪುಲ್ ಉಗ್ರನ ಪುತ್ರ ಸಹಿತ ನಾಲ್ವರು ಜಮ್ಮು ಕಾಶ್ಮೀರದ ಸರಕಾರಿ ಅಧಿಕಾರಿಗಳ ವಜಾ

Update: 2022-08-13 18:06 GMT

ಹೊಸದಿಲ್ಲಿ, ಆ.13:  ಪ್ರತ್ಯೇಕವಾದಿ ನಾಯಕ  ಬಿಟ್ಟಾ ಕರಾಟೆಯ ಪತ್ನಿ ಹಾಗೂ ಹಿಝ್ಬುಲ್ ಮುಜಾಹಿದ್ದೀನ್ ಗುಂಪಿನ ವರಿಷ್ಠ ಸಯ್ಯದ್ ಸಲಾಹುದ್ದೀನ್‌ನ ಪುತ್ರ ಸೇರಿದಂತೆ ನಾಲ್ಕು ಮಂದಿ ಉದ್ಯೋಗಿಗಳನ್ನು , ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ   ಭಾಗಿಯಾಗಿದ್ದಕ್ಕಾಗಿ  ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಜಮ್ಮುಕಾಶ್ಮೀರದ ಸರಕಾರದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

2011ರ ಬ್ಯಾಚ್‌ನ ಜಮ್ಮುಕಾಶ್ಮೀರದ ಐಎಎಸ್ ಅಧಿಕಾರಿಣಿ ಅಸ್ಸಾಬಾಹುಲ್ ಅರ್ಜಾಮಂಡ್ ಖಾನ್, ಕಾಶ್ಮೀರ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ವರ್ಗದ ವಿಜ್ಞಾನಿ ಡಾ.ಮುಹೀತ್ ಅಹ್ಮದ್ ಭಟ್, ಕಾಶ್ಮೀರ ವಿವಿಯ  ಹಿರಿಯ ಸಹಾಯಕ ಅಧಿಕಾರಿ ಮಜೀದ್ ಹುಸೈನ್ ಖಾದ್ರಿ ಹಾಗೂ ಜಮ್ಮುಕಾಶ್ಮೀರ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (ಜೆಕೆಇಡಿಐ)ನ ಮಾಹಿತಿತಂತ್ರಜ್ಞಾನ ವಿಭಾಗದ ಮ್ಯಾನೇಜರ್ ಸೈಯದ್ ಅಬ್ದುಲ್ ಮುಯೀದ್ ವಜಾಗೊಂಡ ಸರಕಾರಿ ಅಧಿಕಾರಿಗಳಾಗಿದ್ದಾರೆ.

ಅಸ್ಸಾಬಾಹುಲ್  ಅವರು ಜಮ್ಮುಕಾಶ್ಮೀರ ವಿಮೋಚನಾರಂಗದ ನಾಯಕ ಹಾಗೂ 1990ರ ದಶಕದಲ್ಲಿ ಕಾಶ್ಮೀರ ಪಂಡಿತರ ಹತ್ಯೆ ಪ್ರಕರಣದ ಆರೋಪಿ ಬಿಟ್ಟಾ ಕರಾಟೆಯ ಪತ್ನಿ. ಸೈಯದ್ ಅಬ್ದುಲ್ ಮುಯೀದ್ ಹಿಝ್ಬುಲ್ ಮುಜಾಹಿದ್ದೀನ್ ಗುಂಪಿನ ವರಿಷ್ಠ ಸಯದ್ ಸಲಾಹರುದ್ದೀನ್‌ನ  ಪುತ್ರನಾಗಿದ್ದಾನೆ. ಈ ನಾಲ್ವರನ್ನು ಸಂವಿಧಾನದ 311ನೇ ವಿಧಿಯಡಿ ವಜಾಗೊಳಿಲಾಗಿದೆ. ಕೇಂದ್ರ ಅಥವಾ ರಾಜ್ಯದಲ್ಲಿ ನಾಗರಿಕ ಸೇವೆಗಳಲ್ಲಿ ನಿಯೋಜಿತರಾದ ವ್ಯಕ್ತಿಗಳನ್ನು ಸಂವಿಧಾನದ ಈ ವಿಧಿಯಡಿ ವಜಾಗೊಳಿಸಬಹುದಾಗಿದೆ.

ರಾಜ್ಯದ ಭದ್ರತೆಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳನ್ನು  ನಡೆಸುತ್ತಿರುವುದು ಕಾನೂನು ಜಾರಿ ಹಾಗೂ  ಗುಪ್ತಚರ ಏಜೆನ್ಸಿಗಳ ಗಮನಕ್ಕೆ ಬಂದಿದೆ ಎಂದು ಜಮ್ಮುಕಾಶ್ಮೀರ ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News