ಶೌರ್ಯ ಪ್ರಶಸ್ತಿ; CRPF, ಜಮ್ಮು ಪೊಲೀಸರಿಗೆ ಸಿಂಹಪಾಲು

Update: 2022-08-15 02:26 GMT

ಹೊಸದಿಲ್ಲಿ: ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ನೀಡುವ ಪೊಲೀಸ್ ಶೌರ್ಯ ಪ್ರಶಸ್ತಿಯಲ್ಲಿ CRPF ಯೋಧರು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಯ ಸಿಬ್ಬಂದಿ ಶೇಕಡ 62ಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಈ ವರ್ಗದಲ್ಲಿ ನೀಡಲಾಗುವ ಒಟ್ಟು 347 ಪದಕಗಳ ಪೈಕಿ 204 (ಶೇಕಡ 58) ಪದಕಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯದಲ್ಲಿ ಯಶಸ್ಸು ಸಾಧಿಸಿದವರಿಗೆ ನೀಡಲಾಗಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ 80 ಮಂದಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಉಗ್ರಗಾಮಿ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾದ 14 ಮಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಕೇಂದ್ರೀಯ ಅರೆ ಮಿಲಿಟರಿ ಪಡೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳ ಒಟ್ಟು 1082 ಮಂದಿಗೆ ಮೂರು ವರ್ಗಗಳಲ್ಲಿ ಪೊಲೀಸ್ ಪದಕಗಳನ್ನು ನೀಡಲಾಗುತ್ತದೆ. ಇದರಲ್ಲಿ 347 ಶೌರ್ಯ ಪ್ರಶಸ್ತಿ, 87 ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಪ್ರತಿಭಾನ್ವಿತ ಸೇವೆಗಾಗಿ 648 ಪೊಲೀಸರಿಗೆ ಪ್ರಶಸ್ತಿ ನೀಡಲಾಗುತ್ತಿದೆ. CRPF ಒಟ್ಟು 171 ಪದಕಗಳನ್ನು ಗೆದ್ದಿದ್ದರೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು 125, ಮಹಾರಾಷ್ಟ್ರ ಪೊಲೀಸರು 84, ಉತ್ತರ ಪ್ರದೇಶ ಪೊಲೀಸರು 80 ಹಾಗೂ ಬಿಎಸ್‍ಎಫ್ ಯೋಧರು 70 ಪದಕ ಗೆದ್ದಿದ್ದಾರೆ.

ದೆಹಲಿ ಪೊಲೀಸರು ಒಟ್ಟು 18 ಪದಕ ಪಡೆದಿದ್ದಾರೆ. ಪೊಲೀಸ್ ಪದಕಗಳಲ್ಲಿ ಅತ್ಯುನ್ನತ ಎನಿಸಿದ 'ಶೌರ್ಯಕ್ಕಾಗಿ ಇರುವ ರಾಷ್ಟ್ರಪತಿಗಳ ಪೊಲೀಸ್ ಪದಕ'ವನ್ನು ಈ ಬಾರಿ ಯಾರಿಗೂ ನೀಡಿಲ್ಲ.

ಶೌರ್ಯ ಪ್ರಶಸ್ತಿಗಳಲ್ಲಿ CRPF ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ನಡುವೆ ಪ್ರಬಲ ಪೈಪೋಟಿ ಕಂಡುಬಂದಿದ್ದು, ಕ್ರಮವಾಗಿ 109 ಹಾಗೂ 108 ಪದಕಗಳನ್ನು ಪಡೆದಿದ್ದಾರೆ. 30 ಮಂದಿ ಪೊಲೀಸರಿಗೆ ಮರಣೋತ್ತರವಾಗಿ ಶೌರ್ಯ ಪದಕಗಳನ್ನು ನೀಡಲಾಗಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News