"ಭಾರತ ಪ್ರಜಾಪ್ರಭುತ್ವದ ತಾಯಿ":ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಸ್ವಾತಂತ್ರ್ಯೋತ್ಸವದ ಭಾಷಣ

Update: 2022-08-15 04:49 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಸೋಮವಾರ ಹೊಸದಿಲ್ಲಿಯ ಕೆಂಪು ಕೋಟೆಯ ಆವರಣದಿಂದ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡಿದರು. ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು ಭಾರತವು ಪ್ರಜಾಪ್ರಭುತ್ವದ ತಾಯಿ. ತನ್ನ 75 ವರ್ಷಗಳ ಪ್ರಯಾಣದಲ್ಲಿ ಅಮೂಲ್ಯವಾದ ಸಾಮರ್ಥ್ಯವನ್ನು ಗಳಿಸಿದೆ ಎಂಬುದನ್ನು ಭಾರತವು ಸಾಬೀತು ಮಾಡಿದೆ. ಅನೇಕ ಸವಾಲುಗಳನ್ನು ಎದುರಿಸಿದೆ ಎಂದರು.

 "ನಮ್ಮ ತ್ರಿವರ್ಣ ಧ್ವಜವು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಮೂಲೆ ಮೂಲೆಗಳಲ್ಲಿ ತನ್ನ ಪೂರ್ಣ ವೈಭವದಲ್ಲಿ ಹಾರಾಡುತ್ತಿದೆ" ಎಂದು ಪ್ರಧಾನಮಂತ್ರಿಯವರು 75ನೇ ಸ್ವಾತಂತ್ರ್ಯೋತ್ಸವದಲ್ಲಿ (75 years of Independence) ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ಪ್ರಧಾನಿ ದಿಲ್ಲಿಯ ಕೆಂಪುಕೋಟೆ ಮೇಲೆ ಸತತ 9ನೇ ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ.

ಆತ್ಮನಿರ್ಭರ ಭಾರತ ಜನಾಂದೋಲನವಾಗಲಿ

ಆತ್ಮ ನಿರ್ಭರ ಭಾರತಕ್ಕೆ ಒತ್ತು ನೀಡಿದ ಪ್ರಧಾನಿ, ಈ ಕಲ್ಪನೆಯನ್ನು ಜನಾಂದೋಲನದಂತೆ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ನೆಹರೂ, ಪಟೇಲ್, ರಾಜೇಂದ್ರ ಪ್ರಸಾದ್ ರನ್ನು ನೆನಪಿಸಿಕೊಂಡ ಮೋದಿ

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಾಗಲಿ, ದೇಶವನ್ನು ಕಟ್ಟಿದವರಾಗಲಿ ಅವರಿಗೆ ಶಿರಬಾಗಿ ನಮಿಸುವ ದಿನವಿದು ಎಂದು ಹೇಳಿದ ಪ್ರಧಾನಿ ಮೋದಿ ಅವರು, ಡಾ.ರಾಜೇಂದ್ರ ಪ್ರಸಾದ್, ಜವಾಹರ ಲಾಲ್ ನೆಹರೂ,  ಸರ್ದಾರ್ ಪಟೇಲ್, ಎಸ್.ಪಿ. ಮುಖರ್ಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜೆ.ಪಿ. ನಾರಾಯಣ್, ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶ್ ಮುಖ್ ಮುಂತಾದವರನ್ನು ಸ್ಮರಿಸಿದರು.

ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ್ ಸಾವರ್ಕರ್, ಭಗತ್ ಸಿಂಗ್, ಜವಾಹರಲಾಲ್ ನೆಹರು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು.

ರಾಷ್ಟ್ರದ ಪ್ರಜ್ಞೆಯನ್ನು ಜಾಗೃತಗೊಳಿಸಿದ  ನಾರಾಯಣ ಗುರು, ಸ್ವಾಮಿ ವಿವೇಕಾನಂದ ಹಾಗೂ ರವೀಂದ್ರ ನಾಥ ಠಾಗೋರ್ ಅವರಿಗೆ ಪ್ರಧಾನಿ ಗೌರವ ಸಲ್ಲಿಸಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದ್ದು, ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ಸಮಯ ಇದಾಗಿದೆ ಎಂದರು.

ಭ್ರಷ್ಟಾಚಾರ, ಸ್ವಜನಪಕ್ಷಪಾತದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಭ್ರಷ್ಟಾಚಾರ ಹಾಗೂ  'ಪರಿವಾರವಾದ' ಅಥವಾ ಸ್ವಜನಪಕ್ಷಪಾತ ಇಂದು ನಾವು ಎದುರಿಸುತ್ತಿರುವ ಎರಡು ದೊಡ್ಡ ಸವಾಲುಗಳಾಗಿವೆ. ಭ್ರಷ್ಟಾಚಾರವು ಗೆದ್ದಲಿನಂತೆ ದೇಶವನ್ನು ಟೊಳ್ಳಾಗಿಸುತ್ತಿದೆ, ನಾವು ಅದರ ವಿರುದ್ಧ ಹೋರಾಡಬೇಕಾಗಿದೆ. ನಮ್ಮ ಸಂಸ್ಥೆಗಳ ಬಲವನ್ನು ಅರಿತುಕೊಳ್ಳಲು, ಅರ್ಹತೆಯ ಆಧಾರದ ಮೇಲೆ ದೇಶವನ್ನು ಮುನ್ನಡೆಸಲು ‘ಪರಿವಾರವಾದ ವಿರುದ್ಧ ನಾವು ಜಾಗೃತಿ ಮೂಡಿಸಬೇಕು' ಎಂದರು.

 ಹಿಂದಿನ ಸರಕಾರಗಳಲ್ಲಿ ಭಾರತವನ್ನು ಲೂಟಿ ಮಾಡಿದವರು ಈಗ ತಮ್ಮ ಪಾಪಗಳನ್ನು ತೀರಿಸಿಕೊಳ್ಳುತ್ತಿದ್ದಾರೆ. ಅವರ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ನನಗೆ ನಿಮ್ಮ ಬೆಂಬಲ ಬೇಕು. ನಾವು ಭ್ರಷ್ಟಾಚಾರ ಹಾಗೂ  ಭ್ರಷ್ಟರನ್ನು ಎದುರಿಸಬೇಕಾಗಿದೆ ಎಂದು  ಪ್ರಧಾನಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News