ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮೀನಿನ ಖಾದ್ಯಗಳ ಹೊಟೇಲ್ ಆರಂಭ: ಸಚಿವ ಎಸ್.ಅಂಗಾರ

Update: 2022-08-17 15:07 GMT
ಫೈಲ್ ಚಿತ್ರ

ಬೆಂಗಳೂರು, ಆ. 17: ‘ಖಾಸಗಿ ಸಹಭಾಗಿತ್ವದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮೀನಿನ ಖಾದ್ಯಗಳ ಹೊಟೇಲ್‍ಗಳನ್ನು ಆರಂಭಿಸಲಾಗುವುದು' ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ (Angara S.) ಅವರು  ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಪ್ರಮುಖ ಜಲಾಶಯಗಳಾದ ಕೃಷ್ಣರಾಜಸಾಗರ(ಕೆಆರ್ ಸ್), ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ ಸೇರಿದಂತೆ ರಾಜ್ಯದ ಹನ್ನೆರಡು ಜಲಾಶಯಗಳಲ್ಲಿಯೂ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಮತ್ಸ್ಯ ಕ್ರಾಂತಿ ನಡೆಯಲಿದ್ದು, ಇದಕ್ಕೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು.

‘ಮೀನುಗಾರಿಕಾ ಇಲಾಖೆಯಿಂದ ಬೆಂಗಳೂರು ಸೇರಿದಂತೆ ಕೆಲವು ರಾಜ್ಯದ ವಿವಿಧೆಡೆಗಳಲ್ಲಿ ಅಗ್ಗದ ದರದಲ್ಲಿ ಮೀನಿನ ಖಾದ್ಯಗಳ ಊಟದ ಹೊಟೇಲ್‍ಗಳನ್ನು ಸ್ಥಾಪಿಸಲಾಗಿದೆ. ಆದರೆ, ಅದನ್ನು ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸಲು ಹಣಕಾಸಿನ ಲಭ್ಯತೆ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಇದೀಗ ಖಾಸಗಿ ಸಹಭಾಗಿತ್ವದಲ್ಲಿ ಆ ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ. ಆರಂಭದಲ್ಲಿ ಬೆಂಗಳೂರು ನಗರದ 5 ಕಡೆಗಳಲ್ಲಿ ಇಲಾಖೆಯಿಂದ ಮೀನಿನ ಖಾದ್ಯಗಳ ಹೊಟೇಲ್ ಆರಂಭಿಸಲಾಗುವುದು' ಎಂದು ಅಂಗಾರ ವಿವರಿಸಿದರು.

ಹೆಚ್ಚಿನ ಮೀನು ಉತ್ಪಾದನೆಗೆ ಆದ್ಯತೆ: ‘ರಾಜ್ಯದಲ್ಲಿ ಮೀನಿನ ಬೇಡಿಕೆ ಹೆಚ್ಚಿದೆ. ಆದರೆ, ಬೇಡಿಕೆಯ ಪ್ರಮಾಣದಲ್ಲಿ ಮೀನಿನ ಉತ್ಪಾದನೆ ಮತ್ತು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಉತ್ಪಾದನೆಗೆ ತೀರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ವಿಸ್ತರಿಸಲು ಕ್ರಮ ಕೈಗೊಂಡಿದ್ದು, ಮೀನು ಸಾಕಾಣಿಕೆ ಕೇಂದ್ರವನ್ನು ಆಲಮಟ್ಟಿ ಜಲಾಶಯದಲ್ಲಿ ಸ್ಥಾಪಿಸಲಾಗುವುದು' ಎಂದು ಅವರು ಹೇಳಿದರು.

‘ಆಲಮಟ್ಟಿಯಲ್ಲಿ ಮೀನು ಮರಿ ಸಾಕಾಣಿಕೆ ಮಾಡಲು 75 ಎಕರೆ ಜಾಗವನ್ನು ನೀರಾವರಿ ಇಲಾಖೆ ಒದಗಿಸಿದ್ದು ಇದೇ ರೀತಿ ಕೆಆರ್‍ಎಸ್, ಲಿಂಗನಮಕ್ಕಿ, ಭದ್ರಾ ಸೇರಿದಂತೆ 12 ಜಲಾಶಯಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು' ಎಂದ ಸಚಿವ ಅಂಗಾರ, ‘ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವುದು. ಜತೆಗೆ ಹೊರರಾಜ್ಯಗಳಿಂದ ಮೀನು ಮರಿಗಳ ಆಮದು ತಪ್ಪಿಸಲು ಮೇಲ್ಕಂಡ ಕ್ರಮ ವಹಿಸಲಾಗಿದೆ ಎಂದರು.

ಇದನ್ನೂ ಓದಿ: ಮಧುಗಿರಿ: ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರುವ ಫ್ಲೆಕ್ಸ್ ನಲ್ಲಿ ಗಾಂಧಿ ಹಂತಕ ಗೋಡ್ಸೆ ಭಾವಚಿತ್ರ

‘ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ಮೀನಿನ ತಳಿಗಳನ್ನು ಉತ್ಪಾದಿಸುವುದು ನಮ್ಮ ಉದ್ದೇಶ. ಮಡೆಂಜಿ, ಮರೆಂಜಿ ತಳಿಯ ಮೀನುಗಳು ದಕ್ಷಿಣ ಕನ್ನಡದಲ್ಲಿ ಹೆಚ್ಚು. ಅದೇ ರೀತಿ ಆಯಾ ಜಿಲ್ಲೆಗಳಿಗೆ ವಿಶಿಷ್ಟವಾದ ತಳಿಗಳಿದ್ದು, ಅವುಗಳನ್ನು ಅಭಿವೃದ್ದಿಪಡಿಸಲಾಗುವುದು. ಆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮೀನು ಉತ್ಪಾದನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಡಲ್ಕೊರೆತ ತಡೆಗೆ ಕ್ರಮ: ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಕಡಲ್ಕೊರೆತದಿಂದ ಅಪಾರ ಪ್ರಮಾಣದ ನಷ್ಟವಾಗುತ್ತಿದ್ದು, ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ತಾತ್ಕಾಲಿಕವಾಗಿ ಸಮಸ್ಯೆ ನಿವಾರಣೆ ಮಾಡಲಾಗಿದೆ. ಆದರೂ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಉಲ್ಲಾಳದ ಬಟ್ಟಂಪಾಡಿ ಮತ್ತು ಮರವಂತೆಗಳಲ್ಲಿ ಎರಡು ಪ್ರತ್ಯೇಕ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಅಳವಡಿಸಿ ಕಡಲ್ಕೊರೆತ ತಡೆಗಟ್ಟಲು ಕ್ರಮ ವಹಿಸಲಾಗುವುದು' ಎಂದು ಅಂಗಾರ ಹೇಳಿದರು.

‘ಬಟ್ಟಂಪಾಡಿಯಲ್ಲಿ ಸಮುದ್ರದ ಅಲೆಗಳ ತಡೆಗಟ್ಟಲು ತಂತ್ರಜ್ಞಾನ ಅಳವಡಿಸಲಾಗುವುದು. ಅದೇ ಮಾದರಿಯಲ್ಲೇ ಮರವಂತೆಯಲ್ಲೂ ಪ್ರತ್ಯೇಕ ತಂತ್ರಜ್ಞಾನ ಬಳಸಿ ಸಮುದ್ರ ಕೊರೆತವನ್ನು ತಡೆಗಟ್ಟಲಾಗುವುದು. ಆಧುನಿಕ ತಂತ್ರಜ್ಞಾನ ಬೇರೆ ರಾಜ್ಯಗಳಲ್ಲಿ ಯಶಸ್ವಿಯಾಗಿದ್ದು ನಮ್ಮಲ್ಲೂ ಅದನ್ನು ಆಳವಡಿಸಿಕೊಂಡರೆ ಪರಿಣಾಮಕಾರಿಯಾಗಲಿದೆ' ಎಂದು ಸಚಿವ ಅಂಗಾರ ಮಾಹಿತಿ ನೀಡಿದರು.

‘ಕಡಲ್ಕೊರೆತ ತಡೆಗಟ್ಟಲು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 350 ಕೋಟಿ ರೂ.ವೆಚ್ಚದಲ್ಲಿ ಮಾಡಿದ್ದ ಕಾಮಗಾರಿ ಕಳಪೆಯಾಗಿದ್ದು, ಈ ಕುರಿತು ತನಿಖೆಗೆ ಸರಕಾರ ನಿರ್ಧರಿಸಿದೆ. ಸೆಪ್ಟಂಬರ್ 10ರ ಒಳಗಾಗಿ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ವಿಧಿಸಲಾಗುವುದು. ಅಲ್ಲದೆ, ಕಡಲ್ಕೊರೆತ ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ' ಎಂದು ಅಂಗಾರ ವಿವರಿಸಿದರು.

''ಮಂಗಳೂರು ಬಂದರು ಅಭಿವೃದ್ಧಿ''

‘ವಾಣಿಜ್ಯ ಚಟುವಟಿಕೆಗಾಗಿ ಕೇರಳದ ಕೊಚ್ಚಿನ್ ಸೇರಿದಂತೆ ಬೇರೆ ಬೇರೆ ಬಂದರುಗಳ ಮೇಲೆ ನಾವು ಅವಲಂಬಿತವಾಗಿದ್ದೇವೆ. ಆ ಹಿನ್ನೆಲೆಯಲ್ಲಿ ಮಂಗಳೂರು ಬಂದರನ್ನು ಅಭಿವೃದ್ಧಿಪಡಿಸಿ ವಾಣಿಜ್ಯ ವಹಿವಾಟಿನ ಕೇಂದ್ರವನ್ನಾಗಿ ಮಾಡಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ. ಇದರಿಂದ ಆಮದು-ರಫ್ತು ಕಾರ್ಯಗಳಿಗೆ ಅನುಕೂಲವಾಗಲಿದೆ' 

-ಎಸ್.ಅಂಗಾರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News