​ ಗ್ರೀಸ್ ಅರ್ಥವ್ಯವಸ್ಥೆಯ ಮೇಲಿನ ಯುರೋಪಿಯನ್‌ ಯೂನಿಯನ್ ನಿಗಾ ವ್ಯವಸ್ಥೆ ಅಂತ್ಯ‌

Update: 2022-08-20 16:45 GMT

ಅಥೆನ್ಸ್, ಆ.20: ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಗ್ರೀಸ್ ದೇಶಕ್ಕೆ ಆರ್ಥಿಕ ನೆರವು ಮುಂದುವರಿಸುವಾಗ ಯುರೋಪಿಯನ್ ಯೂನಿಯನ್(ಇಯು) ಒಡ್ಡಿದ್ದ ಅರ್ಥವ್ಯವಸ್ಥೆಯ ಮೇಲಿನ ನಿಗಾ ವ್ಯವಸ್ಥೆಯ ಷರತ್ತು 12 ವರ್ಷದ ಬಳಿಕ ಅಂತ್ಯಗೊಂಡಿದೆ ಎಂದು ವರದಿಯಾಗಿದೆ. ತನ್ನ ಬಜೆಟ್ ಕೊರತೆಯಲ್ಲಿ ತೀವ್ರ ಹೆಚ್ಚಳವಾಗಿರುವುದನ್ನು 2009ರ ನವೆಂಬರ್ನಲ್ಲಿ ಗ್ರೀಸ್ ಬಹಿರಂಗಪಡಿಸಿತ್ತು ಮತ್ತು ಇದು ಯುರೋ ವಲಯದಾದ್ಯಂತ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು ಮತ್ತು ದಶಕಗಳ ಕಾಲ ಗ್ರೀಕ್ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಆರ್ಥಿಕತೆ 25%ಕ್ಕೂ ಅಧಿಕ ಕುಸಿತ ಕಂಡಿದ್ದರೆ ನಿರುದ್ಯೋಗ ಸುಮಾರು 28% ಹೆಚ್ಚಿತ್ತು ಮತ್ತು ನುರಿತ ವೃತ್ತಿಪರರು ಸಾಮೂಹಿಕವಾಗಿ ವಲಸೆ ಹೋದರು.

ಗ್ರೀಸ್ ಪಾವತಿಸಬೇಕಿದ್ದ 289 ಶತಕೋಟಿ ಯುರೋ ಮೊತ್ತದ ಸಾಲದ ಪಾವತಿಯನ್ನು ಮುಂದೂಡಲು ಮತ್ತು ಯುರೋ ವಲಯದಿಂದ ಗ್ರೀಸ್ ಹೊರಬೀಳದಂತೆ ತಡೆಯುವ ನಿಟ್ಟಿನಲ್ಲಿ ಅಂತರಾಷ್ಟೀಯ ಹಣಕಾಸು ಸಂಸ್ಥೆ(ಐಎಂಎಫ್), ಯುರೋಪಿಯನ್ ಯೂನಿಯನ್ ಮತ್ತು ಯುರೋಪಿಯನ್ ಯೂನಿಯನ್ ಸೆಂಟ್ರಲ್ ಬ್ಯಾಂಕ್ ರೂಪಿಸಿದ ವ್ಯವಸ್ಥೆಯು ಗ್ರೀಸ್ನಲ್ಲಿ ವ್ಯಾಪಕ ಆರ್ಥಿಕ ಸುಧಾರಣೆಗೆ ಸೂಚಿಸಿತ್ತು.

ಸರಕಾರಿ ಖರ್ಚು ವೆಚ್ಚದ ಮೇಲೆ ನಿಯಂತ್ರಣ, ವೇತನ ಕಡಿತ, ತೆರಿಗೆ ಹೆಚ್ಚಳ, ಖಾಸಗೀಕರಣ ಸೇರಿದಂತೆ ಹಲವು ವ್ಯಾಪಕ ಸುಧಾರಣಾ ಕ್ರಮ ಇದರಲ್ಲಿ ಸೇರಿದೆ. ಹೀಗೆ ಗ್ರೀಸ್ ದೇಶದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳಲು ಅದನ್ನು ಯುರೋಪಿಯನ್ ಯೂನಿಯನ್ನ ನಿಗಾ ವ್ಯವಸ್ಥೆಯಡಿ ತರಲಾಯಿತು. ನಾಗರಿಕರಿಗೆ ನೋವು ತಂದ, ಆರ್ಥಿಕತೆಯನ್ನು ನಿಶ್ಚಲಗೊಳಿಸಿದ ಮತ್ತು ಸಮಾಜವನ್ನು ವಿಭಜಿಸಿದ 12 ವರ್ಷಗಳ ಆವರ್ತವು ಮುಗಿದಿದೆ ಎಂದು ಪ್ರಧಾನಿ ಕಿರಿಯಾಕೋಸ್ ಮಿತ್ಸೊಟಕಿಸ್ ಹೇಳಿದ್ದಾರೆ.

ಇಂದಿನ ಗ್ರೀಸ್ ವಿಭಿನ್ನ ಗ್ರೀಸ್ ಆಗಿದೆ. ಪ್ರಗತಿ, ಏಕತೆ ಮತ್ತು ಸಮೃದ್ಧಿಯಿಂದ ಕೂಡಿದ ಹೊಸ ದಿಗಂತವು ನಮ್ಮೆಲ್ಲರಿಗೆ ಹೊರಹೊಮ್ಮಲಿದೆ. ನಾವು ಸಶಕ್ತ ಬೆಳವಣಿಗೆಯನ್ನು ದಾಖಲಿಸಿದ್ದೇವೆ ಮತ್ತು ನಿರುದ್ಯೋಗ ಪ್ರಮಾಣದಲ್ಲಿ ಕಳೆದ ವರ್ಷದಿಂದ 3%, 2019ರಿಂದ 5% ಕುಸಿತ ದಾಖಲಾಗಿದೆ ಎಂದವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News