ಮಂಡ್ಯ: ಇಂದಿನಿಂದ ಮೈಷುಗರ್‌ ಕಾರ್ಯಾರಂಭ

Update: 2022-09-01 18:10 GMT

ಮಂಡ್ಯ, ಸೆ.1: ರಾಜ್ಯದ ಏಕೈಕ ಸರಕಾರಿ ಸ್ವಾಮ್ಯದ ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಗುರುವಾರ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಗೋಪಾಯ್ಯ, ರೈತರಿಗೆ ಅನುಕೂಲಕರವಾಗಿರುವ ಮೈಷುಗರ್ ಕಾರ್ಖಾನೆ ಸರಕಾರದ ವ್ಯಾಪ್ತಿಯಲ್ಲಿ ಲಾಭದಾಯಕವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು. ಕಾರ್ಖಾನೆ ಪುನಾರಾರಂಭಕ್ಕೆ ಶ್ರಮಿಸಿದ ಮುಖ್ಯಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು, ರೈತ ಸಂಘದವರು ಹಾಗೂ ರೈತರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದು,  ಇಂದು ಕಬ್ಬು ನುರಿಸುವ ಕಾರ್ಯಕ್ಕೆ ಸಂಕೇತಿಕವಾಗಿ ಚಾಲನೆ ನೀಡಲಾಗಿದೆ. ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇವೆ. ಅವುಗಳನ್ನು ಸರಿಪಡಿಸಲಾಗುವುದು. ಮುಂದಿನ ದಿನದಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅವರಿಂದಲೂ ಮೈಷುಗರ್ ಕಾರ್ಖಾನೆಗೆ ಕರೆದು ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

ಈ ಭಾಗದ ರೈತರಿಗೆ ಹೆಚ್ಚು ಉಪಯುಕ್ತವಾಗುವ ಸಕ್ಕರೆ ಕಾರ್ಖಾನೆ ಅತ್ಯುತ್ತಮವಾಗಿ ನಡೆಯಬೇಕು. ದಿನಕ್ಕೆ 4000 ಟನ್ ಕಬ್ಬು ನುರಿಸುವ ನಿರೀಕ್ಷೆ ಹೊಂದಲಾಗಿದ್ದು, ಹೊಸ ಕಾರ್ಖಾನೆಯ ರೀತಿ ರೂಪಿಸಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಚಿವ ಡಾ.ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಷ್, ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ಡಾಕೆ.ಅನ್ನದಾನಿ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ರೈತ ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಇತರರು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News