ಕರ್ನಾಟಕ-ಆಂಧ್ರ ಗಡಿಯಲ್ಲಿ ಗಣಿಗಾರಿಕೆ ತಡೆಗೆ ಆಗ್ರಹ; ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸುತ್ತೇವೆ: ಎಸ್.ಆರ್.ಹಿರೇಮಠ್

Update: 2022-09-04 18:45 GMT

ಬೆಂಗಳೂರು, ಸೆ.4: ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿ ಅಕ್ರಮ ಗಣಿಗಾರಿಕೆ ತಡೆಗಟ್ಟಲು, ಎರಡೂ ರಾಜ್ಯಗಳ ಗಡಿಭಾಗದಿಂದ 2 ಕಿಲೋಮೀಟರ್ ಸುತ್ತಳತೆಯ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆ ನಿಷೇಧಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿಗಾರಿಕೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಅನುಮತಿ ನೀಡಿದ್ದು, ಇದರಿಂದ, ಕರ್ನಾಟಕ, ಆಂಧ್ರಪ್ರದೇಶದ ಗಡಿಭಾಗದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಆರಂಭಗೊಳ್ಳುವ ಅಪಾಯವಿದೆ ಎಂದು ತಿಳಿಸಿದರು. 

ಆಂಧ್ರ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದೆ ಸುಪ್ರೀಂ ಕೋರ್ಟ್ ಸೂಕ್ತ ನಿರ್ಧಾರದ ಮೂಲಕ ಮೈನಿಂಗ್ ಮಾಫಿಯಾಕ್ಕೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಗಣಿಗಾರಿಕೆ ಆರಂಭಿಸುವ ಸಾಧ್ಯತೆ ಇದೆ. ಇದಕ್ಕೆ ಅಲ್ಲಿಯ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಒಪ್ಪಿಗೆ ನೀಡಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಯಾವೆಲ್ಲ ಕಾನೂನು ಕ್ರಮ ಕೈಗೊಳ್ಳಲಾಗಿದೆಯೋ, ಅವುಗಳನ್ನು ಆಂಧ್ರಪ್ರದೇಶದಲ್ಲೂ ಕೈಗೊಳ್ಳಬೇಕು. ಈ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಹಿರೇಮಠ ಅವರು ತಿಳಿಸಿದರು.

ಕರ್ನಾಟಕದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಮಿತಿಯನ್ನು ಸಂಪೂರ್ಣ ಸಡಿಲಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದು ಸ್ವಾಗತಾರ್ಹ. ಬಳ್ಳಾರಿ, ಚಿತ್ರದುರ್ಗದಲ್ಲಿ ಗಣಿಗಾರಿಕೆ ಮಿತಿ ಹೆಚ್ಚಳಕ್ಕೆ ಅನುಮತಿ ಕೋರಿ ಕೇಂದ್ರ ಉನ್ನತಾಧಿಕಾರ ಸಮಿತಿ ಅರ್ಜಿ ಸಲ್ಲಿಸಿತ್ತು. ಪರಿಸರ ಸಂರಕ್ಷಣೆ ಬಗ್ಗೆ ಸಮಾಜ ಪರಿವರ್ತನಾ ಸಮುದಾಯದ ಪರವಾಗಿ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ವಾದ ಮಂಡಿಸಿದ್ದರು. ವಾದ ಆಲಿಸಿದ ಸುಪ್ರ್ರೀಂ ಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿ ನಮ್ಮ ನಿಲುವು ಎತ್ತಿ ಹಿಡಿದಿದೆ ಎಂದು ಎಸ್.ಆರ್.ಹಿರೇಮಠ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News