ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯ: ಆದೇಶ

Update: 2022-09-06 15:14 GMT

ಬೆಂಗಳೂರು, ಸೆ. 6: ‘ಕನ್ನಡ ಭಾಷೆ ನಮಗೆ ಆದ್ಯತೆ ಆಗಬೇಕೇ ಹೊರತು, ಆಯ್ಕೆಯಾಗಬಾರದು. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಯನ್ವಯ, ಇನ್ನು ಮುಂದೆ ರಾಜ್ಯದಲ್ಲಿ ಜರುಗುವ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡ ಕಡ್ಡಾಯವಾಗಿ ಬಳಸತಕ್ಕದ್ದು' ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸುತ್ತೋಲೆ ಹೊರಡಿಸಿದ್ದಾರೆ.

ಮಂಗಳವಾರ ಸುತ್ತೋಲೆ ಹೊರಡಿಸಿದ್ದು, ‘ಕನ್ನಡವನ್ನು ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಇರತಕ್ಕದ್ದೆಂದು ಕರ್ನಾಟಕ ರಾಜ್ಯ ಭಾಷೆ ಅಧಿನಿಯಮ-1953ರಲ್ಲಿ ನಿರ್ದಿಷ್ಟಪಡಿಸಲಾಗಿರುತ್ತದೆ. ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯ ಜೊತೆಗೆ ಸಾರ್ವಭೌಮ ಭಾಷೆಯಾಗಿದೆ. ಕನ್ನಡವನ್ನು ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾನೂನಿನನ್ವಯ ಸಂರಕ್ಷಿಸುವ ಸಲುವಾಗಿ ಅಭಿವೃದ್ಧಿ ಪ್ರಾಧಿಕಾರದ ರಚನೆಯಾಗಿರುತ್ತದೆ' ಎಂದು ತಿಳಿಸಲಾಗಿದೆ.

‘ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಪತ್ರ ಬರೆದಿದ್ದು, ‘ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯನ್ನು ಬಳಸದಿರುವ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಈ ಬಗ್ಗೆ ವೇದಿಕೆ ಮೇಲೆ ಅಳವಡಿಸಲಾಗುವ ಪರದೆಗಳಲ್ಲಿ ಫಲಕಗಳಲ್ಲಿ ಹಾಗೂ ಒಟ್ಟಾರೆಯಾಗಿ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸರಕಾರದ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಕೋರಿರುತ್ತಾರೆ' ಎಂದು ವಂದಿತಾ ಶರ್ಮಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸರಕಾರ ಬೇಜವಾಬ್ದಾರಿ ಆಡಳಿತ ನಿಲ್ಲಿಸಿ ನಾಗರಿಕರಿಗೆ ನೆಮ್ಮದಿ ನೀಡಬೇಕು: ಸಿದ್ದರಾಮಯ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News