2021ರ ವಿಶ್ವಸಂಸ್ಥೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 132ನೇ ಸ್ಥಾನಕ್ಕೆ ಕುಸಿದ ಭಾರತ

Update: 2022-09-08 16:41 GMT

ಹೊಸದಿಲ್ಲಿ,ಸೆ.8: ಗುರುವಾರ ಪ್ರಕಟಗೊಂಡ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ವರದಿಯಲ್ಲಿ 2021ರ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ)ದಲ್ಲಿ ಭಾರತವು 2020ಕ್ಕೆ ಹೋಲಿಸಿದರೆ ಒಂದು ಸ್ಥಾನ ಕೆಳಕ್ಕೆ ಜಾರಿದೆ. 191 ದೇಶಗಳ ಪಟ್ಟಿಯಲ್ಲಿ ಭಾರತವು 132ನೇ ಸ್ಥಾನದಲ್ಲಿದೆ.

ವರದಿಯು ಈ ದೇಶಗಳ ಪ್ರಜೆಗಳ ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ಸಾಮರ್ಥ್ಯ,ಅವರಿಗೆ ಜ್ಞಾನಗಳಿಕೆಗೆ ಅವಕಾಶ ಮತ್ತು ಯೋಗ್ಯವಾದ ಜೀವನಮಟ್ಟ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ.

2020ರಲ್ಲಿ 0.642ರಷ್ಟಿದ್ದ ಭಾರತದ ಎಚ್‌ಡಿಐ 2021ರಲ್ಲಿ 0.633ಕ್ಕೆ ಕುಸಿದಿದೆ. 2019ರಲ್ಲಿ ನಿಶ್ಚಲಗೊಳ್ಳುವ ಮುನ್ನ ಭಾರತದ ಎಚ್‌ಡಿಐ ಪ್ರತಿವರ್ಷವೂ ಸುಧಾರಣೆಯನ್ನು ಕಂಡಿತ್ತು. 2020ರಲ್ಲಿ ಎಚ್‌ಡಿಐ 0.003ರಷ್ಟು ಮತ್ತು 2021ರಲ್ಲಿ 0.009ರಷ್ಟು ಕುಸಿತವನ್ನು ದಾಖಲಿಸಿದೆ.

ಕುಸಿತದ ಹೊರತಾಗಿಯೂ ಭಾರತವು ‘ಮಧ್ಯಮ ಮಾನವ ಅಭಿವೃದ್ಧಿ ’ ವರ್ಗದಲ್ಲಿ ಉಳಿದುಕೊಂಡಿದೆ. ಈ ವರ್ಗದಲ್ಲಿ 43 ದೇಶಗಳಿದ್ದು, ಹೆಚ್ಚಿನವು ಏಶ್ಯಾ,ಆಫ್ರಿಕಾ ಮತ್ತು ದ.ಅಮೆರಿಕಕ್ಕೆ ಸೇರಿವೆ.

ನೆರೆಯ ದೇಶಗಳ ಪೈಕಿ ಶ್ರೀಲಂಕಾ (73),ಚೀನಾ (79),ಬಾಂಗ್ಲಾದೇಶ (129) ಮತ್ತು ಭೂತಾನ (127) ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿದ್ದರೆ,ಪಾಕಿಸ್ತಾನ (161),ನೇಪಾಳ (143) ಮತ್ತು ಮ್ಯಾನ್ಮಾರ್ (149) ಕೆಳಗಿನ ಸ್ಥಾನಗಳಲ್ಲಿವೆ.

ಸ್ವಿಟ್ಜರ್‌ಲ್ಯಾಂಡ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ,ನಾರ್ವೆ ಮತ್ತು ಐಸ್‌ಲ್ಯಾಂಡ್ ನಂತರದ ಸ್ಥಾನಗಳಲ್ಲಿವೆ. ದಕ್ಷಿಣ ಸುಡಾನ್,ಚಾಡ್ ಮತ್ತು ನೈಜರ್ ಪಟ್ಟಿಯಲ್ಲಿ ತಳಮಟ್ಟದಲ್ಲಿರುವ ಮೂರು ದೇಶಗಳಾಗಿವೆ.

2020ರಲ್ಲಿ ಶೇ.70.1 ವರ್ಷಗಳಿದ್ದ ಜನನ ವೇಳೆಯ ಆಯುರ್ನಿರೀಕ್ಷೆಯು ಕಳೆದ ವರ್ಷ 67.2 ವರ್ಷಗಳಿಗೆ ಇಳಿದಿದ್ದು 2021ರಲ್ಲಿ ಭಾರತದ ಎಚ್‌ಡಿಐ 0.009 ಅಂಕಗಳಷ್ಟು ಕುಸಿಯಲು ಕಾರಣವಾಗಿದೆ.

ಖರೀದಿ ಸಾಮರ್ಥ್ಯದ ಸಮಾನತೆ (ಪಿಪಿಪಿ) ಆಧಾರದಲ್ಲಿ ಭಾರತದ ಒಟ್ಟು ರಾಷ್ಟ್ರೀಯ ತಲಾದಾಯವು 2020ರಲ್ಲಿದ್ದ 6,107 ಡಾ.(ಸುಮಾರು 4,86,689 ರೂ.)ಗಳಿಂದ 2021ರಲ್ಲಿ 6,590 ಡಾ.(5,25,181 ರೂ.)ಗಳಿಗೆ ಏರಿದೆ.

ಪಿಪಿಪಿ ವಿವಿಧ ದೇಶಗಳಲ್ಲಿಯ ಬೆಲೆಗಳ ಮಾಪನವಾಗಿದ್ದು,ದೇಶಗಳ ಕರೆನ್ಸಿಗಳ ಸಂಪೂರ್ಣ ಖರೀದಿ ಶಕ್ತಿಯನ್ನು ಹೋಲಿಸಲು ನಿರ್ದಿಷ್ಟ ಸರಕುಗಳ ಬೆಲೆಗಳನ್ನು ಬಳಸುತ್ತದೆ.

ಮಾನಸಿಕ ಯಾತನೆಯ ವಿಷಯದಲ್ಲಿ ಭಾರತ,ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಜನಾಂಗೀಯ ಅಲ್ಪಸಂಖ್ಯಾತ ವರ್ಗಗಳ ಪುರುಷರು ಜಗತ್ತಿನಲ್ಲಿಯೇ ಅತಿ ಹೆಚ್ಚು ಪ್ರತಿಕೂಲ ಪರಿಣಾಮಗಳನ್ನು ಅನುಭವಿಸಿದ್ದಾರೆ ಎಂದು ವರದಿಯು ಬೆಟ್ಟು ಮಾಡಿದೆ.

ಶಿಕ್ಷಣಕ್ಕೆ ಅವಕಾಶ ಮತ್ತು ಆದಾಯದ ಆಧಾರದಲ್ಲಿ ತಾರತಮ್ಯದ ವಿಷಯದಲ್ಲಿ ದಿಲ್ಲಿಯ ಉನ್ನತ ಆರ್ಥಿಕ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳು ಗಣ್ಯ ಶಾಲೆಗಳಲ್ಲಿ ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದ ಮಕ್ಕಳಿಗೆ ಶೇ.20ರಷ್ಟು ಸ್ಥಾನಗಳನ್ನು ಮೀಸಲಿಡುವ ಸರಕಾರದ ನೀತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದಿರುವ ವರದಿಯು, ಆದ್ದರಿಂದ ಶಿಕ್ಷಣದಲ್ಲಿ ಸೇರ್ಪಡೆ ಮತ್ತು ವೈವಿಧ್ಯತೆ ನೀತಿಯು ಸಾಧ್ಯವಾಗಿಸಿರುವ ನಿಯಮಿತ ವೈಯಕ್ತಿಕ ಸಂವಾದಗಳು ಆರ್ಥಿಕವಾಗಿ ದುರ್ಬಲ ವರ್ಗಗಳ ವ್ಯಕ್ತಿಗಳ ಕಳಂಕವನ್ನು ತೊಡೆದುಹಾಕಿದೆ ಎಂದಿದೆ.

ಲಿಂಗ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತದ ಸೂಚ್ಯಂಕವು 2020ರಲ್ಲಿದ್ದ 0.845ರಿಂದ 2021ರಲ್ಲಿ 0.849ಕ್ಕೆ ಏರಿಕೆಯಾಗಿದೆ ಎಂದಿರುವ ವರದಿಯು,ಭಾರತದಲ್ಲಿ ಹಲವಾರು ಆಂದೋಲನಗಳು ಮಹಿಳೆಯರ ಹಕ್ಕುಗಳಿಗೆ ಪುಷ್ಟಿ ನೀಡಿವೆ,ಅವರು ಈಗ ಉತ್ತಮ ಕಾನೂನು ಹಕ್ಕುಗಳು,ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ,ಲೈಂಗಿಕ ಕಿರುಕುಳಗಳಿಂದ ಹೆಚ್ಚಿನ ರಕ್ಷಣೆ ಇತ್ಯಾದಿಗಳನ್ನು ಪಡೆಯುತ್ತಿದ್ದಾರೆ. ಆದಾಗ್ಯೂ ಭಾರತದ ಲಿಂಗ ಅಭಿವೃದ್ಧಿ ಸೂಚ್ಯಂಕವು ಈಗಲೂ ಜಾಗತಿಕ ಮಟ್ಟ (0.958)ಕ್ಕಿಂತ ಕೆಳಗೆಯೇ ಇದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News