ಮಹಾರಾಷ್ಟ್ರ:ಎರಡು ಉದ್ಯಮ ಸಮೂಹಗಳ ಮೇಲೆ ಐಟಿ ದಾಳಿ,: 100 ಕೋ.ರೂ.ಅಘೋಷಿತ ಆದಾಯ ಪತ್ತೆ

Update: 2022-09-09 16:07 GMT

ಹೊಸದಿಲ್ಲಿ,ಸೆ.9: ಮಹಾರಾಷ್ಟ್ರದ ಎರಡು ಉದ್ಯಮ ಸಮೂಹಗಳ ಮೇಲೆ ಇತ್ತೀಚಿಗೆ ದಾಳಿಗಳನ್ನು ನಡೆಸಿದ ಆದಾಯ ತೆರಿಗೆ ಇಲಾಖೆಯು 100 ಕೋ.ರೂ.ಗೂ ಅಧಿಕ ಅಘೋಷಿತ ಆದಾಯವನ್ನು ಪತ್ತೆ ಹಚ್ಚಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ಶುಕ್ರವಾರ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ಮರಳು ಗಣಿಗಾರಿಕೆ,ಸಕ್ಕರೆ ತಯಾರಿಕೆ,ರಸ್ತೆ ನಿರ್ಮಾಣ,ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಕಾಲೇಜುಗಳ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಈ ಎರಡು ಉದ್ಯಮ ಸಂಸ್ಥೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ಆ.25ರಂದು ಆರಂಭಿಸಿತ್ತು. ಕಾರ್ಯಾಚರಣೆಯ ಅಂಗವಾಗಿ ಸೊಲ್ಲಾಪುರ, ಉಸ್ಮಾನಾಬಾದ್,ನಾಸಿಕ್ ಮತ್ತು ಕೊಲ್ಲಾಪುರ ಜಿಲ್ಲೆಗಳ 20ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧಗಳನ್ನು ನಡೆಸಲಾಗಿತ್ತು ಎಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.

ವಶಪಡಿಸಿಕೊಂಡ ದಾಖಲೆಗಳು ಮತ್ತು ಡಿಜಿಟಲ್ ದತ್ತಾಂಶಗಳು ಬೋಗಸ್ ವೆಚ್ಚಗಳು,ಬಹಿರಂಗಗೊಳಿಸದ ನಗದು ಮಾರಾಟ, ವಿವರಿಸಲಾಗದ ಸಾಲಗಳು/ಕ್ರೆಡಿಟ್ ನಮೂದುಗಳು ಸೇರಿದಂತೆ ಈ ಉದ್ಯಮ ಸಮೂಹಗಳು ತೆರಿಗೆಯನ್ನು ವಂಚಿಸಲು ಅಳವಡಿಸಿಕೊಂಡಿದ್ದ ಕಾರ್ಯತಂತ್ರಗಳನ್ನು ತೋರಿಸುತ್ತಿವೆ ಎಂದು ತಿಳಿಸಿರುವ ಸಿಬಿಡಿಟಿ, ಮರಳು ಗಣಿಗಾರಿಕೆ ಮತ್ತು ಸಕ್ಕರೆ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಸಮೂಹದ ಪ್ರಕರಣದಲ್ಲಿ 15 ಕೋ.ರೂ.ಗೂ ಅಧಿಕ ವೌಲ್ಯದ ಸಕ್ಕರೆಯ ಲೆಕ್ಕರಹಿತ ನಗದು ಮಾರಾಟವನ್ನು ಪತ್ತೆ ಹಚ್ಚಲಾಗಿದ್ದು, ಸಾಕ್ಷಾಧಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದುಹೇಳಿದೆ.

ಸಮೂಹವು ತನ ಅಘೋಷಿತ ಆದಾಯವನ್ನು ತನ್ನ ಲೆಕ್ಕಪತ್ರಗಳಲ್ಲಿ ಸುಳ್ಳು ಅಸುರಕ್ಷಿತ ಸಾಲಗಳ ರೂಪದಲ್ಲಿ ತೋರಿಸಿತ್ತು ಎಂದು ಅದು ತಿಳಿಸಿದೆ. ಆಸ್ತಿಗಳ ಮಾರಾಟದಿಂದ ಸುಮಾರು 43 ಕೋ.ರೂ.ಗಳ ಬಂಡವಾಳ ಗಳಿಕೆಯ ಸಾಕ್ಷಗಳನ್ನೂ ವಶಪಡಿಕೊಳ್ಳಲಾಗಿದೆ.

ಆರೋಗ್ಯ ರಕ್ಷಣೆ,ವೈದ್ಯಕೀಯ ಕಾಲೇಜುಗಳ ನಿರ್ವಹಣೆ ಮತ್ತು ರಸ್ತೆ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಉದ್ಯಮ ಸಮೂಹದ ಪ್ರಕರಣದಲ್ಲಿ ಕ್ಯಾಪಿಟೇಶನ್ ಶುಲ್ಕದ ಸ್ವೀಕೃತಿ,ವೈದ್ಯರು/ಪಿಜಿ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ವೇತನ ಮತ್ತು ಶಿಷ್ಯವೇತನಗಳನ್ನು ವಾಪಸ್ ಪಡೆದಿದ್ದಕ್ಕೆ ಸಂಬಂಧಿಸಿದ ಅಘೋಷಿತ ನಗದು ರಸೀದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಮೂಹದ ಅಘೋಷಿತ ಆದಾಯ ಸುಮಾರು 35 ಕೋ.ರೂ.ಗಳಾಗಿವೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದು ತಿಳಿಸಿರುವ ಹೇಳಿಕೆಯು,ಈವರೆಗೆ 100 ಕೋ.ರೂ.ಗೂ ಅಧಿಕ ಅಘೋಷಿತ ಆದಾಯವನ್ನು ಪತ್ತೆ ಹಚ್ಚಲಾಗಿದೆ ಮತ್ತು ಐದು ಕೋ.ರೂ.ಅಧಿಕ ವೌಲ್ಯದ ಅಘೋಷಿತ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News