ಭಾಗಶಃ ಕ್ಷಾಮ ಪರಿಸ್ಥಿತಿ; ಅಕ್ಕಿ ಉತ್ಪಾದನೆ 12 ದಶಲಕ್ಷ ಟನ್ ಕುಂಠಿತ: ಉನ್ನತ ಅಧಿಕಾರಿ

Update: 2022-09-10 03:32 GMT

ಹೊಸದಿಲ್ಲಿ: ದೇಶದಲ್ಲಿ ಬೇಸಿಗೆಯಲ್ಲಿ ಬಿತ್ತನೆ ಮಾಡಲಾದ ಬತ್ತದ ಇಳುವರಿ ಭಾಗಶಃ ಕ್ಷಾಮ ಸ್ಥಿತಿಯಿಂದಾಗಿ 12 ದಶಲಕ್ಷ ಟನ್‍ಗಳಷ್ಟು ಕುಸಿದಿದೆ. ಆದಾಗ್ಯೂ ಒಟ್ಟಾರೆ ಆಹಾರಧಾನ್ಯ ದಾಸ್ತಾನು ಸಾಕಷ್ಟಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಆಹಾರಧಾನ್ಯದ ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಆಹಾರಧಾನ್ಯಗಳ ರಫ್ತಿಗೆ ನಿರ್ಬಂಧ ಹೇರಿದ ಮರುದಿನವೇ ಉನ್ನತ ಅಧಿಕಾರಿ ಈ ಮಾಹಿತಿ ನೀಡಿದ್ದಾರೆ.

ನಾಲ್ಕು ರಾಜ್ಯಗಳಲ್ಲಿ ಮಳೆ ಕೊರತೆಯಿಂದಾಗಿ ಬತ್ತ ಉತ್ಪಾದನೆ ಕುಂಠಿತವಾಗಲಿದೆ. ಆದರೆ ಉಳಿದ ರಾಜ್ಯಗಳಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಇಳುವರಿ ಹೆಚ್ಚುವ ನಿರೀಕ್ಷೆಯಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.

ಈ ಹಿಂದಿನ ದಾಸ್ತಾನು ಕಾರಣದಿಂದ ಹಾಗೂ ಬಿತ್ತನೆ ಪ್ರದೇಶ ಮತ್ತು ನಿರೀಕ್ಷಿತ ಇಳುವರಿಯ ಅಂದಾಜಿನಲ್ಲಿ ಒಟ್ಟಾರೆಯಾಗಿ ದೇಶದಲ್ಲಿ ಆಹಾರಧಾನ್ಯಗಳ ಸಂಗ್ರಹ ಸಾಕಷ್ಟು ಇರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜುಲೈ 1ರ ಅಂಕಿ ಅಂಶಗಳ ಪ್ರಕಾರ ಅಕ್ಕಿ ಮಾಡದ ಬತ್ತವೂ ಸೇರಿದಂತೆ ದೇಶದಲ್ಲಿ 47 ದಶಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ಬಫರ್ ಸ್ಟಾಕ್ ಅಗತ್ಯತೆ 13.5 ದಶಲಕ್ಷ ಟನ್‍ಗಳಾಗಿವೆ.

ಹಲವು ರಾಜ್ಯಗಳಲ್ಲಿ ಮಳೆಯ ಕೊರತೆಯಿಂದ ಇದುವರೆಗೆ ಬತ್ತ ಬಿತ್ತನೆ ಕೇವಲ 38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಗಿದೆ. ದೇಶದ ಒಟ್ಟು ಅಕ್ಕಿ ಉತ್ಪಾದನೆಯ ಶೇಕಡ 80ರಷ್ಟು ಉತ್ಪಾದನೆ ಮುಂಗಾರು ಹಂಗಾಮಿನಲ್ಲಿ ಆಗುತ್ತದೆ. ಇದರಿಂದಾಗಿ 10 ದಶಲಕ್ಷ ಟನ್ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿ ಇದು 12 ದಶಲಕ್ಷ ಟನ್ ಆಗುವ ಸಾಧ್ಯತೆ ಇದೆ" ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಬಿತ್ತನೆ, ವಾಡಿಕೆಗಿಂತ ಸುಮಾರು 25 ಲಕ್ಷ ಹೆಕ್ಟೇರ್‌ ನಷ್ಟು ಕಡಿಮೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಈ ನಾಲ್ಕು ರಾಜ್ಯಗಳಲ್ಲಿ ಅಕ್ಕಿ ಉತ್ಪಾದನೆ 7-8 ದಶಲಕ್ಷ ಟನ್ ಕಡಿಮೆಯಾಗುವ ಸಾಧ್ಯತೆ ಇದೆ.

ಕೋವಿಡ್ ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸೆಪ್ಟೆಂಬರ್‌ ನಿಂದಾಚೆಗೆ ವಿಸ್ತರಿಸುವ ಸಾಧ್ಯತೆ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News