2030ರ ವೇಳೆ ರಾಜ್ಯಾದ್ಯಂತ ಎಲೆಕ್ಟ್ರಿಕ್ ಬಸ್ ಸಂಚಾರ: ಸಚಿವ ಶ್ರೀರಾಮುಲು ಭರವಸೆ

Update: 2022-09-14 13:10 GMT

ಬೆಂಗಳೂರು, ಸೆ. 14: ‘ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಹಾಗೂ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ರಾಜ್ಯಾದ್ಯಂತ 2030ರ ವೇಳೆಗೆ ಎಲೆಕ್ಟ್ರಿಕ್ ಬಸ್‍ಗಳನ್ನು ಓಡಿಸಲು ರಾಜ್ಯ ಸರಕಾರ ಕ್ರಮ ವಹಿಸಲಿದೆ' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಸದನಕ್ಕೆ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಹಿರಿಯ ಸದಸ್ಯ ತನ್ವೀರ್ ಸೇಠ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದಲ್ಲಿ ಡೀಸಲ್ ಬೆಲೆ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ. ಆದುದರಿಂದ ನಾವು ಹೊಸತನಕ್ಕೆ ಹೊರಳುವುದು ಇಂದಿನ ಅನಿವಾರ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕಲ್ ಬಸ್‍ಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಓಡಿಸಲಾಗುವುದು' ಎಂದು ಹೇಳಿದರು.

‘ಬೆಂಗಳೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್ ಬಸ್‍ಗಳನ್ನು ಕೆಲ ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ. ಎಲೆಕ್ಟ್ರಿಕ್ ಬಸ್‍ಗಳು ಡೀಸೆಲ್ ವಾಹನಗಳಿಗಿಂತ ಮಿತವ್ಯಯ. ಆರಂಭದಲ್ಲಿ ಸಂಸ್ಥೆಗೆ ನಷ್ಟವಾದರೂ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳಿಂದ ಅನುಕೂಲ ಹಾಗೂ ಲಾಭದ ನಿರೀಕ್ಷೆ ಇದೆ. ಹೀಗಾಗಿ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನೇ ಓಡಿಸಲು ಉದ್ದೇಶಿಸಲಾಗಿದೆ' ಎಂದು ಶ್ರೀರಾಮುಲು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News