ವಿಪಕ್ಷಗಳ ಭಾರೀ ವಿರೋಧದ ಮಧ್ಯೆ ಮತಾಂತರ ನಿಷೇಧ ವಿಧೇಯಕಕ್ಕೆ ಪರಿಷತ್ತಿನಲ್ಲಿ ಅಂಗೀಕಾರ

Update: 2022-09-15 15:49 GMT

ಬೆಂಗಳೂರು, ಸೆ.15: ಆಮಿಷ, ಬಲವಂತ ಮತಾಂತರವನ್ನು ನಿಷೇಧಿಸುವ, ಮತಾಂತರ ಮಾಡುವವರನ್ನು ಜೈಲು ಶಿಕ್ಷೆಗೆ ಗುರಿಪಡಿಸುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2022’ಕ್ಕೆ ಕಾಂಗ್ರೆಸ್‍ನ ಹಾಗೂ ಜೆಡಿಎಸ್ ಸದಸ್ಯರ ವಿರೋಧದ ನಡುವೆಯೂ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆಯಿತು.

ಗುರುವಾರ ವಿಧಾನ ಪರಿಷತ್ತಿನ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದ ಕಾಂಗ್ರೆಸ್ ಸದಸ್ಯರು, ಸರಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ವಿಧೇಯಕ ಪ್ರತಿಯನ್ನು ಹರಿದು ಆಕ್ರೋಶ ಹೊರಹಾಕಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಸರಕಾರದ ಪರ ಘೋಷಣೆ ಕೂಗಿ ಅಬ್ಬರಿಸುತ್ತಿದ್ದ ನಡುವೆಯೇ ಧ್ವನಿಮತದ ಮೂಲಕ ವಿಧೇಯಕಕ್ಕೆ ಅನುಮೋದನೆ ಪಡೆಯಲಾಯಿತು.

ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ, ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರ ಸೂಚನೆಯಂತೆ ವಿಧೇಯಕ ಮಂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸರಕಾರ ಬಹಳ ಮಹತ್ವದ ಕಾಯ್ದೆಯನ್ನು ತಂದಿದೆ. ಸಂವಿಧಾನದ ವಿಧಿ-25ರ ಪ್ರಕಾರ ಎಲ್ಲರಿಗೂ ಅವರವರ ಧಾರ್ಮಿಕ ಹಕ್ಕಿನಲ್ಲಿ ಬದುಕುವ ಅವಕಾಶವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಲವಂತದಿಂದ, ಆಮಿಷದ ಮತಾಂತರ ನಡೆಯುತ್ತಿದೆ ಎಂದರು.

ನಮ್ಮ ಶಾಸಕರೇ ಕಳೆದ ಬಾರಿ ವಿಧಾನಸಭೆಯಲ್ಲಿ ಹೇಳಿಕೆ ನೀಡಿ ನನ್ನ ತಾಯಿಯನ್ನೆ ಮತಾಂತರ ಮಾಡಲಾಗಿದೆ ಎಂದು ಹೇಳಿದ್ದರು. ಇದನ್ನು ತಡೆಯಲು ಈ ಕಾಯ್ದೆಯನ್ನು ಮಂಡಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ವಿವರ ನೀಡಿದರು.

ಇಲ್ಲಿ ಯಾವುದೇ ಮತ ಬ್ಯಾಂಕ್ ರಾಜಕಾರಣ ಇಲ್ಲ. ಇದು ಜಾತ್ಯತೀತ ರಾಷ್ಟ್ರ, ಎಲ್ಲರನ್ನೂ ಒಪ್ಪುವ ಸಂಸ್ಕøತಿ ನಮ್ಮದು. ಬೇರೆ ರಾಷ್ಟ್ರದ ಧರ್ಮದವರೂ ಇಲ್ಲಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಆದರೆ, ಬೇರೆ ಧರ್ಮದವರು ವ್ಯವಸ್ಥಿತವಾಗಿ ಯಾವ ಕಾರ್ಯ, ಕೃತ್ಯ ನಡೆಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದರು.

ಈ ವಿಧೇಯಕದಲ್ಲಿ ಏನಿದೆ ಎನ್ನುವುದನ್ನು ನೋಡಬಹುದು. ಇದರಲ್ಲಿ ಯಾವ ಧರ್ಮ ಆಚರಿಸಲು ಬಾಧಕವಿಲ್ಲ. ಮತಾಂತರ ನಂತರ ಅವನು ತನ್ನ ಮೂಲ ಧರ್ಮದ ಸವಲತ್ತನ್ನು ಕಳೆದುಕೊಳ್ಳುತ್ತಾನೆ. ಇದು ನಮ್ಮ ಇಚ್ಛೆ ಮಾತ್ರವಲ್ಲ. ಇದನ್ನು ಸಿದ್ದರಾಮಯ್ಯ ಸರಕಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದ್ದರು. ಆದರೆ, ಕಾಯ್ದೆ ಜಾರಿಗೆ ಬಂದಿರಲಿಲ್ಲ. ಇದೀಗ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಇಲ್ಲಿಯೂ ಅಂಗೀಕಾರ ನೀಡಬೇಕೆಂದು ಅವರು ಮನವಿ ಮಾಡಿದರು.

ಈ ಬಗ್ಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಈ ವಿಧೇಯಕವನ್ನು ಸಿದ್ದರಾಮಯ್ಯ ಅವಧಿಯಲ್ಲೇ ರೂಪಿಸಲಾಗಿತ್ತು. ಅಂದಿನ ಕಾನೂನು ಸಚಿವರು ವಿಧೇಯಕ ಪರಿಶೀಲನೆ ನಡೆಸಿ, ಸಚಿವ ಸಂಪುಟದ ಮುಂದೆ ತರಲು ಹೊರಟಿದ್ದರು. ಮಂಡಿಸುವಂತೆ ಸಿದ್ದರಾಮಯ್ಯ ಅವರೇ ಸಹಿ ಮಾಡಿದ್ದರು. ಅದೇ ವಿಧೇಯಕವನ್ನು ನಾವು ಪರಿಷ್ಕರಿಸಿ ಮಂಡಿಸಿದ್ದೇವೆ ಎಂದು ಹೇಳಿದರು.

ಚರ್ಚೆಯಲ್ಲಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿಷಯ ಪ್ರಸ್ತಾಪಿಸಿ, ಸಂವಿಧಾನ ಮತ್ತು ನ್ಯಾಯಾಲಯದ ತೀರ್ಪಿನ ಅನುಸಾರ ವಿಧೇಯಕ ತಂದಿರುವುದು ಕಾನೂನುಬಾಹಿರ. ಸಂವಿಧಾನಕ್ಕೆ ತಿದ್ದುಪಡಿಯಾಗಬೇಕಾದರೆ ಸಂಸತ್ತಿನಲ್ಲಿ 3ನೆ 2ರಷ್ಟು ಸಂಖ್ಯಾಬಲ ಇರಬೇಕು. ಇಲ್ಲಿ ಸಂಖ್ಯಾಬಲವಿದೆ ಎನ್ನುವ ಕಾರಣಕ್ಕಾಗಿ ಮಸೂದೆ ಅಂಗೀಕಾರ ಪಡೆದುಕೊಳ್ಳುತ್ತಾರೆ. ನ್ಯಾಯಾಲಯ ಇದನ್ನು ಯಾವ ರೀತಿ ಪರಿಗಣಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದರು.

ಆನಂತರ, ಜೆಡಿಎಸ್ ಸದಸ್ಯರು ಸಹ ಪ್ರಸ್ತಾಪಿಸಿ ವಿಧೇಯಕವನ್ನು ವಿರೋಧಿಸಿದರು. ಆಡಳಿತ ಪಕ್ಷದ ಪರವಾಗಿ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಸದಸ್ಯರು ವಿಧೇಯಕ ಬೆಂಬಲಿಸಿ ಮಾತನಾಡಿದರು.

ಹೀಗೆ ಒಂದಿಡೀ ದಿನ ಕಾಯ್ದೆ ಪರ-ವಿರೋಧ ಚರ್ಚೆಯ ನಂತರ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರು ಧ್ವನಿ ಮತಕ್ಕೆ ಹಾಕಿ ವಿಧೇಯಕ ಅಂಗೀಕಾರ ಪಡೆದಿದೆ ಎಂದು ಪ್ರಕಟಿಸಿ, ಸದನವನ್ನು ನಾಳೆ(ಸೆ.16) ಬೆಳಗ್ಗೆ 10:30ಕ್ಕೆ ಮುಂದೂಡಿದರು. ಕಾಂಗ್ರೆಸ್ ಸದಸ್ಯರು ವಿಧೇಯಕ ಪ್ರತಿಯನ್ನು ಹರಿದು ಧರಣಿ ನಡೆಸಿ ಹೊರನಡೆದರು.

ಸುವರ್ಣಸೌಧದಲ್ಲಿ ಮಂಡನೆಯಾಗಿತ್ತು

2021ರ ಡಿಸೆಂಬರ್‍ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿತ್ತು. ವಿಧಾನಸಭೆಯ ಅಂಗೀಕಾರವೂ ದೊರಕಿತ್ತು. ಆದರೆ, ವಿಧಾನ ಪರಿಷತ್‍ನಲ್ಲಿ ಸದಸ್ಯ ಬಲದ ಕೊರತೆಯಿಂದ ಮಸೂದೆ ಮಂಡಿಸಿರಲಿಲ್ಲ. ಕಳೆದ ಮೇ ತಿಂಗಳಲ್ಲಿ ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಜಾರಿಗೊಳಿಸಲಾಗಿತ್ತು. ಇದೀಗ ಗುರುವಾರ ಪುನಃ ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News