‘ಮತಾಂತರ ನಿಷೇಧ’ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಸಿಯುವ ವಿಧೇಯಕ: ಪ್ರಿಯಾಂಕ್ ಖರ್ಗೆ

Update: 2022-09-16 16:04 GMT

ಬೆಂಗಳೂರು, ಸೆ.16: ಮತಾಂತರ ನಿಷೇಧ ವಿಧೇಯಕ ಸ್ವಾತಂತ್ರ್ಯ ನೀಡುವ ವಿಧೇಯಕವಲ್ಲ, ಬದಲಿಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಕಸಿಯುವ ವಿಧೇಯಕವಾಗಿದೆ. ಈ ಮಸೂದೆ ಅಸಂವಿಧಾನಿಕವಾಗಿದ್ದು, ಸಂವಿಧಾನದ ಪರಿಚ್ಛೇದ 25ರಿಂದ 28ರವರೆಗೂ ಧರ್ಮದ ಆಚರಣೆ ಮತ್ತು ಪ್ರಚಾರದ ಹಕ್ಕನ್ನು ಕಸಿಯುತ್ತದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಬಲವಂತದ ಮತಾಂತರದ ಪ್ರಕರಣ ಹೆಚ್ಚಾಗುತ್ತಿದೆ ಎಂದು ವಿಧೇಯಕದ ಆಶಯದಲ್ಲಿ ತಿಳಿಸಿದೆ. ಆದರೆ, ಅವರ ಬಳಿ ಬಲವಂತದ ಮತಾಂತರದ ಬಗ್ಗೆ ಅಂಕಿ ಅಂಶಗಳಿವೆಯೇ? ಕಳೆದ 3 ವರ್ಷಗಳಲ್ಲಿ ಎಷ್ಟು ಮತಾಂತರವಾಗಿದೆ ಎಂದು ಹೇಳಿದೆಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಸದನದಲ್ಲಿ ಚರ್ಚೆ ಮಾಡುವಾಗ ಬಿಜೆಪಿ ಶಾಸಕರು ಹೊಸದುರ್ಗದಲ್ಲಿ ತಮ್ಮ ತಾಯಿಗೆ ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಾಗಿದೆ ಎಂದು ಹೇಳಿದ್ದರು. ತಹಶೀಲ್ದಾರ್ ತನಿಖಾ ವರದಿಯಲ್ಲಿ ತಾಲೂಕಿನಲ್ಲಿ ಎಲ್ಲಿಯೂ ಬಲವಂತದ ಮತಾಂತರ ಆಗಿಲ್ಲ ಎಂದು ತಿಳಿಸಲಾಗಿತ್ತು. ಸರಕಾರ ಆ ತಹಶೀಲ್ದಾರ್ ಅನ್ನು ವರ್ಗಾವಣೆ ಮಾಡಿತು ಎಂದು ಅವರು ಹೇಳಿದರು.

ಈ ವಿಧೇಯಕದಲ್ಲಿ ತಪ್ಪು ನಿರೂಪಣೆ, ಬಲವಂತ, ವಂಚನೆ, ಮದುವೆ ವಾಗ್ದಾನದಿಂದ ಮಾಡುವ ಮತಾಂತರ ನಿಷೇಧ ಎಂದು ಹೇಳಲಾಗಿದೆ. ಗುಜರಾತ್‍ನಲ್ಲಿನ ವಿಧೇಯಕದಲ್ಲಿಯೂ ಇದೇ ಅಂಶಗಳನ್ನು ಹಾಕಲಾಗಿತ್ತು. ಅಂತರ್‍ಜಾತಿ ವಿವಾಹಕ್ಕೆ ಇದರಿಂದ ಅಡ್ಡಿಯಾಗಲಿದೆ ಎಂದು 2021ರಲ್ಲಿ ಆ ಅಂಶಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನಮ್ಮ ಕಾನೂನು ಸಚಿವರಿಗೆ ಇದರ ಮಾಹಿತಿ ಇಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಮತಾಂತರಗೊಂಡವರ ಬಗ್ಗೆ ರಕ್ತ ಸಂಬಂಧಿಗಳು ಮಾತ್ರವಲ್ಲ, ಮೂರನೇ ವ್ಯಕ್ತಿಯೂ ದೂರು ನೀಡಬಹುದು ಎಂದು ತಿಳಿಸಲಾಗಿದೆ. ಇದು ನೈತಿಕ ಪೊಲೀಸ್ ಗಿರಿಯಾಗಿದ್ದು, ಸಂವಿಧಾನದ ವಿರುದ್ಧವಾಗಿದೆ. ಯಾರಾದರೂ ಸ್ವಇಚ್ಛೆಯಿಂದ ಬೇರೆ ಧರ್ಮ ಪಾಲಿಸಬೇಕಾದರೆ, ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನೋಟಿಸ್ ನೀಡಿ ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ. ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕನ್ನು ಬಳಸಿಕೊಳ್ಳಲು ನಾವು ಸಚಿವಾಲಯ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಯಾಕೆ ಪಡೆಯಬೇಕು? ಎಂದು ಅವರು ಹೇಳಿದರು. 

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಭಿಪ್ರಾಯ: ‘ಈ ಕಾಯ್ದೆ ಸಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವಿದೆ. ಇದರ ದುರ್ಬಳಕೆಯಿಂದ ಜನರನ್ನು ಶೋಷಣೆ ಮಾಡುವ ಪ್ರಯತ್ನವಾಗಿದೆ’ ಎಂದು ನ್ಯಾ.ಎ.ಪಿ.ಶಾ ತಿಳಿಸಿದ್ದಾರೆ. ‘ಈ ಕಾಯ್ದೆಯಲ್ಲಿ ಸಂವಿಧಾನದ ಆಶಯ ಎತ್ತಿ ಹಿಡಿಯುವುದು ಅಸಾಧ್ಯ. ಈ ಕಾಯ್ದೆಯಲ್ಲಿ ಮತಾಂತರದ ಬಗ್ಗೆ ಮಾತ್ರ ಪ್ರಸ್ತಾಪ ಮಾಡಲಾಗಿದ್ದು, ಮರುಮತಾಂತರದ ಬಗ್ಗೆ ಮಾತನಾಡಿಲ್ಲ’ ಎಂದು ನ್ಯಾ.ಮದನ್ ಬಿ ಲೋಕೂರ್ ಹೇಳಿದ್ದಾರೆ. ‘ಈ ಮಸೂದೆ ಅಸಂವಿಧಾನಿಕವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಧಾರ್ಮಿಕ ಹಕ್ಕನ್ನು ಕಸಿಯುತ್ತಿದ್ದು, ಪ್ರತಿಯೊಬ್ಬರ ನಂಬಿಕೆ ವಿಚಾರದಲ್ಲಿ ಸರಕಾರ ಯಾಕೆ ಹಸ್ತಕ್ಷೇಪಕ್ಕೆ ಮುಂದಾಗಿದೆ?’ ಎಂದು ನ್ಯಾ.ದೀಪಕ್ ಗುಪ್ತಾ ಪ್ರಶ್ನಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಹಾದಿಯಾ ಪ್ರಕರಣದಲ್ಲಿ ಖಾಸಗಿಕರಣದ ಹಕ್ಕು ನೀಡಿದೆ. ನಮ್ಮ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಯಾಕೆ ಪ್ರಕಟಿಸಬೇಕು? ನಿನ್ನೆ ಕಾನೂನು ಸಚಿವರು ನಾವು ಕತ್ತೆ ಕಾಯುತ್ತಿದ್ದೇವಾ ಎಂದು ಕೇಳಿದರು. ನನ್ನ ಪ್ರಕಾರ ಅವರು ನಿಜಕ್ಕೂ ಕತ್ತೆಯನ್ನೇ ಕಾಯುತ್ತಿದ್ದಾರೆ. ಇಲ್ಲವಾಗಿದ್ದರೆ ಇದೆಲ್ಲ ಯಾಕೆ ಆಗುತ್ತಿತ್ತು. ಆನ್ ಲೈನ್ ಬೆಟ್ಟಿಂಗ್ ಕಾಯ್ದೆ ತಂದ ನಂತರ ಅದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಹೌದು, ನೀವು ಕತ್ತೆ ಕಾಯುತ್ತಿದ್ದೀರಿ ಎಂದು ಅವರು ತಿರುಗೇಟು ನೀಡಿದರು.

ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಹಾದಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಆಗಿಲ್ಲ ಎಂದು ಸರಕಾರ ಸ್ಪಷ್ಟನೆ ನೀಡಲಿ. ನಿಮ್ಮ ಬಳಿ ಬಲವಂತದ ಮತಾಂತರದ ದಾಖಲೆಗಳೇ ಇಲ್ಲ. ಕೇವಲ ಕೇಶವಕೃಪಾದ ಮನವೊಲಿಸಲು ಈ ಮಸೂದೆ ತಂದಿದ್ದಾರೆ. ಈ ಕಾನೂನಿನ ಮಾನ್ಯತೆಯನ್ನು ನಾವು ಪ್ರಶ್ನಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News