ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ಪತ್ತೆ ಹಚ್ಚಲು ವಿಚಾರಣಾ ಆಯೋಗ ರಚನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-09-19 18:19 GMT

ಬೆಂಗಳೂರು, ಸೆ.19: ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ, ಕೆರೆಗಳು, ರಾಜಕಾಲುವೆ, ಬಫರ್ ಝೋನ್‍ನಲ್ಲಿ ಅಕ್ರಮ ನಿರ್ಮಾಣ ಮಾಡಿರುವುದನ್ನು ಪತ್ತೆ ಹಚ್ಚಲು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಒತ್ತುವರಿಗಳು ಆಗದಂತೆ ತಡೆಯಲು ಓರ್ವ ನ್ಯಾಯಾಂಗ ಅಧಿಕಾರಿಯ ನೇತೃತ್ವದಲ್ಲಿ ತಾಂತ್ರಿಕ ತಜ್ಞರನ್ನೊಳಗೊಂಡ ವಿಚಾರಣಾ ಆಯೋಗವನ್ನು ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ರಾಜ್ಯದಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಗೆ ಸರಕಾರದ ಪರವಾಗಿ ಉತ್ತರಿಸಿದ ಅವರು, ಬೆಂಗಳೂರಿನ ರಾಜಕಾಲುವೆಗಳಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಮಳೆನೀರು ಕಾಲುವೆಗಳ ಅಭಿವೃದ್ಧಿಯನ್ನು ಮಳೆನೀರು ಕಾಲುವೆ ವಿಭಾಗ ಕೈಗೆತ್ತಿಕೊಳ್ಳಲಿದ್ದು, ತೃತೀಯ ಹಂತದ ಕಾಲುವೆಗಳ ನಿರ್ಮಾಣವನ್ನು ಆಯಾ ವಲಯ ಅಭಿಯಂತರರು ನಿರ್ವಹಿಸಲಿದ್ದಾರೆ. ಈ ರಾಜಕಾಲುವೆಗಳ ಅಭಿವೃದ್ಧಿ ಕುರಿತು ಒಟ್ಟಾರೆ ನಿರ್ಣಯ ಕೈಗೊಳ್ಳಲು ಹಾಗೂ ಮೇಲುಸ್ತುವಾರಿಗೆ ಒಂದು ಪರಿಣತರನ್ನೊಳಗೊಂಡ ಒಂದು ಕಾರ್ಯಪಡೆಯನ್ನು ರಚಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಸುರಿದಿರುವ ಈ ಮಳೆ ನಮ್ಮ ಕಣ್ಣು ತೆರೆಸಿದೆ. ಎಲ್ಲೆಲ್ಲಿ ಸಮಸ್ಯೆಯಾಗಿದೆ ಅದನ್ನು ಸರಿಪಡಿಸುತ್ತೇವೆ. ಹಳೆ ರಾಜಕಾಲುವೆಗಳನ್ನು ಒಪ್ಪಿಕೊಂಡು ಹೋದರೆ ಬೇರೆ ರೀತಿಯ ಸಮಸ್ಯೆ ಎದುರಾಗುತ್ತದೆ. ಸಾಧ್ಯವಿರುವೆಡೆ ರಾಜಕಾಲುವೆಗಳನ್ನು ವಿಸ್ತರಿಸಲಾಗುವುದು. ಹೊರ ವಲಯದಲ್ಲಿ ಹೊಸ ವ್ಯವಸ್ಥೆ ಮಾಡಬೇಕು. ಬಿಬಿಎಂಪಿ, ಬಿಡಿಎ, ಬಿಎಂಆರ್‍ಡಿಎ ಸೇರಿ ಮಾಸ್ಟರ್ ಪ್ಲಾನ್ ಮಾಡಬೇಕು ಎಂದು ಅವರು ಹೇಳಿದರು. 

ಖಾಸಗಿ ಸಂಸ್ಥೆಯೊಂದು 824 ಕಿ.ಮೀ. ಸರ್ವೆ ಮಾಡಿ, ವಸ್ತುಸ್ಥಿತಿ ಏನು ಅನ್ನೋದು ಹೇಳಿದ್ದಾರೆ. ಐಐಎಸ್ಸಿಯವರು ಅಧ್ಯಯನ ಮಾಡಿ ವರದಿ ನೀಡಿದ್ದಾರೆ. ಸಮಗ್ರ ಮಾಸ್ಟರ್ ಪ್ಲಾನ್ ಮಾಡಿ, ಅನುಷ್ಠಾನ ಮಾಡಲು 4-5 ವರ್ಷ ಬೇಕು. ಮೊದಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿಕ್ರಮ ತೆಗೆಯುತ್ತೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2,626 ಒತ್ತುವರಿ ಗುರುತಿಸಲಾಗಿದೆ. 2016 ರವರೆಗೆ 428 ಒತ್ತುವರಿ ತೆರವು ಮಾಡಲಾಗಿದೆ. 2018 ಬಳಿಕ 1,502 ಒತ್ತುವರಿ ತೆಗೆದಿದ್ದೇವೆ. ಇನ್ನೂ 602 ಒತ್ತುವರಿ ತೆರವಿಗೆ ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರಿನ ಎಲ್ಲ ಕೆರೆಗಳಿಗೆ ಸ್ಲೂಯಿಸ್ ಗೇಟ್‍ಗಳನ್ನು ಹಾಕುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶ ನೀಡಿದ್ದೇನೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಅಲ್ಲದೆ, ಈಗಿರುವ ಘಟಕಗಳ ಸಾಮಥ್ರ್ಯ ಹೆಚ್ಚಿಸುವಂತೆ ತಿಳಿಸಲಾಗಿದೆ. 400 ಕಿ.ಮೀ ರಾಜಕಾಲುವೆ ಮಾಡಬೇಕಿದೆ. ಈಗಾಗಲೆ 1,600 ಕೋಟಿ ರೂ.ಗಳ ಟೆಂಡರ್ ಆಗಿದೆ. ಮಳೆ ನಿಂತ ನಂತರ ಕೆಲಸ ಪ್ರಾರಂಭವಾಗುತ್ತದೆ. ಮಹದೇವಪುರ, ಬೊಮ್ಮನಹಳ್ಳಿಯಲ್ಲಿ ಆಗಿರುವ ಅನಾಹುತ ನೋಡಿ 300 ಕೋಟಿ ರೂ.ಹೆಚ್ಚುವರಿ ಅನುದಾನ ಒದಗಿಸಿದ್ದೇನೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರ ಫಲಶ್ರುತಿಯಾಗಿ ಅಂತರ್‍ಜಲ ಮಟ್ಟ ಹೆಚ್ಚಾಗಿದೆ. ರಾಜ್ಯದ ಇತಿಹಾಸದಲ್ಲೆ ಶೇ.80ಕ್ಕಿಂತ ಹೆಚ್ಚು ಕೆರೆಗಳು ತಂಬಿವೆ. ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಕೆರೆಗಳು ತುಂಬಿ ಕೋಡಿ ಹರಿದಿದೆ. ಅಲ್ಪಸಮಯದಲ್ಲಿ ಹೆಚ್ಚು ಮಳೆ, ನಿರಂತರವಾಗಿ ಮಳೆಯಿಂದ ಕೆರೆಗಳು ತುಂಬಿವೆ. ಬೆಂಗಳೂರು ದೇಶದ ಪ್ರಮುಖ ನಗರ. 1.20 ಕೋಟಿ ವಾಹನಗಳು ಇವೆ. ಐದಾರು ವರ್ಷಗಳಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಬಹುದು. ಆದರೆ, ಮೂಲಸೌಕರ್ಯಗಳ ಪ್ರಮಾಣ ಹಾಗೆ ಇದೆ. ಇದರ ಪರಿಣಾಮವಾಗಿ ರಸ್ತೆಗಳು, ಯುಜಿಡಿ, ಕುಡಿಯುವ ನೀರಿನ ಬಳಕೆ ಮೇಲೆ ಒತ್ತಡ ಹೆಚ್ಚುತ್ತಿದೆ. ಅತಿ ಹೆಚ್ಚು ಮಳೆ ಬಂದಾಗ ವಾಸ್ತವ ಪರಿಸ್ಥಿತಿ ಕಂಡು ಬಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರಿನ ಬೆಳವಣಿಗೆ, ಅವಶ್ಯಕತೆಗಳ ಬಗ್ಗೆ ವೈಜ್ಞಾನಿಕ ಪರಿಹಾರ ಆಗಬೇಕು. ತಪ್ಪುಗಳು ಆಗಿವೆ. ನಿಸರ್ಗ ಹಾಗೂ ಜನರ ಒತ್ತಡದ ಜೊತೆಗೆ ಅವೈಜ್ಞಾನಿಕವಾಗಿ ಬೆಂಗಳೂರು ಬೆಳೆಸಿದ್ದೇವೆ. ಮೂಲ ಬೆಂಗಳೂರು ಒಂದು ಚೌಕಟ್ಟಿನಲ್ಲಿದೆ. ಹೊಸದಾಗಿ ಬೆಂಗಳೂರಿಗೆ ಸೇರಿಸಿರುವ ಪ್ರದೇಶಗಳನ್ನು ತೆಗೆದುಕೊಂಡಾಗ ಸಮರ್ಪಕವಾಗಿ ಕೆರೆ ನೀರು ಹರಿಯುವ ವ್ಯವಸ್ಥೆ ಇಲ್ಲದೆ, ರಾಜಕಾಲುವೆಗಳಿಲ್ಲದೆ ಜನವಸತಿಗಳಿಗೆ ನೀರು ನುಗ್ಗಿದೆ ಎಂದು ಅವರು ಹೇಳಿದರು.

ಅತಿ ಹೆಚ್ಚು ಮಳೆ ಒಂದೆಡೆಯಾದರೆ, ಜನಸಂಖ್ಯೆ ಹೆಚ್ಚುತ್ತಿರುವುದರಿಂದ ತ್ಯಾಜ್ಯ ನೀರಿನ ಉತ್ಪಾದನೆಯೂ ಹೆಚ್ಚಾಗಿದೆ. ನಾವು ಅದನ್ನು ಪರಿಷ್ಕರಣೆ ಮಾಡದೆ ಹಾಗೆ ಬಿಡುವಂತಾಗಿದೆ. ಕೆರೆಗಳಿಗೆ ಮಳೆ ನೀರು ಅಷ್ಟೇ ಬಂದರೆ ಸಮಸ್ಯೆ ಇಲ್ಲ. ತ್ಯಾಜ್ಯ ನೀರು ಸೇರುವುದು, ಹೂಳು ತುಂಬಿಕೊಳ್ಳುವುದರಿಂದ ನೀರು ಹೊರಗೆ ಬರುತ್ತಿದೆ. ಬೆಂಗಳೂರು ಪಾಲಿಕೆ ವ್ಯಾಪ್ತಿಗೆ 7 ನಗರ ಸಭೆ, 2 ಟಿಎಂಸಿ ಹಾಗೂ 110 ಹಳ್ಳಿಗಳನ್ನು ಸೇರ್ಪಡೆ ಮಾಡುವಾಗ ಮಾಸ್ಟರ್ ಪ್ಲಾನ್ ಇರಲಿಲ್ಲ. ಎನ್‍ಜಿಟಿ ಆದೇಶದ ನಂತರ ನಾವು ಬಫರ್ ಝೋನ್‍ನಲ್ಲಿ ಹಲವು ಪ್ರದೇಶಗಳನ್ನು ಕಾಣುತ್ತಿದ್ದೇವೆ. ಆದುದರಿಂದ, ಎನ್‍ಜಿಟಿ ಆದೇಶದ ಮುನ್ನ ಹಾಗೂ ನಂತರ ಎಂದು ನಾವು ಪರಿಗಣಿಸಬೇಕಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರಿಗೆ ಐಟಿ, ಬಿಟಿ ಕಂಪೆನಿಯವರು ಹೆಸರು ತಂದು ಕೊಟ್ಟಿದ್ದಾರೆ. ಅವರು ಸ್ವಂತ ಕಟ್ಟಡಗಳಲ್ಲಿ ಇರುವುದು ಕಡಿಮೆ. ಆದರೆ, ಬಿಲ್ಡರುಗಳು ರಾಜಕಾಲುವೆ ಮುಚ್ಚಿ ಐಟಿ ಪಾರ್ಕ್ ಕಟ್ಟಿದ್ದಾರೆ. ಇದನ್ನೆಲ್ಲ ಸರಿಪಡಿಸುತ್ತೇವೆ. ಯಾವುದೇ ಕಾರಣಕ್ಕೂ ರಾಜಿಗೊಳಗಾಗುವುದಿಲ್ಲ. ಬೆಂಗಳೂರು ಐಟಿ ಬಿಟಿ ಸಂಸ್ಥೆಯವರಿಗೂ ಪ್ರಮುಖವಾಗಿದೆ. ಉತ್ತಮ ವಾತಾವರಣ, ತಂತ್ರಜ್ಞಾನ ಮಾನವ ಸಂಪನ್ಮೂಲ ಇಲ್ಲಿದೆ. ರಾಜ್ಯದ ಜನರ ಹಾಗೂ ರಾಜ್ಯದ ಕೊಡುಗೆಯೂ ಅವರಿಗೆ ಅಪಾರವಾಗಿದೆ. ಆದುದರಿಂದ, ಯಾವ ಸಂಸ್ಥೆಯವರು ಬೆಂಗಳೂರು ಬಿಟ್ಟು ಹೋಗುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ನೆರೆ ಸಂದರ್ಭದಲ್ಲಿ ಸರಕಾರ ಜನರ ಸಂಕಷ್ಟಕ್ಕೆ ಧಾವಿಸಿದೆ. ಮನೆ ಹಾಗೂ ಬೆಳೆಗಳನ್ನು ಕಳೆದುಕೊಂಡಿರುವವರಿಗೆ ತಕ್ಷಣ ಪರಿಹಾರ ನೀಡಿದ್ದೇವೆ. ಅಂದಾಜು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸುಮಾರು 1,550 ಕೋಟಿ ರೂ.ಬೆಳೆ ನಷ್ಟ ಪರಿಹಾರ ಅಂದಾಜಿಸಲಾಗಿದೆ. ನಿನ್ನೆ ವರೆಗೆ 3,25,766 ರೈತರಿಗೆ ಈಗಾಗಲೇ 377.44 ಕೋಟಿ ಹಣ ಪಾವತಿಯಾಗಿದೆ. ನೆರೆಗೆ 42,048 ಮನೆ ಹಾಳಾಗಿವೆ. ಆ ಮೂಲಕ ನೆರೆಗೆ 850 ಕೋಟಿ ರೂ. ಮನೆ ನಷ್ಟ ಆಗಿದೆ. ಈ ಪೈಕಿ ನಾವು ಮೊದಲ ಕಂತಿನಲ್ಲಿ 196 ಕೋಟಿ ರೂ.ಬಿಡುಗಡೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

2019 ರಿಂದ 2021ರವರೆಗೆ ಮೂರು ವರ್ಷಗಳಲ್ಲಿ 3,104.74 ಕೋಟಿ ರೂ.ಬಿಡುಗಡೆ ಮಾಡಿದ್ದೇವೆ. 1,527 ಕೋಟಿ ರೂ. ಇನ್ನೂ ಬೇಕಾಗಿದೆ. ಅವುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ಎನ್‍ಡಿಆರ್‍ಎಫ್ ಅಡಿ 1,645 ಕೋಟಿ ರೂ.ನಷ್ಟ ಪರಿಹಾರದ ಬೇಡಿಕೆ ಇಟ್ಟಿದ್ದೇವೆ. ತಕ್ಷಣಕ್ಕೆ ನಮಗೆ 1,550 ಕೋಟಿ ರೂ. ಬೆಳೆ ನಷ್ಟದ ಪರಿಹಾರ ಬೇಕಾಗಿದೆ. ಮನೆ ಹಾನಿಗೆ 850 ಕೋಟಿ ರೂ., ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಲಾಗುವುದು. ಜೊತೆಗೆ, ಎನ್.ಡಿ.ಆರ್.ಎಫ್ ನಿಯಮಗಳನ್ನು ಪರಿಷ್ಕರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಭಟ್ಕಳದಲ್ಲಿ ಗುಡ್ಡ ಕುಸಿತ ಪ್ರಕರಣ ಸಂಭವಿಸಿದೆ. ಪ್ರವಾಹದಿಂದಾಗಿ ಪ್ರಾಣ ಹಾಗೂ ನಿಸರ್ಗಕ್ಕೂ ಹಾನಿಯಾಗುತ್ತದೆ. ಭೂ ಕುಸಿತ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ನಿರಂತರ ಮಳೆಯಿಂದ ಉಂಟಾಗುವ ಕಡಲಕೊರೆತ ತಡೆಯಲು ಉಳ್ಳಾಲದಲ್ಲಿ ಪ್ರಾಯೋಗಿಕವಾದ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ. ಅಲ್ಲಿ ಯಶಸ್ವಿಯಾದರೆ ದೊಡ್ಡ ಪ್ರಮಾಣದಲ್ಲಿ ಅದನ್ನು ವಿಸ್ತರಿಸಲಾಗುವುದು.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News