ಒಟಿಟಿ ವೇದಿಕೆಗಳನ್ನು ದೂರಸಂಪರ್ಕ ಸೇವೆಗಳ ಅಡಿಯಲ್ಲಿ ತರುವ ಮೂಲಕ ನಿಯಂತ್ರಿಸಲು ಕೇಂದ್ರದಿಂದ ವಿಧೇಯಕ

Update: 2022-09-22 17:10 GMT

ಹೊಸದಿಲ್ಲಿ, ಸೆ. 22: ಒಟಿಟಿ, ವ್ಯಾಟ್ಸ್ ಆ್ಯಪ್, ಸಿಗ್ನಲ್, ಫೇಸ್‌ಟೈಮ್ ಹಾಗೂ ಗೂಗಲ್ ಮೀಟ್‌ನಂತಹ ವೇದಿಕೆಗಳು ನೀಡುವ ಧ್ವನಿ, ವೀಡಿಯೊ ಹಾಗೂ ಡಾಟಾ ಸೇವೆಗಳನ್ನು ನಿಯತ್ರಿಸಲು ಇವುಗಳನ್ನು ದೂರ ಸಂಪರ್ಕ  ಸೇವೆಯಲ್ಲಿ ಅಡಿಯಲ್ಲಿ ತರಲು ಕೇಂದ್ರ ಸರಕಾರ ಕರಡು ವಿಧೇಯಕವನ್ನು ಬಿಡುಗಡೆಗೊಳಿಸಿದೆ.

ದೂರಸಂಪರ್ಕ ಇಲಾಖೆ ಈ ಕರಡು ಮಸೂದೆಯನ್ನು ಬುಧವಾರ ಬಿಡುಗಡೆಗೊಳಿಸಿದೆ. ಈ ಮೂಲಕ ಭಾರತದ ದೂರ ಸಂಪರ್ಕ ವಲಯವನ್ನು ನಿರ್ವಹಿಸಲು ಅಸ್ತಿತ್ವದಲ್ಲಿರುವ ಹಾಲಿ ಕಾನೂನು ಚೌಕಟ್ಟಗಳನ್ನು ಬದಲಾಯಿಸಲು ಸರಕಾರ ಬಯಸಿದೆ. ಈ ವಿಧೇಯಕದ ಮೂಲಕ ಸರಕಾರ ಭಾರತೀಯ ಟೆಲಿಗ್ರಾಫ್ ಆ್ಯಕ್ಟ್-1885, ವಯರ್‌ಲೆಸ್ ಟೆಲಿಗ್ರಾಫಿ ಆ್ಯಕ್ಟ್-1933 ಹಾಗೂ ಟೆಲಿಗ್ರಾಫ್ ವೈರ್ಸ್‌ (ಕಾನೂನು ಬಾಹಿರ ಸ್ವಾಧೀನ) ಕಾಯ್ದೆ-1950ನ್ನು ಸಂಯೋಜಿಸಲು ಬಯಸಿದೆ.

ಕೆಲವು ಒಟಿಟಿ ವೇದಿಕೆಗಳು ನೀಡುವ ಧ್ವನಿ ಕರೆ ಆಯ್ಕೆಯು ತಮ್ಮ ಸೇವೆಗಳಿಗೆ ಸಂಪೂರ್ಣ ಪರ್ಯಾಯವಾಗಿರುವುದರಿಂದ ನೂತನ ಕಾನೂನು ಚೌಕಟ್ಟು ತರುವಂತೆ ಹಲವು ಸಂದರ್ಭ ಬಾರಿ ದೂರ ಸಂಪರ್ಕ ನಿರ್ವಾಹಕರು ಸರಕಾರವನ್ನು ಕೋರಿದ್ದವು.

ಒಟಟಿ ಸೇವೆಗಳ ಪ್ರಸರಣದದಿಂದ ಆದಾಯದಲ್ಲಿ ನಷ್ಟ ಉಂಟಾಗುತ್ತಿರುವುದನ್ನು ಪ್ರಮುಖ ದೂರ ಸಂಪರ್ಕ ಉದ್ಯಮಗಳು   ಉಲ್ಲೇಖಿಸಿದ್ದವು ಹಾಗೂ ಇಬ್ಬರಿಗೂ ನ್ಯಾಯ ಸಮ್ಮತವಾದ ಕ್ರಮವೊಂದನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದವು. ಸೇವೆ ನೀಡಲು ಟೆಲಿಕಾಂ ಕಂಪೆನಿಗಳಿಗೆ ಪರವಾನಿಗೆ ಅಗತ್ಯವಾಗಿರುವಂತೆ ಒಟಿಟಿ ವೇದಿಕೆಗಳಿಗೆ ಪರವಾನಿಗೆಯ ಅಗತ್ಯ ಇಲ್ಲ.

 ಒಂದು ವೇಳೆ ಅದು ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದ್ದರೆ ಪರವಾನಿಗೆ, ನೋಂದಣಿ ಹಾಗೂ ಅಧಿಕಾರ ಪಡೆಯುವ ಅವಶ್ಯಕತೆಯಿಂದ ಈ ಸಂಸ್ಥೆಗಳಿಗೆ ವಿನಾಯತಿ ನೀಡಬಹುದು ಎಂದು ಸರಕಾರ ಕರಡು ವಿಧೇಯಕದಲ್ಲಿ ಹೇಳಿದೆ.

ವ್ಯಾಟ್ಸ್ ಆ್ಯಪ್ ಮತ್ತು ಸಿಗ್ನಲ್‌ನಂತಹ ಸೇವೆಗಳು ರಹಸ್ಯವಾಗಿರುವುದರಿಂದ ವಿಧೇಯಕ ಜಾರಿಗೆ ಬಂದರೆ ಒಟಿಟಿ ಹಾಗೂ ಇಂಟರ್‌ನೆಟ್ ಆಧಾರಿತ ಸಂವಹನಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News