ಎಸೆಸೆಲ್ಸಿ-ಪಿಯು ಪರೀಕ್ಷಾ ಮಂಡಳಿ ವಿಲೀನ ವಿಧೇಯಕ ಅಂಗೀಕಾರ

Update: 2022-09-22 17:11 GMT

ಬೆಂಗಳೂರು, ಸೆ.22: ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸುವುದಕ್ಕೆ ಸಂಬಂಧಿಸಿದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕ-2022 ಅನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಪಿಯು ಪರೀಕ್ಷಾ ಮಂಡಳಿ ನಿರ್ದೇಶಕರು ಪರೀಕ್ಷೆಗಳ ಜೊತೆಗೆ ಆಡಳಿತ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಕಷ್ಟಕರವಾಗಿದೆ. ಅಲ್ಲದೆ, ಹೊಸ ಶಿಕ್ಷಣ ನೀತಿಯನ್ನು ಗಮನದಲ್ಲಿಟ್ಟುಕೊಂಡು ಎಸೆಸೆಲ್ಸಿ ಪರೀಕ್ಷಾ ಮಂಡಳಿ ಮತ್ತು ಪಿಯು ಪರೀಕ್ಷಾ ಮಂಡಳಿಯನ್ನು ಒಗ್ಗೂಡಿಸಿ ‘ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ’ ಎಂದು ಮಾಡಲಾಗಿದೆ. ಮಂಡಳಿಗೆ ಒಬ್ಬರು ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ವಿಧೇಯಕದ ಉದ್ದೇಶದ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲಿ ವಿವರಿಸಿದರು.

ದೇಶದ ಕೆಲವು ರಾಜ್ಯಗಳಲ್ಲಿ 10ನೆ ತರಗತಿ ನಂತರ, ಪಿಯು ತರಗತಿಗಳು ಇಲ್ಲ. 11 ಮತ್ತು 12ನೇ ತರಗತಿ ಎಂದೆ ಇದೆ. ನಮ್ಮ ರಾಜ್ಯದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪ್ರತ್ಯೇಕವಾಗಿದೆ. ಈ ವಿಧೇಯಕದ ಮೂಲಕ ಎರಡನ್ನು ವಿಲೀನಗೊಳಿಸಲಾಗುತ್ತಿದೆ. ಹೊಸ ಶಿಕ್ಷಣ ನೀತಿಯಲ್ಲಿ ನಾಲ್ಕು ಹಂತಗಳಲ್ಲಿ ಶಿಕ್ಷಣ ವಿಭಾಗಗಳನ್ನು ವಿಂಗಡಿಸಲಾಗಿದೆ. ಎಲ್‍ಕೆಜಿಯಿಂದ ಎರಡನೇ ತರಗತಿ, ಮೂರನೇ ತರಗತಿಯಿಂದ ಐದನೇ ತರಗತಿ, ಆರನೇ ತರಗತಿಯಿಂದ ಎಂಟನೇ ತರಗತಿ ಮತ್ತು ಒಂಭತ್ತನೇ ತರಗತಿಯಿಂದ 12ನೇ ತರಗತಿಯವರೆಗೆ ಎಂದು ಅವರು ಹೇಳಿದರು. 

ಎಸೆಸೆಲ್ಸಿ ಹಾಗೂ ಪಿಯು ಪರೀಕ್ಷಾ ಮಂಡಳಿಗಳನ್ನು ವಿಲೀನಗೊಳಿಸಿದರೂ ಎಸೆಸೆಲ್ಸಿ ಹಾಗೂ ಪಿಯುಸಿಗೆ ಈಗಿರುವ ರೀತಿಯಲ್ಲೆ ಪ್ರತ್ಯೇಕವಾದ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ವಿಚಾರದಲ್ಲಿ ಯಾವುದೆ ಗೊಂದಲಗಳು ಇಲ್ಲ ಎಂದು ನಾಗೇಶ್ ಹೇಳಿದರು.

ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕಕ್ಕೆ ಅನುಮೋದನೆ: ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸಲು, ಪರಸ್ಪರ ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ತರಲಾಗಿರುವ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ)ವಿಧೇಯಕ 2022 ಅನ್ನು ಗುರುವಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ವಿಧೇಯಕದ ಪ್ರಕಾರ ಶಿಕ್ಷಕರು ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗಕ್ಕೆ ವರ್ಗಾವಣೆ ತೆಗೆದುಕೊಳ್ಳಬಹುದೇ ಹೊರತು, ಅಲ್ಲಿಂದ ಬೇರೆಡೆಗೆ ಹೋಗಲು ಅವಕಾಶವಿಲ್ಲ.

ಪತಿ ಪತ್ನಿ ಮತ್ತು ಪರಸ್ಪರ ಶಿಕ್ಷಕರ ವರ್ಗಾವಣೆಗೆ ಅವಕಾಶ: ಶಿಕ್ಷಕರಾಗಿರುವ ಪತಿ, ಪತ್ನಿ ಇಬ್ಬರೂ ಐದು ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿದ ಷರತ್ತಿಗೊಳಪಟ್ಟು ಸೇವೆಯಲ್ಲಿ ಒಂದಕ್ಕಿಂತ ಹೆಚ್ಚುಬಾರಿ ಜೇಷ್ಠತಾ ಘಟಕದಿಂದ ಹೊರಗೆ ಪರಸ್ಪರ ವರ್ಗಾವಣೆಗೆ ಅನುಮತಿಸಲು ಈ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಮೊದಲು ಈ ನಿಯಮವು ಏಳು ವರ್ಷ ಸೇವೆ ಸಲ್ಲಿಸಿದವರಿಗೆ ಇತ್ತು. ಇದನ್ನು ಸಡಿಲಿಕೆ ಮಾಡಿ ಐದು ವರ್ಷ ಮಾಡಲಾಗಿದೆ. ಇನ್ನು, ಸಾಮಾನ್ಯ ವರ್ಗಾವಣೆಯಲ್ಲಿ ಪತಿ ಪತ್ನಿಯರ ವರ್ಗಾವಣೆಯು ಒಂದೇ ತಾಲೂಕಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News