ಕಲಬುರಗಿ | ಗಾಂಜಾ ಬೆಳೆಯುತ್ತಿದ್ದ ಜಾಲ ಪತ್ತೆಗೆ ತೆರಳಿದ್ದ ಪೊಲೀಸರಿಗೆ ಹಲ್ಲೆ: ಕಮಲಾಪುರ ಸಿಪಿಐಗೆ ಗಂಭೀರ ಗಾಯ

Update: 2022-09-24 05:55 GMT

ಕಲಬುರಗಿ, ಸೆ.24: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೆ ಸುಮಾರು 40 ಮಂದಿ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ಬಸವ ಕಲ್ಯಾಣ ತಾಲೂಕಿನ ಹೊನ್ನಾಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಮಲಾಪುರ ತಾಲೂಕಿನ ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕಲಬುರಗಿಯ ನವೀನ ಎಂಬಾತನನ್ನು ಗುರುವಾರ ಪೊಲೀಸರು ಬಂಧಿಸಿದ್ದರು. ಶುಕ್ರವಾರ ಬಸವ ಕಲ್ಯಾಣ ತಾಲೂಕಿನ ಭೋಸಗಾದ ಸಂತೋಷ ಎಂಬಾತನನ್ನೂ ಗಾಂಜಾ ಪ್ರಕರಣದಲ್ಲಿ ಬಂಧಿಸಿದ್ದರು. ಅವರಿಬ್ಬರನ್ನು ವಿಚಾರಣೆ ನಡೆಸಿದಾಗ ಮಹಾರಾಷ್ಟ್ರ ಗಡಿಯ ಹೊನ್ನಾಳಿ ಸಮೀಪದ ಜಮೀನೊಂದರಲ್ಲಿ ಗಾಂಜಾ ಬೆಳೆದಿರುವುದಾಗಿ ಬಾಯಿಬಿಟ್ಟಿದ್ದರೆ. ಈ ಮಾಹಿತಿಯನ್ನು ಆಧರಿಸಿ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ ಮಹಾಗಾಂವ ಪಿಎಸ್ಸೈ ಆಶಾ ರಾಠೋಡ್ ಸೇರಿದಂತೆ 10 ಮಂದಿಯ ತಂಡ ಶುಕ್ರವಾರ ರಾತ್ರಿ ಕಾರ್ಯಾಚರಣೆಗೆ ತೆರಳಿತ್ತು. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಅಲ್ಲಿನ ಪೊಲೀಸರ ಸಹಕಾರ ಕೋರಲಾಗಿತ್ತು. ಈ ನಡುವೆ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಗಾಂಜಾ ಗಿಡಗಳು ಬೆಳೆದಿದ್ದು ಕಂಡು ಬಂದಿತ್ತು. ಆದರೆ ಕಾರ್ಯಾಚರಣೆ ನಡೆಸಲು ಮಹಾರಾಷ್ಟ್ರ ಪೊಲೀಸರು ಬರುವಿಕೆಗಾಗಿ ಕಾಯುತ್ತಿದ್ದರು. ಅಷ್ಟರಲ್ಲಿ 40ರಷ್ಟಿದ್ದ ದುಷ್ಕರ್ಮಿಗಳ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ಬಡಿಗೆ, ಕಲ್ಲುಗಳಿಂದ ನಡೆಸಿದ ಹಲ್ಲೆಯಿಂದ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರಾವಸ್ಥೆಯಲ್ಲಿರುವ ಸಿಪಿಐ ಶ್ರೀಮಂತ ಇಲ್ಲಾಳ ಅವರಿಗೆ ಬಸವ ಕಲ್ಯಾಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತಡರಾತ್ರಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ನಮ್ಮ ರಾಷ್ಟ್ರೀಯತೆಯಿಂದ ಯಾರಿಗೂ ಅಪಾಯ ಇಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News