ಮಧುರೈ ಏಮ್ಸ್ ಕಾಮಗಾರಿ ಶೇ.95ರಷ್ಟು ಪೂರ್ಣ ಎಂದ ನಡ್ಡಾ; ಸ್ಥಳಕ್ಕೆ ತೆರಳಿ ಕಟ್ಟಡ ಕಳವಾಗಿದೆ ಎಂದ ಕಾಂಗ್ರೆಸ್ ಸಂಸದ

Update: 2022-09-24 07:21 GMT
Twitter/@manickamtagore

ಹೊಸದಿಲ್ಲಿ: ಮಧುರೈಯಲ್ಲಿ ನಿರ್ಮಿಸಲಾಗುತ್ತಿರುವ ಏಮ್ಸ್(AIIMS) ಯೋಜನೆ ಕಾಮಗಾರಿಯ ಪ್ರಗತಿಯ ಬಗ್ಗೆ ಬಿಜೆಪಿ (BJP) ಅಧ್ಯಕ್ಷ ಜೆ.ಪಿ. ನಡ್ಡಾ(JP Nadda) ಇತ್ತೀಚೆಗೆ ಮಾಹಿತಿ ಹಂಚಿಕೊಂಡ ಬಳಿಕ ಶುಕ್ರವಾರ ಕಾಂಗ್ರೆಸ್ ಸಂಸದ ಮಣಿಕ್ಕಂ ಠಾಗೋರ್ ಕಾಮಗಾರಿ ಸ್ಥಳಕ್ಕೆ ತೆರಳಿದ ವಿವರಗಳನ್ನು ನೀಡಿ ಚಿತ್ರಗಳನ್ನೂ ಟ್ವೀಟ್ ಮಾಡಿ ಆಸ್ಪತ್ರೆ ಕಟ್ಟಡ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ತಮಿಳುನಾಡು ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿ ಬಿಜೆಪಿ ಮುಖ್ಯಸ್ಥರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ ಎಂದು hindustantimes.com ವರದಿ ಮಾಡಿದೆ.

ತಮಿಳುನಾಡಿಗೆ ಭೇಟಿ ನೀಡಿದ್ದ ನಡ್ಡಾ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿ "ಏಮ್ಸ್ ಯೋಜನೆಗೆ ರೂ. 1,264 ಕೋಟಿ ಮಂಜೂರಾಗಿದೆ ಎಂದು ಹೇಳಲು ಸಂತೋಷಿಸುತ್ತೇನೆ. ಇಂದು ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರ ಪ್ರಧಾನಿ ಅದನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಹೆಚ್ಚುವರಿ ರೂ. 164 ಕೋಟಿ ಮಂಜೂರುಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ 750 ಹಾಸಿಗೆಗಳು ಹಾಗೂ ಇವುಗಳ ಪೈಕಿ 250 ಐಸಿಯು ಬೆಡ್‍ಗಳು,'' ಎಂದೂ ನಡ್ಡಾ ಹೇಳಿದ್ದರು.

ಆದರೆ ನಡ್ಡಾ ಮಾತುಗಳನ್ನು ಒಪ್ಪದ ಕಾಂಗ್ರೆಸ್ ಸಂಸದ ಠಾಗೋರ್ ಶುಕ್ರವಾರ ಸರಣಿ ಟ್ವೀಟ್ ಮಾಡಿದ್ದಾರೆ.

"ಪ್ರೀತಿಯ ನಡ್ಡಾಜೀ, ಮಧುರೈ ಏಮ್ಸ್ ಶೇ 95 ಕಾಮಗಾರಿ ಪೂರ್ಣಗೊಂಡಿದ್ದಕ್ಕಾಗಿ ಧನ್ಯವಾದಗಳು. ನಾನು ತೊಪ್ಪೂರು ಸೈಟ್‍ನಲ್ಲಿ ಒಂದು ಗಂಟೆ ಹುಡುಕಿದೆ ಆದರೆ ಏನೂ ದೊರೆಯಲಿಲ್ಲ, ಯಾರೋ ಕಟ್ಟಡವನ್ನು ಕದ್ದಿರಬೇಕು,'' ಎಂದು ಅವರು ಬರೆದಿದ್ದಾರಲ್ಲದೆ ತಮ್ಮೊಂದಿಗೆ ಮಧುರೈ ಸಂಸದ ಸು ವೆಂಕಟೇಶನ್ ಕೂಡ ಇದ್ದರು ಎಂದಿದ್ದಾರೆ.

"ನಡ್ಡಾ ಅವರು ಮಧುರೈನಲ್ಲಿ ಮಾತನಾಡಿದ್ದಾರೆ ಹಾಗೂ ಶೇ. 95ರಷ್ಟು ಕಾಮಗಾರಿ ಮುಗಿದಿದೆ ಎಂದಿದ್ದಾರೆ. ಈ ರೀತಿ ಕಾಮಗಾರಿ ಪೂರ್ಣದ ಬಗ್ಗೆ ಸುಳ್ಳು ಹೇಳಿರುವುದು ಅಚ್ಚರಿ ಮೂಡಿಸಿದೆ. ಇದು ಅವರು ತಮಿಳುನಾಡಿನ ಜನರಿಗೆ ವಂಚಿಸುವ ವಿಧಾನ,'' ಎಂದು ವೀಡಿಯೋವೊಂದರಲ್ಲಿ ಠಾಗೋರ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣ ತಿರುಪತಿ, "ಅವರು (ನಡ್ಡಾ) ಕಾಮಗಾರಿ ಆರಂಭ ನಿಟ್ಟಿನ ಶೇ. 95ರಷ್ಟು ಕೆಲಸ ಪೂರ್ಣಗೊಂಡಿದೆ, ನಿರ್ಮಾಣ ಶೀಘ್ರ ಆರಂಭಗೊಳ್ಳಲಿದೆ,'' ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಯುವತಿ ಕೊಲೆ ಕೃತ್ಯದಲ್ಲಿ ಬಂಧಿತ ಬಿಜೆಪಿ ನಾಯಕನ ಪುತ್ರನ ರೆಸಾರ್ಟ್ ಧ್ವಂಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News