ಲೂಟಿ ರವಿ ಎಂದು ಕರೆಯುವರಿಗೆ ಮುಂದಿನ ದಿನಗಳಲ್ಲಿ ಜನರಿಂದ ತಕ್ಕಪಾಠ: ಸಿ.ಟಿ ರವಿ

Update: 2022-09-24 15:02 GMT

ಚಿಕ್ಕಮಗಳೂರು: 'ಚಿಕ್ಕಮಗಳೂರು ಜಿಲ್ಲೆ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈಗ ಬಿಜೆಪಿಯ ಭದ್ರಕೋಟೆಯಾಗಿದೆ. ಆ ಕೋಟೆಯನ್ನು ಛಿದ್ರ ಮಾಡಿದ್ದಕ್ಕೆ ಕಾಂಗ್ರೆಸ್‍ನವರು ಹತಾಶೆಯಿಂದ ಲೂಟಿ ರವಿ ಅಂತ ಕರೆಯುತ್ತಿದ್ದಾರೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. 

ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಗರ ಮತ್ತು ಗ್ರಾಮಾಂತರ ಬಿಜೆಪಿ ಹಿಂದುಳಿದ ವರ್ಗಗಳ ಮಂಡಳದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ''ನಾನು ಯಾರ ಮನೆ, ಆಸ್ತಿಯನ್ನೂ ಲೂಟಿ ಮಾಡಿಲ್ಲ, ಅಭಿವೃದ್ಧಿ ಕೆಲಸ ಮಾಡಿ ಮತದಾರರ ಮನಸನ್ನು ಪ್ರೀತಿಯಿಂದ ಲೂಟಿ ಮಾಡಿದ್ದೇನೆ. ಲೂಟಿ ರವಿ ಎಂದು ಕರೆಯುವರಿಗೆ ಜನರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತಾರೆ'' ಎಂದು ಹೇಳಿದರು. 

''ಮತಬ್ಯಾಂಕ್‍ಗಾಗಿ ಬಿಜೆಪಿ ಪಕ್ಷ ಜಾತಿ ಜಾತಿಗಳನ್ನು ಒಡೆಯುವ ಕೆಲಸ ಮಾಡಲಿಲ್ಲ. ಜಾತಿ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದೇವೆ. ಕೆಲವು ರಾಜಕೀಯ ಪಕ್ಷಗಳಿಗೆ ಜಾತಿ, ಧರ್ಮಗಳನ್ನು ಒಡೆದಾಡಿ ಅಧಿಕಾರ ಹಿಡಿಯುವುದೇ ಕೆಲಸವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಆ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದಾರೆ. ಪಕ್ಷಕ್ಕಾಗಿ ಯಾರು ಹೆಚ್ಚು ಶ್ರಮಿಸಿದ್ದಾರೋ ಅಂತವರಿಗೆ ಬಿಜೆಪಿ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News