ಕಮಿಷನ್ ನುಂಗಿದ್ದ ಸಿದ್ದರಾಮಯ್ಯ ಸಿಎಂ ಮನೆ ಮುಂದೆ ಪೋಸ್ಟರ್ ಅಂಟಿಸುವುದೇ ಹಾಸ್ಯಾಸ್ಪದ: ನಳಿನ್ ಕುಮಾರ್ ಕಟೀಲ್

Update: 2022-09-24 15:06 GMT

ಬೆಂಗಳೂರು, ಸೆ.24:‘ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿರುವ ಕೇಸಿನಲ್ಲಿ ಈ.ಡಿ.ಯಿಂದ ವಿಚಾರಣೆಗೊಳಗಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಆಗಿದ್ದಾಗ ಅರ್ಕಾವತಿ ಅಕ್ರಮದಿಂದ ಹಿಡಿದು ಪಡಿತರ ಅಕ್ಕಿ, ಗೋಧಿ ತನಕ ಕಮಿಷನ್ ನುಂಗಿದ್ದ ಸಿದ್ದರಾಮಯ್ಯ ಭ್ರಷ್ಟಾಚಾರದ ವಿಷಯದಲ್ಲಿ ಸಿಎಂ ಮನೆ ಮುಂದೆ ಪೋಸ್ಟರ್ ಅಂಟಿಸುವುದೇ ಹಾಸ್ಯಾಸ್ಪದ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಸಿದ್ದರಾಮಯ್ಯ ಸಿಎಂ ಆಗಿದ್ದಗ ನಡೆದ ಹಗರಣ, ಭ್ರಷ್ಟಾಚಾರಗಳ ತನಿಖೆಯಾದರೆ ಅವರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಜನಸಾಮಾನ್ಯರಿಗೂ ಗೊತ್ತಿದೆ. ಆದರೆ, ಕಾನೂನು ಪದವೀಧರರಾಗಿರುವ ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿಲ್ಲದೆ ಇರುವುದು ಅವರ ಜಾಣ ಮರೆವೊ ಅಥವಾ ಕಾನೂನಿನ ಅಜ್ಞಾನವೋ ಎಂದು ಅವರೇ ಹೇಳಬೇಕು' ಎಂದು ತಿಳಿಸಿದ್ದಾರೆ.

‘ಸಿಎಂ ಆಗಿದ್ದಾಗ ಶಿಕ್ಷಕರ ನೇಮಕದಿಂದ ಹಿಡಿದು ಕಸ ವಿಲೇವಾರಿವರೆಗೆ ಎಲ್ಲದರಲ್ಲಿಯೂ ಭ್ರಷ್ಟಾಚಾರ ಮಾಡಿ, ಕಾಂಗ್ರೆಸ್ ಹೈಕಮಾಂಡ್‍ಗೆ ಒಂದು ಸಾವಿರ ಕೋಟಿ ರೂಪಾಯಿ ಕಪ್ಪ ಕೊಡಲು ನಮ್ಮ ರಾಜ್ಯವನ್ನೆ ಲೂಟಿ ಮಾಡಿದ ಸಿದ್ದರಾಮಯ್ಯ. ಭ್ರಷ್ಟಾಚಾರ ಪ್ರಕರಣದಲ್ಲಿ ತಿಹಾರ್ ಜೈಲು ಶಿಕ್ಷೆ ಅನುಭವಿಸಿ, ಕೃಷಿ ಮೂಲದಿಂದ ಸಾವಿರಾರು ಕೋಟಿ ರೂ.ದುಡಿದೆ ಎಂದು ಬ್ರಹ್ಮಾಂಡ ಸುಳ್ಳು ಹೇಳಿ, ಭೂ ಕಬಳಿಕೆ ಮತ್ತು ಗಣಿಗಾರಿಕೆಯಲ್ಲಿ ಒಂದು ಸಾವಿರ ಕೋಟಿ ರೂ.ಕಬಳಿಸಿರುವ ಡಿಕೆಶಿ ಮತ್ತು ಮಲಪ್ರಭಾ ಯೋಜನೆಯಿಂದ 420ಕೋಟಿ ರೂ. ಭ್ರಷ್ಟಾಚಾರ ಮಾಡಿದ ಎಂ.ಬಿ.ಪಾಟೀಲ್ ಕರ್ನಾಟಕದಲ್ಲಿ ಭ್ರಷ್ಟಾಚಾರ ಎನ್ನುವ ಶಬ್ಧಕ್ಕೆ ಪರ್ಯಾಯವಾಗಿದ್ದಾರೆ' ಎಂದು ಅವರು ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News