ಮಡಿಕೇರಿ: ಹುಲಿ ದಾಳಿಗೆ ವ್ಯಕ್ತಿ ಬಲಿ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Update: 2022-09-24 15:38 GMT
ಸಾಂದರ್ಭಿಕ ಚಿತ್ರ (PHOTO- PTI

ಮಡಿಕೇರಿ ಸೆ.24 : ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬ ಮೃತಟ್ಟಿರುವ ಘಟನೆ ಕೋತೂರು ಗ್ರಾಮದಲ್ಲಿ ನಡೆದಿದೆ.

ಬೊಮ್ಮಡ ಹಾಡಿ ನಿವಾಸಿ ಜೆ.ಕೆ.ಕೃಷ್ಣದಾಸ (52) ಎಂಬುವವರೇ ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ

ಸೆ.23ರಂದು ಇದೇ ಸ್ಥಳದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದು, ಇಂದು ಹಸುವಿನ ಮೃತ ದೇಹವನ್ನು ಹೂಳಲು ನಾಲ್ವರು ತಯಾರಿ ನಡೆಸುತ್ತಿದ್ದಾಗ ಹುಲಿ ಕೃಷ್ಣದಾಸನ ಮೇಲೆರಗಿದೆ ಎಂದು ಹೇಳಲಾಗಿದೆ. 

ಕೋತೂರುವಿನ ಚೈನ್‍ಗೇಟ್ ಬಳಿ ಹುಲಿದಾಳಿ ಪರಿಣಾಮ ಜೆ.ಕೆ.ಕೃಷ್ಣದಾಸ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಘಟನೆಯಿಂದ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳಿಗೆ ಜೀವ ಭೀತಿ ಕಾಡುತ್ತಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯ ಮತ್ತು ಹುಲಿ ಹಾವಳಿ ತಡೆಗೆ ಇಲಾಖೆ ಕ್ರಮ ಕೈಗೊಳ್ಳದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ನಾಗರಹೊಳೆ ಅಭಯಾರಣ್ಯವಿದ್ದು, ಅರಣ್ಯದಿಂದ ಹೊರ ಬಂದ ಹುಲಿ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಮೃತ ಕಾರ್ಮಿಕ ದಾಸ ಅವರ ಮೃತದೇಹವನ್ನು ಕಾನೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮೃತ ದೇಹದ ಪರಿಶೀಲನೆ ನಡೆಸಿದ ಸಂದರ್ಭ ಪಕ್ಕೆಲುಬು ಭಾಗದಲ್ಲಿ ಆಳವಾಗಿ ಹುಲಿ ಕಚ್ಚಿರುವ ಗುರುತುಗಳು ಕಂಡು ಬಂದಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವಹಾನಿ ಮಾಡಿರುವ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಿರಾಜಪೇಟೆ: ಹಸುಗಳನ್ನು ಬಲಿ ಪಡೆದ ಹುಲಿ ಸೆರೆಗೆ 4 ಸಾಕಾನೆಗಳೊಂದಿಗೆ ಕಾರ್ಯಾಚರಣೆಗಿಳಿದ ಅರಣ್ಯ ಅಧಿಕಾರಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News