ರೊಹಿಂಗ್ಯಾ ಬಿಕ್ಕಟ್ಟಿನಿಂದ ಬಾಂಗ್ಲಾದ ಭದ್ರತೆಯ ಮೇಲೆ ಪರಿಣಾಮ: ಪ್ರಧಾನಿ ಶೇಖ್ ಹಸೀನಾ

Update: 2022-09-24 15:45 GMT

ನ್ಯೂಯಾರ್ಕ್, ಸೆ.24: ದೇಶದಲ್ಲಿ ಕಿಕ್ಕಿರಿದ ಶಿಬಿರಗಳಲ್ಲಿ 1 ದಶಲಕ್ಷಕ್ಕೂ ಹೆಚ್ಚು ರೊಹಿಂಗ್ಯಾ ನಿರಾಶ್ರಿತರು ದೀರ್ಘ ಕಾಲ ಉಳಿಯುವುದು ದೇಶದ ಭದ್ರತೆ ಮತ್ತು ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಅವರ ಸ್ವಂತ ಸಮಸ್ಯೆಯ ಹೊರತಾಗಿ, ಅವರ ದೀರ್ಘಕಾಲದ ಉಪಸ್ಥಿತಿಯು ಬಾಂಗ್ಲಾದೇಶದ ಆರ್ಥಿಕತೆ, ಪರಿಸರ, ಭದ್ರತೆ ಹಾಗೂ ಸಾಮಾಜಿಕ ಆರ್ಥಿಕ ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದವರು ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ನಡೆದ ಇಂಡೊ-ಪೆಸಿಫಿಕ್ ವಲಯದ 24 ದೇಶಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ರೊಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ವಾಪಾಸು ಕಳುಹಿಸುವುದೇ ಈ ಬಿಕ್ಕಟ್ಟಿಗೆ ಇರುವ ಪರಿಹಾರವಾಗಿದೆ. ಆದರೆ ರೊಹಿಂಗ್ಯಾರನ್ನು ಬಲಪ್ರಯೋಗಿಸಿ ವಾಪಾಸು ಕಳುಹಿಸುವುದಿಲ್ಲ ಎಂದು ಹಸೀನಾ ಹೇಳಿದ್ದಾರೆ.

ಬಾಂಗ್ಲಾದೇಶದ ಸೇನೆ ಹಾಗೂ ಅಮೆರಿಕ ಜಂಟಿಯಾಗಿ ಈ ಸಮಾವೇಶ ಆಯೋಜಿಸಿದೆ. ಭಾಗವಹಿಸಿದ ದೇಶಗಳ ಪ್ರತಿನಿಧಿಗಳು, ವಿಪತ್ತು ನಿರ್ವಹಣೆ, ಬಹುರಾಷ್ಟ್ರೀಯ ಅಪರಾಧ, ಭದ್ರತಾ ಸಮಸ್ಯೆ, ಮಹಿಳಾ ಸಶಕ್ತೀಕರಣದ ಕುರಿತು ಚರ್ಚಿಸಲು ವೇದಿಕೆಯನ್ನು ಬಳಸಿಕೊಂಡರೆ, ಮ್ಯಾನ್ಮಾರ್‌ನಲ್ಲಿನ ಹಿಂಸಾಚಾರದಿಂದ ಭೀತಿಗೊಂಡು ಬಾಂಗ್ಲಾಕ್ಕೆ ಪಲಾಯನ ಮಾಡಿರುವ ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆಯನ್ನು ಬಾಂಗ್ಲಾದೇಶ ಸಮಾವೇಶದಲ್ಲಿ ಪ್ರಸ್ತಾವಿಸಿದೆ.

ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜಪಾನ್, ಇಂಡೊನೇಶ್ಯಾ, ಭಾರತ, ಚೀನಾ ಮತ್ತು ವಿಯೆಟ್ನಾಮ್‌ನ ಪ್ರತಿನಿಧಿಗಳು ಬಾಂಗ್ಲಾದ ರೊಹಿಂಗ್ಯಾ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಲಿದ್ದಾರೆ. ಪ್ರತಿನಿಧಿಗಳನ್ನು ಕಾಕ್ಸ್ ಬಝಾರ್ ಜಿಲ್ಲೆಯಲ್ಲಿರುವ ಶಿಬಿರಕ್ಕೆ ಕರೆದೊಯ್ದು ನಿರಾಶ್ರಿತರ ಬಿಕ್ಕಟ್ಟಿನ ಅಗಾಧತೆಯನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಬಾಂಗ್ಲಾದೇಶ ಸೇನೆಯ ಮುಖ್ಯಸ್ಥ ಜನರಲ್ ಎಸ್‌ಎಮ್ ಶಫಿಯುದ್ದೀನ್ ಆಹ್ಮದ್ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ 1 ಮಿಲಿಯಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರಿದ್ದಾರೆ.

ರೊಹಿಂಗ್ಯಾ ಬಿಕ್ಕಟ್ಟು ಈಗ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ್ದು ಈ ವಿಷಯದಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಮ್ಯಾನ್ಮಾರ್ ಸೇನಾಡಳಿತ ವಾದಿಸುತ್ತಿದೆ. ರೊಹಿಂಗ್ಯಾಗಳು ಹಾಗೂ ಮ್ಯಾನ್ಮಾರ್‌ನ ಎಲ್ಲಾ ಜನರಿಗೆ ನ್ಯಾಯವನ್ನು ದೊರಕಿಸಿಕೊಡಲು ಅಮೆರಿಕ ಬದ್ಧವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News